ADVERTISEMENT

ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಸೇರಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2013, 20:14 IST
Last Updated 14 ಫೆಬ್ರುವರಿ 2013, 20:14 IST

ನವದೆಹಲಿ: ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು `ದೆಹಲಿ ತುಳು ಸಿರಿ' ಗುರುವಾರ ಒತ್ತಾಯ ಮಾಡಿದೆ.

`ರಾಜ್ಯ ಸರ್ಕಾರ ತುಳುವನ್ನು ಅಧಿಕೃತ ಭಾಷೆ ಎಂದು ಒಪ್ಪಿದರೆ ಮಾತ್ರ ಕೇಂದ್ರ ಸರ್ಕಾರ ಎಂಟನೇ ಪರಿಚ್ಛೇದದಲ್ಲಿ ಸೇರ್ಪಡೆ ಮಾಡಲು ಸಾಧ್ಯ' ಎಂದು ತುಳುಸಿರಿ ಅಧ್ಯಕ್ಷ ರಾಮ ಮೋಹನರಾವ್, ಕಾರ್ಯಕ್ರಮ ನಿರ್ದೇಶಕ ಡಾ. ಪುರುಷೋತ್ತಮ ಬಿಳಿಮಲೆ ಮತ್ತು ಸಂಚಾಲಕ ವಸಂತಶೆಟ್ಟಿ ಬೆಳ್ಳಾರೆ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

`ತುಳು ಭಾಷೆಯನ್ನು ಎಂಟನೇ ಪರಿಚ್ಛೇದದಲ್ಲಿ ಸೇರ್ಪಡೆ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲು ಈ ತಿಂಗಳ 24ರಂದು ಒಂದು ದಿನದ ಸಮಾವೇಶ ನಡೆಸಲಾಗುತ್ತಿದೆ. ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವ ಸಚಿವರು, ಅನೇಕ ಲೋಕಸಭಾ ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸಮಾವೇಶದಲ್ಲಿ ಭಾಗವಹಿಸುವರು' ಎಂದು ತಿಳಿಸಿದರು.

ರಾಜ್ಯದಲ್ಲಿ ಸುಮಾರು ಒಂದು ಕೋಟಿ ಜನ ತುಳು ಭಾಷೆ ಮಾತನಾಡುತ್ತಾರೆ. ಈ ಭಾಷೆಗೆ ಸುದೀರ್ಘ ಇತಿಹಾಸವಿದೆ. ವಿಶಿಷ್ಟ ಸ್ಥಾನವಿದೆ. ನಾವು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ನಮ್ಮ ಭಾಷೆಯಲ್ಲಿ ನಡೆಸಬೇಕು ಅಥವಾ ನೋಟುಗಳ ಮೇಲೆ ನಮ್ಮ ಭಾಷೆ ಮುದ್ರಿಸಬೇಕು ಎಂದು ಕೇಳುವುದಿಲ್ಲ ಎಂದು ಮೂವರು ಗಣ್ಯರು ಒತ್ತಾಯಿಸಿದರು.

`ತುಳು ಭಾಷೆಯನ್ನು ಗುರುತಿಸಿ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರ್ಪಡೆ ಮಾಡದಿದ್ದರೆ ನಿಧಾನವಾಗಿ ಜನರ ಮನಸಿನಲ್ಲಿ ಪ್ರತ್ಯೇಕತೆ ಭಾವನೆ ಹುಟ್ಟಬಹುದು. ಸಂವಿಧಾನದಲ್ಲಿ ನನ್ನ ಭಾಷೆಗೆ ಸ್ಥಾನ ಇಲ್ಲದಿದ್ದ ಮೇಲೆ ಅದನ್ನು ನನ್ನ ಸಂವಿಧಾನ ಎಂದು ಹೇಳಲುಹೇಗೆ ಸಾಧ್ಯ' ಎಂದು ಪುರುಷೋತ್ತಮ ಬಿಳಿಮಲೆ ಪ್ರಶ್ನಿಸಿದರು.

`ನಾವು ಪ್ರತ್ಯೇಕ ರಾಜ್ಯ ಬೇಡಿಕೆ ಪರವಾಗಿಲ್ಲ. ಆದರೆ, ನಮ್ಮ ಭಾಷೆಗೆ ಸೂಕ್ತ ಸ್ಥಾನಮಾನ ಮತ್ತು ಮಾನ್ಯತೆ ಕೊಡಬೇಕು. ಅದಕ್ಕಾಗಿ ನಮ್ಮ ಆಗ್ರಹ. ನಾವು ಕನ್ನಡ ನಾಡಿನ ಭಾಗವಾಗಿದ್ದೇವೆ. ಕನ್ನಡಿಗರು ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇವೆ' ಎಂದು ರಾಮಮೋಹನರಾವ್ ಹೇಳಿದರು.

ದೇಶದ 22 ಭಾಷೆಗಳು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿವೆ. ಇದರಲ್ಲಿ ದಕ್ಷಿಣ ಭಾರತದ 4 ಭಾಷೆಗಳು ಮಾತ್ರ ಇವೆ. ದೊಡ್ಡ ಸಂಖ್ಯೆಯಲ್ಲಿ ಜನ ಬಳಸುವ ತುಳು ಭಾಷೆ ಸಂವಿಧಾನಕ್ಕೆ ಸೇರಿಸಬೇಕು ಎಂಬ ಆಗ್ರಹ ನಮ್ಮದು ಎಂದು ಬಿಳಿಮಲೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.