ADVERTISEMENT

ಶೀಲ ರಕ್ಷಣೆಗಾಗಿ ಕೊಲೆ ಅಪರಾಧವಲ್ಲ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 19:30 IST
Last Updated 14 ಅಕ್ಟೋಬರ್ 2012, 19:30 IST

ಚೆನ್ನೈ:  `ಶೀಲ ರಕ್ಷಣೆಗಾಗಿ ಮಹಿಳೆಯರು ಕೊಲೆ ಮಾಡಿದರೆ ಅದು ಅಪರಾಧವಲ್ಲ~ ಎಂದು ಹೇಳಿರುವ ಮದ್ರಾಸ್ ಹೈಕೋರ್ಟ್, ಕಾಲೇಜು ವಿದ್ಯಾರ್ಥಿನಿಯೊಬ್ಬರ ಮೇಲೆ ಹೊರಿಸಲಾಗಿದ್ದ ಕೊಲೆ ಆರೋಪವನ್ನು ತಳ್ಳಿ ಹಾಕುವ ಮೂಲಕ ಐತಿಹಾಸಿಕ ತೀರ್ಪು ನೀಡಿದೆ.

ತನ್ನ ತಂದೆಯಿಂದ ಅತ್ಯಾಚಾರ ಯತ್ನಕ್ಕೆ ಒಳಗಾದ ವಿದ್ಯಾರ್ಥಿಯೊಬ್ಬಳು, ಶೀಲ ಹಾಗೂ ಆತ್ಮರಕ್ಷಣೆಗಾಗಿ ಕೈಗೆ ಸಿಕ್ಕ ಆಯುಧದಿಂದ ಆತನನ್ನು ಕೊಲೆ ಮಾಡಿದ್ದಾಳೆ. ಮಹಿಳೆಯೊಬ್ಬಳು ಇಂಥ ಸನ್ನಿವೇಶದಲ್ಲಿ ಸಿಕ್ಕಿಕೊಂಡಾಗ, ರಕ್ಷಣೆಗಾಗಿ ಮಾಡುವ ಕೆಲಸವನ್ನೇ ಈಕೆಯೂ ಮಾಡಿದ್ದಾಳೆ~ ಎಂದು ಕೋರ್ಟ್ ತನ್ನ ತೀರ್ಪನ್ನು ಸಮರ್ಥಿಸಿಕೊಂಡಿದೆ. 

`80 ವರ್ಷಗಳ ಹಿಂದೆ ರಾಷ್ಟ್ರಪಿತ ಮಹಾತ್ಮಗಾಂಧಿಯವರು ಹೇಳಿರುವ ಮಾರ್ಗವನ್ನೇ ಆಕೆ ತನ್ನ ಆತ್ಮರಕ್ಷಣೆಗಾಗಿ ಅನುಸರಿಸಿದ್ದಾಳೆ~ ಎಂದು ನ್ಯಾಯಮೂರ್ತಿ ಎಸ್. ನಾಗಮುತ್ತು ತೀರ್ಪಿನಲ್ಲಿ ವಿವರಿಸಿದ್ದಾರೆ.

ಪ್ರಕರಣದ ವಿವರ: ಮೂಲತಃ ಕನ್ಯಾಕುಮಾರಿ ಜಿಲ್ಲೆಯ ನಾಗರಕೊಯಿಲ್‌ನ ಬಿಎಸ್‌ಸಿ 2ನೇ ವರ್ಷದ ಕಂಪ್ಯೂಟರ್ ಸೈನ್ಸ್ ಕೋರ್ಸ್ ಓದುತ್ತಿದ್ದ 19 ವರ್ಷದ ವಿದ್ಯಾರ್ಥಿನಿ, ತನ್ನ ತಂದೆ ಹಾಗೂ ಸಹೋದರನೊಂದಿಗೆ ಉಪನಗರದ ಮಂಗಡುವಿನಲ್ಲಿ ವಾಸವಾಗಿದ್ದಳು. ಈಕೆಯ ಸಹೋದರ ಆಂಟನಿ ಸೆಲ್ವನ್ ಚೆನ್ನೈನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾನೆ.

ಈಕೆಯ ಅಪ್ಪ ಮದ್ಯವ್ಯಸನಿ. ಪ್ರತಿ ದಿನ ಕುಡಿದು ಬಂದು ಮನೆಯಲ್ಲಿ ಮೃಗದಂತೆ ವರ್ತಿಸುತ್ತಿದ್ದ. 2011ರ ಮೇ ತಿಂಗಳಿನಲ್ಲಿ ಎಂದಿನಂತೆ  ಅಪ್ಪ ವಿಪರೀತವಾಗಿ ಕುಡಿದು ಮಧ್ಯರಾತ್ರಿ ಒಂದು ಗಂಟೆಗೆ ಮನೆಗೆ ಬಂದ. ಮನೆಯಲ್ಲಿ ಏಕಾಂಗಿಯಾಗಿದ್ದ ಮಗಳ ಮೇಲೆ  ಅತ್ಯಾಚಾರಕ್ಕೆ ಯತ್ನಿಸಿದ. `ನನ್ನ ಶೀಲ ಹಾಳು ಮಾಡಬೇಡ~ ಎಂದೆಲ್ಲ ಮಗಳು ಬೇಡಿಕೊಂಡರೂ, ತನ್ನ ದುಷ್ಕೃತ್ಯವನ್ನು ಆತ ಮುಂದುವರಿಸಿದ್ದರಿಂದ ಯುವತಿ ತನ್ನ ಶೀಲ ರಕ್ಷಣೆಗಾಗಿ ಕೈಗೆ ಸಿಕ್ಕ ಚಾಕುವಿನಿಂದ ಅಪ್ಪನನನ್ನು ಮೂರು ಬಾರಿ ಇರಿದು ಹತ್ಯೆ ಮಾಡಿದ್ದಳು.

ಘಟನೆಯಿಂದ ಗಾಬರಿಗೊಂಡ ಆ ಯುವತಿ ದುಃಖಿಸುತ್ತಲೇ ಮನೆಯಲ್ಲಿ ನಡೆದ ಘಟನೆಯನ್ನು ಕಚೇರಿಯಲ್ಲಿದ್ದ ತನ್ನ ಸಹೋದರನಿಗೆ ದೂರವಾಣಿ ಮೂಲಕ ವಿವರಿಸಿದಳು. ಆದರೆ ಆಕೆಯ ಸಹೋದರ ಆಂಟನಿ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತನ್ನ ಸಹೋದರಿಯ ವಿರುದ್ಧ ಕೊಲೆ ಆರೋಪದ ದೂರು ನೀಡಿದ್ದ. ದೂರಿನ ಮೇಲೆ ಆಕೆಯನ್ನು ಪೊಲೀಸರು ಬಂಧಿಸಿ, ಮೊಕದ್ದಮೆ ದಾಖಲಿಸಿಕೊಂಡರು.

ವಿಚಾರಣೆ ನಡೆಸಿದ ಪೊಲೀಸರು ಪ್ರಕರಣವನ್ನು ಸೆಷನ್ ನ್ಯಾಯಾಲಯದಲ್ಲಿ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ಆರಂಭವಾಗುವ ಮೊದಲೆ ಯುವತಿಯು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ `ತಾನು ಅಪರಾಧಿಯಲ್ಲ, ಆತ್ಮರಕ್ಷಣೆಗೆ ಹತ್ಯೆ ಮಾಡಿದ್ದೆ~ ಎಂದು ತಿಳಿಸಿದ್ದಳು.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ನಾಗಮುತ್ತು, `ಇಂಥ ಪರಿಸ್ಥಿತಿಯಲ್ಲಿ ಆಕೆ ಏನು ಮಾಡಬೇಕಿತ್ತು? ಇದೊಂದು ಅಸಹನೀಯ ದೌರ್ಜನ್ಯ. ಹಾಗಾಗಿ ಅರ್ಜಿದಾರಳು ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿರುವುದು ಸರಿಯಾದ ಕ್ರಮ.
 
ಒಂದು ಪಕ್ಷ ಆಕೆ ತಂದೆಯನ್ನು ಕೊಲ್ಲದಿದ್ದರೆ, ಅತ್ಯಾಚಾರಕ್ಕೆ ಬಲಿಯಾಗುತ್ತಿದ್ದಳು. ಇಲ್ಲವೇ ಸಾವನ್ನಪ್ಪುತ್ತಿದ್ದಳು. ಈ ಎಲ್ಲ ದೃಷ್ಟಿಕೋನದಿಂದ ಸೆಷನ್ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಸುವ ಅಗತ್ಯವಿಲ್ಲ~ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿರುವ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಅಝಗು ಅವರ ಕ್ರಮವನ್ನು ಶ್ಲಾಘಿಸಿರುವ ನ್ಯಾಯಮೂರ್ತಿಗಳು, `ಇವರೊಬ್ಬ ಅಪರೂಪದ ಅಧಿಕಾರಿ~ ಎಂದು ಶ್ಲಾಘನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.