ADVERTISEMENT

ಸಂಪುಟಕ್ಕೆ ಅಪರಾಧ ಹಿನ್ನೆಲೆಯ ರಾಜಾ ಭಯ್ಯಾ ಸೇರ್ಪಡೆ:ಅಖಿಲೇಶ್ ಪ್ರಮಾಣವಚನ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ಲಖನೌ (ಪಿಟಿಐ): ಉತ್ತರ ಪ್ರದೇಶದ 33ನೇ ಮುಖ್ಯಮಂತ್ರಿಯಾಗಿ ಅಖಿಲೇಶ್ ಯಾದವ್ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ಇವರೊಂದಿಗೆ 19 ಸಂಪುಟ ದರ್ಜೆ ಮತ್ತು 28 ಜನ ರಾಜ್ಯ ಸಚಿವರು ಅಧಿಕಾರ ಸ್ವೀಕರಿಸಿದರು.

 ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂಸಿಂಗ್ ಯಾದವ್ ಪುತ್ರರಾಗಿರುವ ಅಖಿಲೇಶ್, ದೇಶದ ಅತ್ಯಂತ ದೊಡ್ಡ ರಾಜ್ಯದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿದ್ದಾರೆ.ಪಕ್ಷಕ್ಕೆ `ಗೂಂಡಾ ರಾಜ್~ ಎಂಬ ಅಪಖ್ಯಾತಿ ಅಳಿಸಿ ಹಾಕುವಲ್ಲಿ ಅಖಿಲೇಶ್ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗಿತ್ತಾದರೂ, ಕೊಲೆ ಯತ್ನ, ಅಪಹರಣ ಮತ್ತು ಬಲಾತ್ಕಾರ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯಾ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವುದು ವಿವಾದಕ್ಕೀಡಾಗಿದೆ.

ಇಲ್ಲಿನ ಕಾಲೇಜು ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮುಲಾಯಂಸಿಂಗ್ ಯಾದವ್, ಅಖಿಲೇಶ್ ಪತ್ನಿ ಡಿಂಪಲ್, ಕೇಂದ್ರ ಸಚಿವ ಪವನ್‌ಕುಮಾರ ಬನ್ಸಲ್, ಕಾಂಗ್ರೆಸ್ ನಾಯಕ ಮೋತಿಲಾಲ್ ವೋರಾ, ಜಯಾ ಬಚ್ಚನ್, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಐಎನ್‌ಎಲ್‌ಡಿ ನಾಯಕ ಓಂಪ್ರಕಾಶ್ ಚೌಟಾಲಾ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಸಿಪಿಐ ನಾಯಕ ಎ.ಬಿ. ಬರ್ಧನ್ ಮತ್ತು ಉದ್ಯಮಿ ಅನಿಲ್ ಅಂಬಾನಿ ಮತ್ತು ಸಹರಾ ಸಂಸ್ಥೆಯ ಸುಬ್ರತ ರಾಯ್ ಇತರರು ಪಾಲ್ಗೊಂಡಿದ್ದರು.  ಮಾಜಿ ಮುಖ್ಯಮಂತ್ರಿ ಮಾಯಾವತಿ  ಪಾಲ್ಗೊಂಡಿದ್ದರು.

 ಪರಿಸರ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಖಿಲೇಶ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿ, ಚುನಾವಣಾ ಪ್ರಣಾಳಿಕೆಯಲ್ಲಿ ಪಕ್ಷ ನೀಡಿದ ಭರವಸೆಗಳನ್ನು ಈಡೇರಿಸಲಾಗುವುದು.  ಕಾನೂನು ಮತ್ತು ಸುವ್ಯವಸ್ಥೆ ಮೊದಲ ಕರ್ತವ್ಯವಾಗಿದ್ದು, ಅನ್ಯಾಯ ಎಸಗುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮಾಯಾವತಿ ಸರ್ಕಾರದ ಮೇಲೆ ಹರಿಹಾಯ್ದ ಅವರು, `ಹಿಂದಿನ ಸರ್ಕಾರದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದ್ದ ಭ್ರಷ್ಟಾಚಾರ ಹೊಸ ಸರ್ಕಾರದಲ್ಲಿ ಮುಂದುವರಿಯದು ಮತ್ತು ಉತ್ತರ ಪ್ರದೇಶ ಈಗ ನಿಜವಾದ ಪ್ರಜಾಪ್ರಭುತ್ವವನ್ನು ಅನುಭವಿಸುತ್ತಿದೆ~ ಎಂದರು.

ಅಖಿಲೇಶ್ ಸಂಪುಟ ಹಳೆ ಮತ್ತು ಹೊಸ ಮುಖಗಳ ಸಂಗಮವಾಗಿದೆ. ಒಟ್ಟು 403 ಸದಸ್ಯ ಬಲದ ವಿಧಾನಸಭೆಯಲ್ಲಿ ಸಮಾಜವಾದಿ ಪಕ್ಷ 224 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.