ADVERTISEMENT

ಸಂಸತ್‌ ಕಲಾಪ: ಒಂದಿಡೀ ವಾರ ವ್ಯರ್ಥ

ಪಿಟಿಐ
Published 9 ಮಾರ್ಚ್ 2018, 19:30 IST
Last Updated 9 ಮಾರ್ಚ್ 2018, 19:30 IST

ನವದೆಹಲಿ: ಎನ್‌ಡಿಎ ಮಿತ್ರಪಕ್ಷ ಟಿಡಿಪಿ ಮತ್ತು ಎಐಎಡಿಎಂಕೆಗಳ ಗದ್ದಲದಿಂದಾಗಿ ಲೋಕಸಭೆ ಕಲಾಪ ಆರಂಭವಾಗಿ ಸ್ವಲ್ಪವೇ ಹೊತ್ತಿನಲ್ಲಿ ದಿನದ ಮಟ್ಟಿಗೆ ಮುಂದೂಡಲಾಯಿತು. ಇದೇ ರೀತಿಯ ಗದ್ದಲದಿಂದಾಗಿ ರಾಜ್ಯಸಭೆಯ ಕಲಾಪವನ್ನೂ ಮಧ್ಯಾಹ್ನದ ನಂತರ ದಿನದ ಮಟ್ಟಿಗೆ ಮುಂದೂಡಲಾಯಿತು.  ಹೀಗಾಗಿ ಸಂಸತ್ತಿನ ಬಜೆಟ್‌ ಅಧಿವೇಶನದ ಎರಡನೇ ಭಾಗದ ಮೊದಲ ವಾರದ ಕಲಾಪ ಸಂಪೂರ್ಣವಾಗಿ ವ್ಯರ್ಥವಾಗಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ₹12,700 ಕೋಟಿ ಹಗರಣಕ್ಕೆ ಸಂಬಂಧಿಸಿ ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ತೃಣಮೂಲ ಕಾಂಗ್ರೆಸ್‌ ಪ್ರತಿಭಟನೆ ನಡೆಸಿದವು. ಆಂಧ್ರಪ್ರದೇಶದ ಪಕ್ಷಗಳಾದ ಟಿಡಿಪಿ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಸಂಸದರು ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಕೋಲಾಹಲ ಎಬ್ಬಿಸಿದರು.

ವಿಶೇಷ ಸ್ಥಾನ ನೀಡದ್ದರಿಂದ ಸಿಟ್ಟಾಗಿರುವ ಟಿಡಿಪಿ, ಕೇಂದ್ರ ಸಂಪುಟದಲ್ಲಿದ್ದ ತಮ್ಮ ಪಕ್ಷದ ಸಚಿವರಾದ ಅಶೋಕ್‌ ಗಜಪತಿ ರಾಜು ಮತ್ತು ವೈ.ಎಸ್‌. ಚೌದರಿ ಅವರನ್ನು ಹಿಂದಕ್ಕೆ ಕರೆಸಿಕೊಂಡಿತ್ತು. ಆದರೆ ಎನ್‌ಡಿಎ ಮಿತ್ರಪಕ್ಷವಾಗಿಯೇ ಮುಂದುವರಿಯುವುದಾಗಿ ಹೇಳಿತ್ತು.

ADVERTISEMENT

ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಬೇಕೆಂದು ಎಐಎಡಿಎಂಕೆ ಸದಸ್ಯರು ಒತ್ತಾಯಿಸಿದರು. ಕೆಲವು ಸಂಸದರು ಪೆರಿಯಾರ್‌ ಚಿತ್ರವಿರುವ ಫಲಕಗಳನ್ನೂ ಪ್ರದರ್ಶಿಸಿದರು. ದ್ರಾವಿಡ ಚಳವಳಿಯ ಸ್ಥಾಪಕ ಪೆರಿಯಾರ್‌ ಪ್ರತಿಮೆಯನ್ನು ತಮಿಳುನಾಡಿನಲ್ಲಿ ಇತ್ತೀಚೆಗೆ ವಿರೂಪಗೊಳಿಸಲಾಗಿತ್ತು.

ರಾಜ್ಯಸಭೆಯಲ್ಲಿಯೂ ಇದೇ ರೀತಿಯ ದೃಶ್ಯಗಳು ಕಂಡು ಬಂದವು. ‘ಒಂದಿಡೀ ವಾರ ವ್ಯರ್ಥವಾಗಿದೆ. ಇದು ಒಳ್ಳೆಯದಲ್ಲ, ಬಹಳ ಬೇಸರದ ಸಂಗತಿ’ ಎಂದು ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.