ADVERTISEMENT

ಸಮಿತಿ ತೊರೆಯುವುದಿಲ್ಲ: ಅಣ್ಣಾ

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 19:30 IST
Last Updated 7 ಜೂನ್ 2011, 19:30 IST

ನವದೆಹಲಿ: `ಲೋಕಪಾಲ ಮಸೂದೆ ಕರಡು ಸಮಿತಿ~ಯನ್ನು ತೊರೆಯುವ ಉದ್ದೇಶ ಹೊಂದಿಲ್ಲ~ ಎಂದು ಸ್ಪಷ್ಟಪಡಿಸಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಂಘಟನೆಗಳ ತಂಡ, ಇದೇ 15ರಂದು ನಡೆಯಲಿರುವ ಸಮಿತಿ ಸಭೆಯಲ್ಲಿ ಭಾಗವಹಿಸುವುದಾಗಿ ಹೇಳಿದೆ.

ಜತೆಗೆ, ರಾಮಲೀಲಾದಲ್ಲಿ ಆಮರಣ ಉಪವಾಸ ಕೈಗೊಂಡಿದ್ದ ಬಾಬಾ ರಾಮದೇವ್ ಮತ್ತು ಬೆಂಬಲಿಗರ ವಿರುದ್ಧ ನಡೆದ ಪೊಲೀಸರ ಕಾರ್ಯಾಚರಣೆ ಪ್ರತಿಭಟಿಸಿ ಅಣ್ಣಾ ಹಜಾರೆ ಬುಧವಾರ ರಾಜಘಾಟ್‌ನಲ್ಲಿ ಒಂದು ದಿನದ ಸಾಂಕೇತಿಕ ಧರಣಿ ನಡೆಸಲಿದ್ದಾರೆ.

ಜಂತರ್- ಮಂತರ್ ಸುತ್ತಮುತ್ತ 144ನೇ ಸೆಕ್ಷನ್ ಪ್ರಕಾರ ನಿಷೇಧಾಜ್ಞೆ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ರಾಜ್‌ಘಾಟ್ ಬಳಿ ಧರಣಿ ನಡೆಯಲಿದೆ. ಸರ್ಕಾರದ ಜತೆಗಿನ ಸಂಘರ್ಷ ತಪ್ಪಿಸುವ ಉದ್ದೇಶದಿಂದ ಸ್ಥಳ ಬದಲಾವಣೆ ಮಾಡಲಾಗಿದೆ ಎಂದು ವಕೀಲ ಪ್ರಶಾಂತ್ ಭೂಷಣ್ ತಿಳಿಸಿದರು.

ಕಾನೂನು ಬಾಹಿರವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇದು ಸುಪ್ರೀಂ ಕೋರ್ಟ್ ಮೂರು ಸಂದರ್ಭಗಳಲ್ಲಿ ನೀಡಿರುವ ತೀರ್ಪು ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಈ ಮೂಲಕ ಮೂಲಭೂತ ಹಕ್ಕನ್ನು ಹತ್ತಿಕ್ಕಲು ಸರ್ಕಾರ ಹೊರಟಿದೆ ಎಂದು ಪ್ರಶಾಂತ್ ಭೂಷಣ್ ದೂರಿದರು.

ಹಜಾರೆ ಮತ್ತು ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಸಮಿತಿಯ ಸಭೆಯಲ್ಲಿ ಭಾಗವಹಿಸುವುದಾಗಿ ಹೇಳುವ ಮೂಲಕ ಅವರು ಸಮಿತಿಯಲ್ಲಿ ಮುಂದುವರಿಯುವ ಕುರಿತು ಸರ್ಕಾರ ವ್ಯಕ್ತಪಡಿಸಿದ್ದ ಅನುಮಾನ ಬಗೆಹರಿದಂತಾಗಿದೆ. `ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸದಿದ್ದರೂ ಸರ್ಕಾರದ ಪ್ರತಿನಿಧಿಗಳೇ ಹೊಣೆಗಾರಿಕೆ ಪೂರ್ಣಗೊಳಿಸಲಿದ್ದಾರೆ~ ಎಂದು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಹೇಳಿದ್ದರು.

ನವದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ಅಣ್ಣಾ ಹಜಾರೆ ಅವರಿಗೆ ಬುಧವಾರ ಉಪವಾಸ ಸತ್ಯಾಗ್ರಹ ನಡೆಸಲು ಅನುಮತಿ ನಿರಾಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಅತ್ತ ಸಾಗುತ್ತಿದ್ದ ವಾಹನಗಳನ್ನು ಮಂಗಳವಾರವೇ ತಡೆಹಿಡಿಯಲಾಯಿತು.  -ಪಿಟಿಐ ಚಿತ್ರ

`ನಾವು ಸಭೆಯಲ್ಲಿ ಭಾಗವಹಿಸುವುದಿಲ್ಲ. ಸಮಿತಿ ತೊರೆಯುತ್ತೇವೆ ಎಂದು ಹೇಳಿಲ್ಲ. ರಾಮದೇವ್ ಮತ್ತು ಅವರ ಬೆಂಬಲಿಗರ ಮೇಲಿನ ಪೊಲೀಸ್ ದೌರ್ಜನ್ಯ ಪ್ರತಿಭಟಿಸಿ ಸೋಮವಾರದ ಸಭೆಯನ್ನು ಬಹಿಷ್ಕರಿಸಲಾಗಿತ್ತು ಅಷ್ಟೇ~ ಎಂದು ಸಾಮಾಜಿಕ ಕಾರ್ಯಕರ್ತ ಕೇಜ್ರಿವಾಲ್ ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

`ನಾಗರಿಕ ಸಂಘಟನೆಗಳು ಸಮಿತಿಯನ್ನು ತೊರೆದರೆ `ವಿಶ್ವಾಸಾರ್ಹತೆ~ ಉಳಿಯುವುದಿಲ್ಲ. ಅದು ಐವರು ಸಚಿವರನ್ನು ಒಳಗೊಂಡ ಸರ್ಕಾರದ ಸಮಿತಿ ಆಗಲಿದೆ. ಈ ಪ್ರಶ್ನೆ ಯಾಕೆ ಉದ್ಭವಿಸಿತೋ ಗೊತ್ತಿಲ್ಲ.

ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರಿಗೆ ಬರೆದಿದ್ದ ಪತ್ರದಲ್ಲಿ ಜೂ. 6ರ ಸಭೆಯನ್ನು ಮಾತ್ರ ಬಹಿಷ್ಕರಿಸುವುದಾಗಿ ಹೇಳಲಾಗಿತ್ತು~ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.