ADVERTISEMENT

ಶೇ 90ರಷ್ಟು ವಿಮಾನ ಸಂಚಾರ ರದ್ದು

​ಪ್ರಜಾವಾಣಿ ವಾರ್ತೆ
Published 1 ಮೇ 2011, 19:30 IST
Last Updated 1 ಮೇ 2011, 19:30 IST

ನವದೆಹಲಿ (ಪಿಟಿಐ/ಐಎಎನ್‌ಎಸ್): ಏರ್‌ಇಂಡಿಯಾದ ಸುಮಾರು 1600 ಪೈಲಟ್‌ಗಳು 5ನೇ ದಿನವಾದ ಭಾನುವಾರವೂ ಮುಷ್ಕರ ಮುಂದುವರಿಸಿದ್ದಾರೆ. ಇದರಿಂದ ಸಂಸ್ಥೆಯ ಆಂತರಿಕ ಸೇವೆಯ ಸುಮಾರು ಶೇಕಡಾ 90ರಷ್ಟು ವಿಮಾನಗಳ ಸಂಚಾರ ರದ್ದಾಯಿತು.

ಆದರೆ ಅಂತರರಾಷ್ಟ್ರೀಯ ವಲಯದಲ್ಲಿ ವಿಮಾನ ಸಂಚಾರ  ಎಂದಿನಂತೆ ಇತ್ತು ಎಂದು ಹೇಳಲಾಗಿದೆ.
ಏರ್‌ಇಂಡಿಯಾ ಆಂತರಿಕ ಸೇವೆಯ 225 ವಿಮಾನಗಳ ಪೈಕಿ ಭಾನುವಾರ 170  ವಿಮಾನಗಳ ಸಂಚಾರ ರದ್ದುಗೊಳಿಸಲಾಯಿತು ಮತ್ತು ಪುನರ್ ನಿಗದಿಗೊಳಿಸಲಾಯಿತು ಎನ್ನಲಾಗಿದೆ.

‘ಆಂತರಿಕವಾಗಿ  ಕೇವಲ 55 ವಿಮಾನಗಳು ಸಂಚರಿಸುತ್ತಿವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.ಈಗಾಗಲೇ ನಷ್ಟದಲ್ಲಿರುವ ಸಂಸ್ಥೆಗೆ ಮುಷ್ಕರದಿಂದಾಗಿ ಈವರೆಗೆ ರೂ 46 ಕೋಟಿ ನಷ್ಟವಾಗಿದೆ ಎನ್ನಲಾಗಿದೆ.

ಪೈಲಟ್‌ಗಳಿಗೆ  ಎಸ್‌ಎಂಎಸ್: ಮುಷ್ಕರ ನಡೆಸುತ್ತಿರುವ ಪೈಲಟ್‌ಗಳ ಮನವೊಲಿಸಿ ಸಂಧಾನ ಮಾತುಕತೆ ಮತ್ತು ಕೆಲಸಕ್ಕೆ ಹಿಂದಿರುಗಿಸುವ ಸಲುವಾಗಿ ಏರ್‌ಇಂಡಿಯಾದ ಸಿಎಂಡಿ ಅರವಿಂದ್ ಜಾಧವ್ ಎಲ್ಲಾ ಉದ್ಯೋಗಿಗಳಿಗೆ ‘ನಮ್ಮ ವಿಮಾನಯಾನ ಉಳಿಸಿ’ ಎಂಬ ಎಸ್‌ಎಂಎಸ್ ರವಾನಿಸಿದ್ದಾರೆ.

ಈ ಬಗ್ಗೆ ಸುಪ್ರೀಂಕೋರ್ನ ನ್ಯಾಯಾಧೀಶರು ಅಧ್ಯಯನ ಮಾಡುತ್ತಿದ್ದಾರೆ. ಇಂತಹ ಏರ್‌ಲೈನ್ಸ್ ಸಂಕಷ್ಟದಲ್ಲಿರುವ ಸಮಯದಲ್ಲಿ ಮುಷ್ಕರ ಹೂಡುವುದು ಅಪರಾಧವಾಗುತ್ತದೆ. ಸಾರ್ವಜನಿಕ ಜೀವನದಲ್ಲಿನ ಭ್ರಷ್ಟಾಚಾರವನ್ನು ನಾವು ಖಂಡಿಸುತ್ತೇವೆ. ಎಲ್ಲಾ ತಪ್ಪಿತಸ್ಥರಿಗೂ ಶಿಕ್ಷೆಯಾಗುತ್ತದೆ ಎಂದು ಹೇಳಿದ್ದಾರೆ.

ಹಲವು ವರ್ಷಗಳ ಹಿಂದೆ ನಡೆದ ಘಟನೆಗೆ ಪೈಲಟ್‌ಗಳು ಮುಷ್ಕರ ನಡೆಸುತ್ತಿದ್ದಾರೆ. ಇದಕ್ಕೆ ಇಂದಿನ ಆಡಳಿತ ವರ್ಗ ಹೊಣೆಗಾರರಾಗುವುದಿಲ್ಲ. ಏರ್‌ಲೈನ್‌ಅನ್ನು ಉಳಿಸಲು ಕೆಲಸಕ್ಕೆ ಹಿಂದಿರುಗುವಂತೆ ಮತ್ತು ಚರ್ಚೆಗೆ ಬರುವ ಮೂಲಕ ಸಮಸ್ಯೆ ಬಗೆ ಹರಿಸಬೇಕು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.