ವಿದ್ಯುತ್ ಅವಗಢ: ನಾಲ್ವರ ಸಾವು
ಮುಂಬೈ (ಪಿಟಿಐ): ಇಲ್ಲಿನ ಅಂಧೇರಿ ಉಪನಗರದ ಎಂಐಡಿಸಿಯಲ್ಲಿರುವ ಇಂಡಸ್‌ಇಂಡ್ ಬ್ಯಾಂಕ್‌ನ ಕಾರ್ಯಾಲಯದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ನಾಲ್ವರು ಸತ್ತು , 13 ಮಂದಿ ಗಾಯಗೊಂಡ ಘಟನೆ ನಡೆದಿದೆ.ಶಾರ್ಟ್ ಸರ್ಕೀಟ್‌ನಿಂದಾಗಿ ಕಟ್ಟಡದೊಳಗೆ ಬೆಂಕಿ ಹೊತ್ತಿಕೊಂಡಿತು ಎನ್ನಲಾಗಿದೆ.
ಅತ್ಯಾಚಾರಿಗೆ ಗಲ್ಲು ಶಿಕ್ಷೆ
ಥಾಣೆ (ಪಿಟಿಐ): ಐದು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ, ಕ್ರೂರವಾಗಿ ಕೊಲೆ ಮಾಡಿದ್ದ 53ವರ್ಷದ ವ್ಯಕ್ತಿ ಯೊಬ್ಬನಿಗೆ ಇಲ್ಲಿನ ತ್ವರಿತ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.ಮಹಾರಾಷ್ಟ್ರದ ಕೊಪ್ರಿಗಾಂವ್‌ನ ದತ್ತು ಅಂಬೊ ರೊಖಡೆ ಗಲ್ಲುಶಿಕ್ಷೆಗೆ ಒಳಗಾದ ಆರೋಪಿ.
2013ರ ಜನವರಿ 22ರಂದು ಮನೆ ಸಮೀಪದ ಮೈದಾನದಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕಿಯನ್ನು ಆರೋಪಿ ರೊಖಡೆ ಆಮಿಷ ಒಡ್ಡಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ನಂತರ ಬಾಲಕಿಯ ಕತ್ತು ಹಿಸುಕಿ ಸಾಯಿಸಿ, ಶವವನ್ನು ಗೋಣಿಚೀಲದಲ್ಲಿ ಸುತ್ತಿ, ಕೆಲಕಾಲ ಕಸದ ತೊಟ್ಟಿಯಲ್ಲಿ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಎನ್‌ಸಿಪಿ ಸಚಿವರ ರಾಜೀನಾಮೆ
ಮುಂಬೈ (ಪಿಟಿಐ):ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಚಿವರು ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದು, ಸರ್ಕಾರ ಹಾಗೂ ಪಕ್ಷದ ಮಟ್ಟದಲ್ಲಿ ಬೃಹತ್ ಪ್ರಮಾಣದ ಪುನರ್‌ರಚನೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಲೋಕೋಪಯೋಗಿ ಸಚಿವ ಛಗನ್ ಭುಜಬಲ್, ಗೃಹ ಸಚಿವ ಆರ್. ಆರ್.ಪಾಟೀಲ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಜಯಂತ್ ಪಾಟೀಲ ಅವರು ರಾಜೀನಾಮೆ ನೀಡಿದ ಸಚಿವರಲ್ಲಿ ಸೇರಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುವಂತೆ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಪಕ್ಷದ ಮುಖಂಡರಿಗೆ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಎಸ್‌ಎಂಎಸ್ ಜಾಗೃತಿ ಅಭಿಯಾನ
ನವದೆಹಲಿ (ಪಿಟಿಐ): ವೀಕ್ಷಕರು ತಮಗಿಷ್ಟವಾಗುವ ಚಾನೆಲ್‌ಗಳಿಗೆ ಮಾತ್ರ ದರ ಪಾವತಿಸುವ ಕುರಿತು ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಎಸ್‌ಎಂಎಸ್ ಅಭಿಯಾನ ನಡೆಸಲಿದೆ.
ಕೇಬಲ್ ಟಿವಿ ವೀಕ್ಷಕರು `ಗ್ರಾಹಕ ಅರ್ಜಿ ನಮೂನೆ' (ಸಿಎಎಫ್) ತುಂಬುವಂತೆ ಪ್ರೇರೇಪಿಸುವ ಎಸ್‌ಎಂಎಸ್ ಅಭಿಯಾನವನ್ನು ದೇಶದ ಮೊದಲ ಹಾಗೂ ಎರಡನೇ ಹಂತದ ನಗರಗಳಲ್ಲಿ ನಡೆಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಯೋಜನೆ ರೂಪಿಸಿದೆ.
ಹೈದರಾಬಾದ್ `ಮೀನು ಔಷಧಿ' ವಿತರಣೆ
ಹೈದರಾಬಾದ್ (ಐಎಎನ್‌ಎಸ್): ಲೋಕಾಯುಕ್ತರ ನಿರ್ಬಂಧದ ನಡುವೆಯೂ ಈ ವರ್ಷವೂ ಆಸ್ತಮಾ ರೋಗಿಗಳಿಗಾಗಿ ಇಲ್ಲಿಯ ಪ್ರದರ್ಶನ ಮೈದಾನದಲ್ಲಿ ಪ್ರಸಿದ್ಧ `ಹೈದರಾಬಾದ್ ಮೀನಿನ ಔಷಧಿ'ಯನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅವೈಜ್ಞಾನಿಕವಾದ ಮೀನಿನ ಔಷಧಿ ವಿತರಣೆಗೆ ಪ್ರೋತ್ಸಾಹ ನೀಡಬೇಡಿ ಎಂದು ಲೋಕಾಯುಕ್ತರು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಆದರೆ ಇದೇ 8 ಹಾಗೂ 9 ರಂದು ಬಾತಿನಿ ಗೌಡ್ ಕುಟುಂಬದವರು ಜೀವಂತ ಮೀನು ಒಳಗೊಂಡ ಔಷಧಿ ವಿತರಣೆಗೆ ಸಿದ್ಧತೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.