ADVERTISEMENT

ಶಿಯಾ ಮಂಡಳಿಯಿಂದ ರಾಮನ ಪ್ರತಿಮೆಗೆ ಬೆಳ್ಳಿಯ ಬಾಣ

ಪಿಟಿಐ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST

ಲಖನೌ: ಸರಯೂ ನದಿಯ ತಟದಲ್ಲಿ ನಿರ್ಮಾಣವಾಗಲಿರುವ ರಾಮನ ಪ್ರತಿಮೆಗೆ 10 ಬೆಳ್ಳಿಯ ಬಾಣಗಳನ್ನು ನೀಡುವುದಾಗಿ ಉತ್ತರ ಪ್ರದೇಶದ ಶಿಯಾ ಕೇಂದ್ರೀಯ ವಕ್ಫ್‌ ಮಂಡಳಿ ಹೇಳಿದೆ.

‘ಉತ್ತರ ಪ್ರದೇಶ ಸರ್ಕಾರ ರಾಮನ ಬೃಹತ್‌ ಪ್ರತಿಮೆ ಸ್ಥಾಪನೆಗೆ ಮುಂದಾಗಿರುವುದು ಶ್ಲಾಘನೀಯ. ರಾಮನ ಪ್ರತಿಮೆಯ ಮೂಲಕ ಉತ್ತರಪ್ರದೇಶ ವಿಶ್ವ ಭೂಪಟದಲ್ಲಿ ಸ್ಥಾನ ಪಡೆಯಲಿದೆ’ ಎಂದು ವಕ್ಫ್‌ ಮಂಡಳಿಯ ಅಧ್ಯಕ್ಷ ವಾಸಿಂ ರಿಜ್ವಿ ಹೇಳಿದ್ದಾರೆ.

‘ಅಯೋಧ್ಯೆಯಲ್ಲಿರುವ ದೇವಸ್ಥಾನಗಳನ್ನು ಆ ಭಾಗದ ನವಾಬರು ಗೌರವದಿಂದ ಕಾಣುತ್ತಿದ್ದರು. ಅಯೋಧ್ಯೆಯ ಕೇಂದ್ರ ಭಾಗದಲ್ಲಿರುವ ಹನುಮಾನ್‌ ಗರ್ಹಿಗೆ ನವಾಬ್ ಶುಜಾ– ಉದ್‌–ದೌಲ 1739ರಲ್ಲಿ ಭೂಮಿಯನ್ನು ದಾನವಾಗಿ ನೀಡಿದ್ದರು. ದೇವಸ್ಥಾನ ನಿರ್ಮಾಣಕ್ಕೆ ನವಾಬ್‌ ಅಸಿಫ್‌– ಉದ್‌– ದೌಲ ದೇಣಿಗೆ ನೀಡಿದ್ದರು’ ಎಂದು ಅವರು ಯೋಗಿ ಆದಿತ್ಯನಾಥ ಅವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಸರಯೂ ನದಿ ತೀರದಲ್ಲಿ 100 ಮೀಟರ್ ಎತ್ತರದ ರಾಮನ ಪ್ರತಿಮೆ ನಿರ್ಮಾಣ ಮಾಡುವ ಆದಿತ್ಯನಾಥ ಅವರ ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿರುವ ಅವರು, ಆ ಜಮೀನು ಸುನ್ನಿ ವಕ್ಫ್‌ ಮಂಡಳಿಗೆ ಸೇರಿದ್ದಲ್ಲ. ಶಿಯಾ ಮಂಡಳಿಗೆ ಸೇರಿದೆ ಎಂದು ಹೇಳಿದ್ದಾರೆ.

ಬಾಬರಿ ಮಸೀದಿ–ರಾಮಜನ್ಮಭೂಮಿ ವಿವಾದ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿದೆ. ಈ ಪ್ರಕರಣದಲ್ಲಿ ಶಿಯಾ ವಕ್ಫ್‌ ಮಂಡಳಿ ಕೂಡಾ ಪ್ರತಿವಾದಿಯಾಗಿದೆ. ಅಯೋಧ್ಯೆಯ ವಿವಾದಿತ 2.73 ಎಕರೆ ಜಮೀನಿನಿಂದ ನಿರ್ಧಿಷ್ಟ ದೂರದಲ್ಲಿ ಮಸೀದಿ ನಿರ್ಮಾಣಕ್ಕೆ ಅಭ್ಯಂತರವಿಲ್ಲ ಎಂದು ಶಿಯಾ ವಕ್ಫ್‌ ಮಂಡಳಿ ಈ ಮೊದಲೇ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.