ADVERTISEMENT

ಶಿಫಾರಸು ಜಾರಿಗೆ ಐಎನ್‌ಎಸ್ ವಿರೋಧ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 19:30 IST
Last Updated 6 ಜೂನ್ 2011, 19:30 IST

ನವದೆಹಲಿ : ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ವೇತನ ಆಯೋಗದ ಶಿಫಾರಸುಗಳನ್ನು ಒಪ್ಪಿಕೊಂಡರೆ ಅನೇಕ ಪತ್ರಿಕಾ ಸಂಸ್ಥೆಗಳು ಬಾಗಿಲು ಮುಚ್ಚುವ ಪರಿಸ್ಥಿತಿಗೆ ಬರಲಿವೆ ಎಂದು `ಭಾರತೀಯ ವೃತ್ತಪತ್ರಿಕಾ ಸಂಘ~ (ಐಎನ್‌ಎಸ್) ಕಳವಳ ವ್ಯಕ್ತಪಡಿಸಿದೆ.

ಸಣ್ಣ ಮತ್ತು ಮಧ್ಯಮ ಪತ್ರಿಕಾ ಸಂಸ್ಥೆಗಳಿಗೆ ಹೊಸ ವೇತನ ಕೊಡುವ ಶಕ್ತಿ ಇಲ್ಲ. ದೊಡ್ಡ ಸಂಸ್ಥೆಗಳಿಗೂ ಇದು ಕಷ್ಟಸಾಧ್ಯ. ಆಯೋಗದ ಶಿಫಾರಸು ಜಾರಿಯಾದರೆ ಪತ್ರಿಕಾ ಸಂಸ್ಥೆಗಳು ಪ್ರಕಟಣಾ ಚಟುವಟಿಕೆ ಸ್ಥಗಿತ ಮಾಡಬೇಕಾದ ಸಂದರ್ಭ ಎದುರಾಗಲಿದೆ ಎಂದು ತಿಳಿಸಿದೆ.

ದೇಶದ ಪ್ರಮುಖ ಸುದ್ದಿ ಸಂಸ್ಥೆ ಪಿಟಿಐ ಕೂಡಾ ವರದಿ ಜಾರಿ ಮಾಡದಂತೆ ಎಚ್ಚರಿಕೆ ನೀಡಿದೆ. ವರದಿ ಜಾರಿಯಾದರೆ ಸಿಗುತ್ತಿರುವ ಅತ್ಯಲ್ಪ ಲಾಭಕ್ಕೂ ಹೊಡೆತ ಬೀಳಲಿದೆ. ಅಲ್ಲದೆ, ಸಂಸ್ಥೆ ಸಂಕಷ್ಟಕ್ಕೆ ಸಿಕ್ಕಿಕೊಳ್ಳಲಿದೆ. ಈಗಾಗಲೇ ವೆಚ್ಚದ ಶೇ.60 ಭಾಗ ಸಂಬಳಕ್ಕೆ ಹೋಗುತ್ತಿದೆ. ದೇಶದ ಏಳು ಸಾವಿರ ದಿನಪತ್ರಿಕೆಗಳಲ್ಲಿ ಶೇ.5ರಷ್ಟು ಮಾತ್ರವೇ ಸಂಸ್ಥೆ ಸದಸ್ಯತ್ವ ಪಡೆದಿವೆ. ವರದಿ ಜಾರಿಯಾದರೆ ಇನ್ನಷ್ಟು ಸಂಸ್ಥೆಗಳು ಸದಸ್ಯತ್ವ ಬಿಡಬಹುದು ಎಂದು ಆತಂಕ ವ್ಯಕ್ತಪಡಿಸಿದೆ.

ಶಿಫಾರಸುಗಳನ್ನು `ಆನಂದ ಬಜಾರ್ ಪತ್ರಿಕಾ~ ಮತ್ತು`ಟೆಲಿಗ್ರಾಫ್~ ಪತ್ರಿಕೆಗಳ ಪ್ರಕಟಣಾ ಸಂಸ್ಥೆ `ಎಬಿಪಿ ಪ್ರೈ ಲಿ~. ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿವೆ.

ಕಾರ್ಯನಿರತ ಪತ್ರಕರ್ತರು ಮತ್ತು ಪತ್ರಿಕಾಲಯ ನೌಕರರ ಸೇವಾ ಮತ್ತು ಷರತ್ತು ಕಾಯ್ದೆ-1955 ಅನ್ನು ಕಾನೂನು ಬಾಹಿರ ಹಾಗೂ ಸಂವಿಧಾನಕ್ಕೆ ವಿರುದ್ಧ ಎಂದು ಘೋಷಣೆ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಈ ಹಿನ್ನೆಲೆಯಲ್ಲಿ ನ್ಯಾ. ಮಜಿಥಿಯಾ ವೇತನ ಆಯೋಗ ಹಾಗೂ ಅದರ ಶಿಫಾರಸುಗಳನ್ನು ಕಾನೂನಿಗೆ ವಿರುದ್ಧವಾ ದುದು ಮತ್ತು ಅಸಾಂವಿಧಾನಿಕ ಎಂದು ತೀರ್ಮಾನಿಸುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಮಹತ್ವದ ಬೇರಾವ ಉದ್ಯಮಗಳಿಗೂ `ವೇತನ ಆಯೋಗದ ಕಟ್ಟುಪಾಡು~ಗಳಡಿ ಸಂಬಳ ಕೊಡಬೇಕಾದ ಪರಿಸ್ಥಿತಿ ಇಲ್ಲ. ಇದು ತಾರತಮ್ಯಕ್ಕೆ ಕಾರಣವಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಸಂವಿಧಾನದ ಕಲಂ 19 (1) (ಎ) `ಪತ್ರಿಕಾ ಸ್ವಾತಂತ್ರ್ಯ~ಕ್ಕೆ ಸಂಬಂಧಿಸಿದೆ. ಇದು ಪತ್ರಿಕೆಗಳ ಮಾಲೀಕರಿಗೂ ಹೊರೆಯಾಗದ ಮತ್ತು ಪ್ರತಿಬಂಧಕ ನಿರ್ಬಂಧಗಳಿಲ್ಲದೆ ಸುದ್ದಿ ಪ್ರಕಟಿಸುವ ಕರ್ತವ್ಯ ನಿರ್ವಹಿಸುವ ಹಕ್ಕನ್ನು ನೀಡಿದೆ ಎಂದು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.

1955ರ ಕಾಯ್ದೆ ಸಂವಿಧಾನದತ್ತವಾಗಿ ಕೊಡಮಾಡಿ ರುವ ಮೂಲಭೂತ ಹಕ್ಕನ್ನು ಮೊಟಕುಗೊಳಿಸುವ ಮೂಲಕ ಅರ್ಜಿದಾರರು ಪತ್ರಿಕಾ ವ್ಯವಹಾರ ನಡೆಸುವುದಕ್ಕೆ ಅಡ್ಡಿ ಉಂಟು ಮಾಡುತ್ತಿದೆ ಎಂದು ಉಲ್ಲೇಖಿಸಲಾಗಿದೆ.

ಪತ್ರಿಕಾ ಸ್ವಾತಂತ್ರ್ಯ ತನಗೆ ಸರಿಕಂಡಿದ್ದನ್ನು ಬರೆಯುವ ಅಥವಾ ಪ್ರಕಟಿಸುವುದಕ್ಕೆ ಮಾತ್ರ ಸೀಮಿತವಲ್ಲ. ಇದು ಪತ್ರಿಕಾ ವ್ಯವಹಾರ ನಡೆಸುವ ಸ್ವಾತಂತ್ರ್ಯವನ್ನು ಒಳಗೊಂಡಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಕಾಯ್ದೆಯ ಸೆಕ್ಷನ್ 8 ಮತ್ತು 9 ಅಸ್ಪಷ್ಟವಾಗಿದ್ದು, ವೇತನ ನಿರ್ಧಾರಕ್ಕೆ ಸಂಬಂಧಿಸಿದಂತೆ ಮಿತಿಮೀರಿದ ಅಧಿಕಾರವನ್ನು ಆಯೋಗಕ್ಕೆ ನೀಡಿದೆ. ಇದು ಪತ್ರಿಕಾ ಮಾಲೀಕರಿಗೆ ಸಂವಿಧಾನದ 19 (1) (ಜಿ) ಅಡಿ ದತ್ತವಾಗಿರುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ. ಮಜಿಥಿಯಾ ಆಯೋಗ ನಿವೃತ್ತಿ ವಯಸ್ಸು, ಪಿಂಚಣಿ ಹಾಗೂ ಬಡ್ತಿ ಕುರಿತು ಪ್ರಸ್ತಾಪಿಸುವ ಮೂಲಕ ವ್ಯಾಪ್ತಿ ಮೀರಿ ವರ್ತಿಸಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಅರ್ಜಿಯನ್ನು ಅಂಗೀಕರಿಸಿರುವ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ವಿವಿಧ ಪತ್ರಿಕಾ ನೌಕರರ ಸಂಘಗಳಿಗೆ ನೋಟಿಸ್ ಜಾರಿ ಮಾಡಿದೆ. ಅನಿವಾರ್ಯ ಪರಿಸ್ಥಿತಿ ಎದುರಾದರೆ ನ್ಯಾಯಾಲಯದ ರಜೆ ಕಾಲದ ಪೀಠಕ್ಕೆ ಮನವಿ ಮಾಡಬಹುದಾದ ಸ್ವಾತಂತ್ರ್ಯವನ್ನು ಅರ್ಜಿದಾರರಿಗೆ ಕೊಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.