ADVERTISEMENT

ಶ್ರೀಶ್ರೀ ರವಿಶಂಕರ್‌, ರಜನಿಕಾಂತ್‌ ಪದ್ಮವಿಭೂಷಣ; ಭೈರಪ್ಪ ಪದ್ಮ ಶ್ರೀ

112 ಮಂದಿಗೆ ಈ ಬಾರಿಯ ಪದ್ಮ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2016, 19:38 IST
Last Updated 25 ಜನವರಿ 2016, 19:38 IST
ಶ್ರೀಶ್ರೀ ರವಿಶಂಕರ್‌, ರಜನಿಕಾಂತ್‌ ಪದ್ಮವಿಭೂಷಣ; ಭೈರಪ್ಪ ಪದ್ಮ ಶ್ರೀ
ಶ್ರೀಶ್ರೀ ರವಿಶಂಕರ್‌, ರಜನಿಕಾಂತ್‌ ಪದ್ಮವಿಭೂಷಣ; ಭೈರಪ್ಪ ಪದ್ಮ ಶ್ರೀ   

ನವದೆಹಲಿ (ಪಿಟಿಐ): ಆರ್ಟ್‌ ಆಫ್‌  ಲಿವಿಂಗ್‌ ಸಂಸ್ಥಾಪಕ ಶ್ರೀಶ್ರೀ ರವಿಶಂಕರ್‌ ಗುರೂಜಿ, ಖ್ಯಾತ ಸಾಹಿತಿ ಎಸ್‌.ಎಲ್‌.ಭೈರಪ್ಪ, ಡಿಆರ್‌ಡಿಒ ಮಾಜಿ ಮುಖ್ಯಸ್ಥ ವಿ.ಕೆ.ಅತ್ರೆ, ಪ್ರಗತಿಪರ ರೈತ ಸುಭಾಷ ಪಾಳೇಕರ, ನಟ ರಜನೀಕಾಂತ್‌, ಆಟಗಾರ್ತಿ ಸಾನಿಯಾ ಮಿರ್ಜಾ ಸೇರಿದಂತೆ 112 ಮಂದಿ ಈ ಬಾರಿ ಪದ್ಮ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

67ನೇ ಗಣರಾಜ್ಯೋತ್ಸವದ ಮುನ್ನಾ ದಿನವಾದ ಸೋಮವಾರ ಕೇಂದ್ರ ಸರ್ಕಾರ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಕರ್ನಾಟಕದ ಮತ್ತು ಕರ್ನಾಟಕ ಮೂಲದ 13 ಮಂದಿ ಇದ್ದಾರೆ. ರಾಷ್ಟ್ರದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣಕ್ಕೆ 10 ಮಂದಿ, ಪದ್ಮಭೂಷಣಕ್ಕೆ 19 ಮಂದಿ  ಹಾಗೂ ಪದ್ಮಶ್ರೀಗೆ 83 ಮಂದಿ ಪಾತ್ರರಾಗಿದ್ದಾರೆ. ಇದರಲ್ಲಿ 19  ಮಹಿಳೆಯರು. ಪುರಸ್ಕೃತರಲ್ಲಿ ಅನಿವಾಸಿ ಭಾರತೀಯರು, ಎಂಜಿನಿಯರ್‌ಗಳು, ಉದ್ಯಮಿಗಳೂ ಸೇರಿದ್ದಾರೆ.

ರಿಲಯನ್ಸ್‌ ಸಂಸ್ಥಾಪಕ  ಧೀರೂಭಾಯಿ ಅಂಬಾನಿ (ಮರಣೋತ್ತರ), ಮಾಧ್ಯಮ ಕ್ಷೇತ್ರದ ರಾಮೋಜಿ ರಾವ್‌ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ದೊರೆತಿದೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಜಗಮೋಹನ್‌, ಕ್ಯಾನ್ಸರ್‌ ತಜ್ಞೆ ಡಾ.ವಿ.ಶಾಂತಾ, ಭರತನಾಟ್ಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ, ಗಾಯಕಿ ಗಿರಿಜಾದೇವಿ, ಭಾರತ ಮೂಲದ ಅಮೆರಿಕದ ಆರ್ಥಿಕ ತಜ್ಞ ಅವಿನಾಶ್‌ ದೀಕ್ಷಿತ್‌  ಪದ್ಮವಿಭೂಷಣ ಪುರಸ್ಕೃತರಲ್ಲಿ ಸೇರಿದ್ದಾರೆ.

ನಟ ಅನುಪಮ್‌ ಖೇರ್‌, ಗಾಯಕ ಉದಿತ್‌ ನಾರಾಯಣ, ಮಾಜಿ ಮಹಾ ಲೆಕ್ಕಪರಿಶೋಧಕ ವಿನೋದ್‌ ರಾಯ್‌, ಟೈಮ್ಸ್ ಮಾಧ್ಯಮ ಸಮೂಹದ ಇಂದೂ ಜೈನ್‌, ಕ್ರೀಡಾ ಲೋಕದ ಸಾನಿಯಾ ಮಿರ್ಜಾ, ಸೈನಾ ನೆಹ್ವಾಲ್‌, ಧಾರ್ಮಿಕ ಮುಖಂಡರಾದ ಸ್ವಾಮಿ ದಯಾನಂದ ಸರಸ್ವತಿ (ಮರಣೋತ್ತರ), ಸ್ವಾಮಿ ತೇಜೋಮಯಾನಂದ, ಮಾಜಿ ರಾಯಭಾರಿ ರಾಬರ್ಟ್‌ ಬ್ಲಾಕ್‌ವಿಲ್‌ ಸೇರಿದಂತೆ 19 ಮಂದಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ಉದ್ಯಮಿ ಪಲ್ಲೊಂಜಿ ಶಾಪೂರ್‌ಜಿ ಮಿಸ್ತ್ರಿ, ಮಾರುತಿ ಸುಜುಕಿ ಅಧ್ಯಕ್ಷ ಆರ್‌.ಸಿ.ಭಾರ್ಗವ್‌, ವಾಸ್ತುಶಿಲ್ಪಿ ಹಫೀಜ್‌ ಅವರೂ ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಮುಂಬೈ ಮೇಲೆ ದಾಳಿ ನಡೆಸಿದ ಉಗ್ರ ಅಜ್ಮಲ್‌ ಕಸಬ್‌ ವಿರುದ್ಧ ವಾದ ಮಂಡಿಸಿದ ಹಿರಿಯ ವಕೀಲ ಉಜ್ವಲ್‌ ನಿಕ್ಕಂ, ನಟ ಅಜಯ್‌ ದೇವಗನ್‌, ನಟಿ ಪ್ರಿಯಾಂಕಾ ಚೋಪ್ರಾ,  ಬಾಲಿವುಡ್‌ ನಿರ್ಮಾಪಕ ಮಧುರ್‌ ಭಂಡಾರ್ಕರ್‌, ಪ್ರಗತಿಪರ ರೈತ ಸುಭಾಷ ಪಾಳೇಕರ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.