ADVERTISEMENT

ಶ್ರೀಲಂಕಾ ಅಧ್ಯಕ್ಷರ ಬಂಧು ಅರ್ಚಕರಿಗೆ ಕಲ್ಲು, ಚಪ್ಪಲಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 9:50 IST
Last Updated 10 ಜನವರಿ 2012, 9:50 IST

 ರಾಮೇಶ್ವರಂ (ಪಿಟಿಐ): ಎಂಡಿಎಂಕೆ ಮತ್ತು ನಮ್  ತಮಿಳ್ಹರಿಯಕ್ಕಂ ಕಾರ್ಯಕರ್ತರೆಂದು ಶಂಕಿಸಲಾದ ವ್ಯಕ್ತಿಗಳ ಗುಂಪೊಂದು ಇಲ್ಲಿನ ರಾಮನಾಥಸ್ವಾಮಿ ದೇವಾಲಯದ ಅರ್ಚಕರ ಮನೆಗೆ ನುಗ್ಗಿ ಕಲ್ಲು ಮತ್ತು ಚಪ್ಪಲಿಗಳನ್ನು ಎಸೆದ ಘಟನೆ  ಮಂಗಳವಾರ ಘಟಿಸಿತು.
 
ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸ ಅವರ ಸಂಬಂಧಿಯಾದ ಅರ್ಚಕ ತಿರುಕುಮಾರನ್ ನಟೇಸನ್ ಅವರು ಪೂಜಾ ನಿರತರಾಗಿದ್ದಾಗ ಈ ಘಟನೆ ನಡೆಯಿತು ಎಂದು ಅರ್ಚಕ ಆರ್.ಸಿ. ಆನಂದ ದೀಕ್ಷಿತರ್ ನುಡಿದರು.

ಮನೆಯೊಳಕ್ಕೆ ಕಲ್ಲುಗಳು ಮತ್ತು ಚಪ್ಪಲಿಗಳನ್ನು ಎಸೆಯಲಾಗಿದ್ದು ಘಟನೆಯಲ್ಲಿ ತಮಗೆ ಅಲ್ಪಸ್ವಲ್ಪ ಗಾಯಗಳಾಗಿವೆ ಎಂದು ದೀಕ್ಷಿತರ್ ಹೇಳಿದರು.

ತಿರುಕುಮಾರನ್ ನಟೇಸನ್ ಅವರು ~ಪರಿಕ್ಕರ ಪೂಜಾ~ (ಪಾಪಗಳ ದುಷ್ಪರಿಣಾಮ ನಿವಾರಣೆ ಕೋರಿ ಪ್ರಾರ್ಥನೆ) ಮಾಡಲು ಉದ್ಯುಕ್ತರಾದಾಗ ಗುಂಪು ಪ್ರವೇಶ ದ್ವಾರವನ್ನು ಮುರಿದು ಮನೆಯೊಳಕ್ಕೆ ನುಗ್ಗಿ ಶ್ರೀಲಂಕಾ ಅಧ್ಯಕ್ಷರ ವಿರುದ್ಧ ಘೋಷಣೆಗಳನ್ನು ಕೂಗಿತು ಎಂದು ದೀಕ್ಷಿತರ್ ನುಡಿದರು.

ರಾಜಪಕ್ಸ ಅವರ ಆಡಳಿತ ಮುಂದುವರಿಕೆಗಾಗಿ ಪ್ರಾರ್ಥಿಸಿ ಪೂಜೆ ನಡೆಸಲಾಗುತ್ತಿದೆ ಎಂಬ ಭಾವನೆ ದಾಳಿಕೋರರದ್ದಾಗಿತ್ತು. ಪೂಜೆ ನಡೆಸುತ್ತಿದ್ದುದಕ್ಕಾಗಿ  ಅವರು ನನ್ನನ್ನು ನಿಂದಿಸಿದರು ಎಂದು ಅರ್ಚಕ ಹೇಳಿದರು.

ತಿರುಕುಮಾರನ್ ಅವರು ಕಳೆದ ಮೂರು ವರ್ಷಗಳಿಂದ ನನ್ನ ಬಳಿಗೆ ಬರುತ್ತಿದ್ದಾರೆ ಎಂದೂ ದೀಕ್ಷಿತರ್ ನುಡಿದರು.

~ತಾವು ಪುತ್ರನ ಸಲುವಾಗಿ ಶಾಂತಿ ಪೂಜಾ / ಪರಿಕ್ಕರ ಪೂಜಾ ನಡೆಸುವ ಸಲುವಾಗಿ ಬಂದಿದ್ದುದಾಗಿ ತಿರುಕುಮಾರನ್ ಪಿಟಿಐಗೆ ತಿಳಿಸಿದರು.

ಯಾರೋ ಕೆಲವರು ಶ್ರೀಲಂಕಾ ಸರ್ಕಾರಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಪೂಜೆ ಮಾಡಲಾಗುತ್ತಿದೆ ಎಂದು ಪುಕಾರು ಹರಡಿದ್ದರಿಂದ ಈ ದಾಳಿ ಘಟನೆ ನಡೆಯಿತು ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.