ADVERTISEMENT

ಶೇ 80 ಮಂದಿಗೆ ಆಧಾರ್‌ ದತ್ತಾಂಶ ಸುರಕ್ಷತೆಯ ಕಳವಳ

ಪಿಟಿಐ
Published 31 ಮೇ 2018, 19:30 IST
Last Updated 31 ಮೇ 2018, 19:30 IST
ಶೇ 80 ಮಂದಿಗೆ ಆಧಾರ್‌ ದತ್ತಾಂಶ ಸುರಕ್ಷತೆಯ ಕಳವಳ
ಶೇ 80 ಮಂದಿಗೆ ಆಧಾರ್‌ ದತ್ತಾಂಶ ಸುರಕ್ಷತೆಯ ಕಳವಳ   

ನವದೆಹಲಿ: ತಮ್ಮ ಆಧಾರ್‌ ದತ್ತಾಂಶದ ಸುರಕ್ಷತೆಯ ಬಗ್ಗೆ ಜನರಲ್ಲಿ ಭಾರಿ ಕಳವಳ ಇದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ವೆಲೋಸಿಟಿ ಎಂಆರ್‌ ನಡೆಸಿದ ರಾಷ್ಟ್ರವ್ಯಾಪಿ ಸಮೀಕ್ಷೆ ಹೇಳಿದೆ.

ಬ್ರಿಟನ್‌ನ ದತ್ತಾಂಶ ವಿಶ್ಲೇಷಣಾ ಸಂಸ್ಥೆ ಕೇಂಬ್ರಿಜ್‌ ಅನಲಿಟಿಕಾ, ಫೇಸ್‌ಬುಕ್‌ ಖಾತೆಗಳಲ್ಲಿರುವ ಮಾಹಿತಿಯನ್ನು ಅಕ್ರಮವಾಗಿ ಬಳಸಿಕೊಂಡಿರುವುದು ಬಹಿರಂಗವಾದ ಬಳಿಕ ಭಾರತದ ಅಂತರ್ಜಾಲ ಬಳಕೆದಾರರಲ್ಲಿ ಹೆಚ್ಚು ಆತಂಕ ಸೃಷ್ಟಿಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ಜತೆಗೆ ಇದರಿಂದಾಗಿ, ದತ್ತಾಂಶ ಸುರಕ್ಷತೆಯ ಬಗ್ಗೆ ಹೆಚ್ಚಿನ ಜಾಗೃತಿಯೂ ಮೂಡಿದೆ.

ಅಂತರ್ಜಾಲದ ದತ್ತಾಂಶ ಸುರಕ್ಷತೆಗೆ ಸರ್ಕಾರದ ಮಧ್ಯಪ್ರವೇಶ ಅಗತ್ಯ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದವರು ಹೇಳಿದ್ದಾರೆ.

ADVERTISEMENT

‘ಅಂತರ್ಜಾಲ ಬಳಕೆದಾರರು ಪ್ರತಿ ಬಾರಿ ಕ್ಲಿಕ್ಕಿಸಿದಾಗಲೂ ಅಲ್ಲಿ ಅವರ ಹೆಜ್ಜೆ ಗುರುತು ಮೂಡುತ್ತದೆ. ವೈಯಕ್ತಿಕ ಮಾಹಿತಿ, ಹಣಕಾಸಿನ ವಿವರಗಳು, ಬಯೊಮೆಟ್ರಿಕ್‌ ದತ್ತಾಂಶಗಳೆಲ್ಲವೂ ಒಂದಲ್ಲ ಒಂದು ರೂಪದಲ್ಲಿ ವಿದೇಶಗಳಲ್ಲಿರುವ ಸರ್ವರ್‌ಗಳಿಗೆ ಲಭ್ಯವಾಗುತ್ತವೆ’ ಎಂದು ವೆಲೋಸಿಟಿ ಎಂಆರ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಸಲ್‌ ಶಾ ಹೇಳಿದ್ದಾರೆ.

ಹೊಸ ಸಾಮಾನ್ಯ ದತ್ತಾಂಶ ರಕ್ಷಣಾ ನಿಯಂತ್ರಣ (ಜಿಡಿಪಿಆರ್‌) ವ್ಯವಸ್ಥೆ ಜಾರಿಗೆ ಬರುತ್ತಿದ್ದು ಅಂತರ್ಜಾಲ ಕಂಪನಿಗಳು ತಮ್ಮ ಭದ್ರತಾ ನೀತಿಗಳನ್ನು ತುರ್ತಾಗಿ ಗಟ್ಟಿಗೊಳಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಜಾಲ ತಾಣಗಳು ಹಣಕಾಸು ವಹಿವಾಟುಗಳಿಗೆ ಸುರಕ್ಷಿತವಲ್ಲ ಎಂಬ ಭಾವನೆ ಜನರಲ್ಲಿ ಇದೆ. ಹಾಗಿದ್ದರೂ ಇಂತಹ ತಾಣಗಳ ಮೂಲಕ ವಹಿವಾಟು ನಡೆಸುವುದನ್ನು ಜನರು ನಿಲ್ಲಿಸಿಲ್ಲ. 46–60ರ ವಯೋಮಾನದವರು ಫೇಸ್‌ಬುಕ್‌ ಬಳಕೆಯನ್ನು ಹಿಂದಿನಂತೆಯೇ ಮುಂದುವರಿಸಿದ್ದಾರೆ ಎಂದು ಸಮೀಕ್ಷಾ ವರದಿ ಹೇಳಿದೆ.

* ಆಧಾರ್‌ ನೋಂದಣಿ ಮಾಡಿಕೊಂಡಿರುವವರ ಸಂಖ್ಯೆ – 121 ಕೋಟಿ

* 1900 ಕೋಟಿ ಬಾರಿ ಆಧಾರ್‌ ಸಂಖ್ಯೆಯನ್ನು ವಿವಿಧ ದೃಢೀಕರಣಗಳಿಗೆ ಬಳಸಲಾಗಿದೆ

ಸಮೀಕ್ಷೆ ನಡೆದ ನಗರಗಳು

ದೆಹಲಿ, ಕೋಲ್ಕತ್ತ, ಮುಂಬೈ, ಹೈದರಾಬಾದ್‌, ಬೆಂಗಳೂರು, ಚೆನ್ನೈ, ಅಹಮದಾಬಾದ್‌, ಪುಣೆ

* ಸಮೀಕ್ಷೆಯಲ್ಲಿ ಭಾಗವಹಿಸಿದವರ ಸಂಖ್ಯೆ – 5,800

* ಆಧಾರ್‌ ದತ್ತಾಂಶದ ಬಗ್ಗೆ ಕಳವಳ ಹೊಂದಿರುವವರ ಪ್ರಮಾಣ – 80%

* ಫೇಸ್‌ಬುಕ್‌ ಬಗ್ಗೆ ನಂಬಿಕೆ ಕಳೆದುಕೊಂಡವರ ಪ್ರಮಾಣ – 40%

* ಫೇಸ್‌ಬುಕ್‌ ಮೂಲಕ ಮಾಹಿತಿ ಹಂಚಿಕೆಯನ್ನು ಕಡಿಮೆ ಮಾದ್ದೇವೆ ಎಂದವರು – 33%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.