ADVERTISEMENT

ಸಕ್ರಿಯ ರಾಜಕೀಯದಿಂದ ದಲೈಲಾಮಾ ನಿವೃತ್ತಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 18:30 IST
Last Updated 10 ಮಾರ್ಚ್ 2011, 18:30 IST
ಸಕ್ರಿಯ ರಾಜಕೀಯದಿಂದ ದಲೈಲಾಮಾ ನಿವೃತ್ತಿ
ಸಕ್ರಿಯ ರಾಜಕೀಯದಿಂದ ದಲೈಲಾಮಾ ನಿವೃತ್ತಿ   

ಧರ್ಮಶಾಲಾ (ಪಿಟಿಐ): ಟಿಬೆಟನ್ನರ ಧಾರ್ಮಿಕ ಗುರು ಹಾಗೂ ದೇಶಭ್ರಷ್ಟ ಸರ್ಕಾರದ ಮುಖ್ಯಸ್ಥರಾಗಿರುವ ದಲೈ ಲಾಮಾ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗುವ ತಮ್ಮ ನಿರ್ಧಾರವನ್ನು ಗುರುವಾರ ಪ್ರಕಟಸಿದ್ದು, ಮುಕ್ತ ಚುನಾವಣೆ ಮೂಲಕ ನಾಯಕರೊಬ್ಬರನ್ನು ಆರಿಸಲು ಕಾಲ ಕೂಡಿ ಬಂದಿದೆ ಎಂದು ಹೇಳಿದ್ದಾರೆ.

ದೇಶಭ್ರಷ್ಟ ಟಿಬೆಟ್ ಸರ್ಕಾರದ 14ನೇ ಸಂಸತ್‌ನ 11ನೇ ಅಧಿವೇಶನ ಮಾರ್ಚ್ 14ರಿಂದ ಆರಂಭವಾಗಲಿದ್ದು, ತಮ್ಮ ಅಧಿಕಾರವನ್ನು ಔಪಚಾರಿಕವಾಗಿ ಚುನಾಯಿತರಾದ ನಾಯಕರೊಬ್ಬರಿಗೆ ಹಸ್ತಾಂತರಿಸುವ ಕಾರ್ಯತಂತ್ರ ರೂಪಿಸಬೇಕೆಂದು ತಾವು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವುದಾಗಿ ಅವರು ಹೇಳಿದರು.

’1960ರ ದಶಕದ ಆರಂಭದಿಂದಲೂ ಮುಕ್ತವಾಗಿ ಚುನಾಯಿತರಾದ ನಾಯಕರೇ ಟಿಬೆಟನ್ನರಿಗೆ ಬೇಕು ಎಂದು ನಾನು ಪ್ರತಿಪಾದಿಸುತ್ತಲೇ ಬಂದಿದ್ದೆ. ಈ ವಿಚಾರ ಕಾರ್ಯರೂಪಕ್ಕೆ ಬರಲು ಇದೀಗ ಸಮಯ ಸನ್ನಿಹಿತವಾಗಿದೆ’ ಎಂದು ಅವರು ಹೇಳಿದರು.

ಚೀನಾ ಆಡಳಿತದ ವಿರುದ್ಧ ಬಂಡೇಳುವ ಪ್ರಯತ್ನ ನಡೆಸಿ ವಿಫಲರಾಗಿದ್ದ ದಲೈ ಲಾಮಾ ಅವರು 1959ರಲ್ಲಿ ಭಾರತಕ್ಕೆ ಆಗಮಿಸಿ ಆಸರೆ ಪಡೆದಿದ್ದಾರೆ. ಅವರ ಜತೆಗೆ ಟೆಬೆಟ್ ಸರ್ಕಾರವೂ ದೇಶಭ್ರಷ್ಟಗೊಂಡಿದ್ದು, ಸದ್ಯ ಧರ್ಮಶಾಲಾದಲ್ಲಿ ತನ್ನ ಕಲಾಪ ನಡೆಸುತ್ತಿದೆ.

ದಲೈ ಲಾಮಾರ ನಿರ್ಗಮನದ ಬಳಿಕವೂ ಭಾರತದಲ್ಲಿ ದೇಶಭ್ರಷ್ಟರಾಗಿ ಬದುಕುತ್ತಿರುವ ಟಿಬೆಟನ್ನರ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆಯೂ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಪ್ರಧಾನಿ ಸಂಢಾಂಗ್ ರಿಂಪೋಛೆ, ದಲೈ ಲಾಮಾರ ನಿವೃತ್ತಿಯ ಬಳಿಕ ದೇಶಭ್ರಷ್ಟ ಸರ್ಕಾರದ ಔಚಿತ್ಯದ ಪ್ರಶ್ನೆ ಏಳುವ ಸಾಧ್ಯತೆ ಇದೆ ಎಂದಿದ್ದಾರೆ.

ಲಾಮಾರ ನಿವೃತ್ತಿಯ ಬಳಿಕ ‘ಔಚಿತ್ಯ’ವೇ ನಮ್ಮ ಮುಂದಿರುವ ದೊಡ್ಡ ಪ್ರಶ್ನೆಯಾಗಲಿದೆ. ಲಾಮಾ ಇಲ್ಲದಿದ್ದರೆ ಟಿಬೆಟನ್ನರ ದೃಷ್ಟಿಯಲ್ಲಿ ಯಾವುದೇ ವಿಶ್ವಾಸ ಉಳಿಯುವ ಸಾಧ್ಯತೆ ಕಡಿಮೆ ಇದೆ. ಇದು ನಮ್ಮ ಮುಂದಿರುವ ದೊಡ್ಡ ಪ್ರಶ್ನೆಯಾಗಿದ್ದು, ಇದಕ್ಕೆ ಪರಿಹಾರವೊಂದನ್ನು ಕಂಡುಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.