ADVERTISEMENT

ಶಿಕ್ಷಿತ ರಾಜಕಾರಣಿಗಳ ಅನರ್ಹತೆ: ಸುಪ್ರೀಂ ತೀರ್ಪು ವಿರುದ್ಧ ಪುನರ್ ಪರಿಶೀಲನಾ ಅರ್ಜಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 12:58 IST
Last Updated 3 ಆಗಸ್ಟ್ 2013, 12:58 IST

ನವದೆಹಲಿ (ಪಿಟಿಐ): ಶಿಕ್ಷೆಗೊಳಗಾದ ಸಂಸತ್ ಸದಸ್ಯರು ಮತ್ತು ಶಾಸಕರನ್ನು ಅನರ್ಹಗೊಳಿಸುವ ಮತ್ತು ಬಂಧಿತ ವ್ಯಕ್ತಿಗಳನ್ನು ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿಸುವ ಸುಪ್ರೀಂ ಕೋರ್ಟ್ ನ ಎರಡು ಮಹತ್ವದ ತೀರ್ಪುಗಳನ್ನು ಪುನರ್ ಪರಿಶೀಲಿಸುವಂತೆ ಕೋರಿ ಸುಪ್ರೀಂಕೋರ್ಟ್ ನಲ್ಲಿ ಮರುಪರಿಶೀಲನಾ ಅರ್ಜಿಗಳು ಸಲ್ಲಿಕೆಯಾಗಿವೆ. ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡ ಬೆನ್ನಲ್ಲೇ ಈ ಬೆಳವಣಿಗೆಯೂ ನಡೆದಿದೆ.

ಹರ್ಯಾಣ ಸ್ವತಂತ್ರ ಪಕ್ಷದ ಅಧ್ಯಕ್ಷ ರಮೇಶ್ ದಯಾಲ್ ಅವರು ಸಲ್ಲಿಸಿರುವ ಮೇಲ್ಮನವಿ ಅರ್ಜಿಗಳು ಜುಲೈ 10ರ ಈ ಎರಡು ತೀರ್ಪುಗಳನ್ನು ಪುನರ್ ಪರಿಶೀಲಿಸಬೇಕು ಎಂದು ಸುಪ್ರಂಕೋರ್ಟ್ ನ್ನು ಆಗ್ರಹಿಸಿವೆ.

ಸೆರೆಮನೆಯಲ್ಲಿ ಇರುವ ಅಥವಾ ಪೊಲೀಸ್ ವಶದಲ್ಲಿ ಇರುವ ವ್ಯಕ್ತಿ ಶಾಸನಸಭೆಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬುದಾಗಿ ತೀರ್ಪು ನೀಡುವ ಮೂಲಕ ಸುಪ್ರೀಂಕೋರ್ಟ್ ವಿಚಾರಣಾಧೀನ ಕೈದಿಗಳು ಸೆರೆಮನೆಯೊಳಗಿನಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸುವ ಯುಗಕ್ಕೆ ತೆರೆ ಎಳೆದಿತ್ತು. ಈ ತೀರ್ಪು ಮುಂಜಾಗರೂಕತಾ ಸ್ಥಾನಬದ್ಧತೆಯಲ್ಲಿರುವ ವ್ಯಕ್ತಿಗಳನ್ನು ಹೊರಗಿಟ್ಟಿತ್ತು.

ಇನ್ನೊಂದು ಮಹತ್ವದ ತೀರ್ಪಿನಲ್ಲಿ ಮೇಲಿನ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ ಎಂಬ ನೆಲೆಯಲ್ಲಿ ಶಿಕ್ಷೆಗೆ ಒಳಗಾದ ಶಾಸನ ಕರ್ತರನ್ನು ಅನರ್ಹಗೊಳಿಸದಂತೆ ಜನತಾ ಪ್ರಾತಿನಿಧ್ಯ ಕಾಯ್ದೆಯಲ್ಲಿ ರಕ್ಷಣೆ ಒದಗಿಸಿದ್ದ ವಿಧಿಯನ್ನು  ಸುಪ್ರೀಂಕೋರ್ಟ್ ರದ್ದು ಪಡಿಸಿತ್ತು.

ಎರಡೂ ತೀರ್ಪುಗಳನ್ನು ರಾಜಕಾರಣಿಗಳು ಪಕ್ಷ ಭೇದ ಮರೆತು ವಿರೋಧಿಸಿದ್ದರು. ಕೇಂದ್ರ ಸರ್ಕಾರ ಕೂಡಾ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳ ಬಗ್ಗೆ ಸುಳಿವು ನೀಡಿತ್ತು. ಹಾಲಿ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ  'ಶಾಸಕಾಂಗ ಪರಿಹಾರ' ಕಂಡುಕೊಳ್ಳುವ ಬಗ್ಗೆ ಪರಿಶೀಲಿಸುವುದಾಗಿಯೂ ಕೇಂದ್ರ ಸರ್ಕಾರ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.