ADVERTISEMENT

ಸಮಯಪ್ರಜ್ಞೆ ತಪ್ಪಿಸಿದ ಭಾರಿ ಅನಾಹುತ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2012, 19:30 IST
Last Updated 13 ನವೆಂಬರ್ 2012, 19:30 IST

ಲಖನೌ (ಪಿಟಿಐ): ಪ್ರಯಾಣಿಕ ವಿಮಾನ ಮತ್ತು ಹೆಲಿಕಾಪ್ಟರ್ ಮಧ್ಯೆ ಡಿಕ್ಕಿ ಸಂಭವಿಸಿ ಆಗಬಹುದಾಗಿದ್ದ ಭಾರಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿರುವ ಘಟನೆ ಇಲ್ಲಿನ ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣದಲ್ಲಿ ಜರುಗಿದೆ.

ಮುಂಬೈನಿಂದ ಹೊರಟಿದ್ದ 180 ಪ್ರಯಾಣಿಕರಿದ್ದ ಇಂಡಿಗೋ ವಿಮಾನವು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಅದೇ ಸಂದರ್ಭದಲ್ಲಿ ಹೆಲಿಕಾಪ್ಟರ್ ಕೂಡ ಅಡ್ಡಲಾಗಿ ಇಳಿಯುತ್ತಿತ್ತು. ಇದನ್ನು ಗಮನಿಸಿದ ವಿಮಾನದ ಚಾಲಕ ಆಗಬಹುದಾಗಿದ್ದ ದೊಡ್ಡ ದುರಂತದಿಂದ ಪಾರು ಮಾಡಿದ್ದಾರೆ. ಈ ಘಟನೆ ಶುಕ್ರವಾರ ಸಂಜೆ ನಡೆದಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಹೆಲಿಕಾಪ್ಟರ್ ಉತ್ತರಪ್ರದೇಶ ಸರ್ಕಾರಕ್ಕೆ ಸೇರಿದೆ.

`ಹೆಲಿಕಾಪ್ಟರ್ ಮತ್ತು ವಿಮಾನ ಒಂದೇ ಬಾರಿಗೆ ಒಂದೇ ಪಥದಲ್ಲಿ ಇಳಿಯುತ್ತಿದ್ದವು. ಹೆಲಿಕಾಪ್ಟರ್ ಬರುತ್ತಿರುವುದನ್ನು ಗಮನಿಸಿದ ಚಾಲಕ ತನ್ನ ಸಮಯಪ್ರಜ್ಞೆಯಿಂದ ಅವಘಡವನ್ನು ತಪ್ಪಿಸಿದ್ದಾರೆ~ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಮತ್ತು ಎಟಿಸಿ ಎಸ್.ಸಿ. ಹೋಟಾ ತಿಳಿಸಿದ್ದಾರೆ. ಇಂಡಿಗೋ ಏರ್‌ಬಸ್ 320ರಲ್ಲಿ 180 ಪ್ರಯಾಣಿಕರಿದ್ದರು. ಹೆಲಿಕಾಪ್ಟರ್‌ನಲ್ಲಿ ಯಾರು ಪ್ರಯಾಣಿಸುತ್ತಿದ್ದರು ಎನ್ನುವುದನ್ನು ಅಧಿಕಾರಿಗಳು ತಿಳಿಸಿಲ್ಲ. ಆದರೆ, ವಿಮಾನ ಮತ್ತು ಹೆಲಿಕಾಪ್ಟರ್ ನಿಯಮಕ್ಕೆ ಅನುಗುಣವಾಗಿಯೇ ಚಲಿಸುತ್ತಿದ್ದವು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.