ADVERTISEMENT

ಶಿವಾನಿ ಭಟ್ನಾಗರ್ ಕೊಲೆ ಪ್ರಕರಣ: ಮೂವರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ನವದೆಹಲಿ, (ಪಿಟಿಐ): ಭಾರಿ ವಿವಾದ ಎಬ್ಬಿಸಿದ್ದ ಪತ್ರಕರ್ತೆ ಶಿವಾನಿ ಭಟ್ನಾಗರ್ ಕೊಲೆ ಪ್ರಕರಣದ ಆರೋಪಿ, ಮಾಜಿ ಐಪಿಎಸ್ ಅಧಿಕಾರಿ ರವಿಕಾಂತ್ ಶರ್ಮ ಮತ್ತು ಇತರ ಇಬ್ಬರನ್ನು ಬುಧವಾರ ದೆಹಲಿ ಹೈಕೋರ್ಟ್ ನಿರ್ದೋಷಿಗಳು ಎಂದು ಬಿಡುಗಡೆ ಮಾಡಿದೆ.

1999ರಲ್ಲಿ ನಡೆದ ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಪ್ರದೀಪ್ ಶರ್ಮಗೆ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಕೋರ್ಟ್ ಎತ್ತಿಹಿಡಿದಿದೆ.

`ಇಂಡಿಯನ್ ಎಕ್ಸ್‌ಪ್ರೆಸ್~ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದ ಶಿವಾನಿ ಅವರನ್ನು ಕೊಲೆ ಮಾಡಿದ ಆಪಾದನೆಗಾಗಿ ಪೊಲೀಸ್ ಅಧಿಕಾರಿ ಆರ್.ಕೆ.ಶರ್ಮ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಶರ್ಮ ಅವರ ಜತೆಗೆ ಶ್ರೀ ಭಗವಾನ್ ಶರ್ಮ ಮತ್ತು ಸತ್ಯಪ್ರಕಾಶ್ ಅವರನ್ನೂ ಸಂಶಯದ ಲಾಭದ ಆಧಾರದ ಮೇಲೆ ನಿರ್ದೋಷಿಗಳು ಎಂದು ನ್ಯಾಯಮೂರ್ತಿ ಬಿ.ಡಿ.ಅಹಮದ್ ಹಾಗೂ ಮನಮೋಹನ್ ಸಿಂಗ್ ಅವರನ್ನು ಒಳಗೊಂಡ ನ್ಯಾಯಪೀಠ ಬಿಡುಗಡೆ ಮಾಡಿದೆ. ಶಿಕ್ಷೆಗೆ ಒಳಗಾಗಿದ್ದ ನಾಲ್ವರೂ ತಮಗೆ ವಿಧಿಸಿದ್ದ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ADVERTISEMENT

1999ರ ಜನವರಿ 23ರಂದು ದೆಹಲಿಯ ನವಕುಂಜ್ ಅಪಾರ್ಟ್‌ಮೆಂಟ್‌ನಲ್ಲಿ ಶಿವಾನಿ ಅವರ ಕೊಲೆಯಾಗಿತ್ತು. ಪ್ರಧಾನಿ ಕಾರ್ಯಾಲಯದಲ್ಲಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ರವಿಕಾಂತ್ ಶರ್ಮ ಸೇರಿದಂತೆ ನಾಲ್ಕು ಮಂದಿಗೆ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಈ ಪ್ರಕರಣದ ಇತರ ಆಪಾದಿತರಾಗಿದ್ದ ದೇವ್‌ಪ್ರಕಾಶ್ ಶರ್ಮ ಮತ್ತು ವೇದ್ ಅಲಿಯಾಸ್ ಕಾಳು ಅವರನ್ನು ಬಿಡುಗಡೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.