ನವದೆಹಲಿ (ಪಿಟಿಐ): ಸಲಿಂಗಕಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಮತ್ತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಸಲ್ಲಿಸಿರುವ ದಾಖಲೆಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸದಿರುವ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ಮುಂದಿನ ವಿಚಾರಣೆ ದಿನದಂದು ದೇಶದ ಒಟ್ಟು ಮಹಿಳಾ ಸಲಿಂಗಕಾಮಿಗಳು, ಪುರುಷ ಸಲಿಂಗ ಕಾಮಿಗಳು ಮತ್ತು ಲಿಂಗಪರಿವರ್ತನೆ ಮಾಡಿಸಿಕೊಂಡಿರುವವರ ಸಂಖ್ಯೆ ಹಾಗೂ ಇವರಲ್ಲಿ ಎಚ್‌ಐವಿ ಬಾಧಿತರು ಎಷ್ಟು ಎಂಬ ಅಂಕೆ ಸಂಖ್ಯೆ ಹಾಗೂ ಇನ್ನಿತರ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿತು.
ಈ ಕುರಿತು ಸರ್ಕಾರಕ್ಕೆ ನಿರ್ದೇಶನ ನೀಡಿರುವ ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಮತ್ತು ಎಸ್.ಜೆ.ಮುಖ್ಯೋಪಾಧ್ಯಾಯರನ್ನು ಒಳಗೊಂಡ ಪೀಠ, ಹೈಕೋರ್ಟ್ ಎದುರು ಸರ್ಕಾರ ನೀಡಿರುವ ದಾಖಲೆಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.
ಸಲಿಂಗಕಾಮ ಪ್ರಕರಣದ ವಿಚಾರಣೆ ನಡೆಯುವಾಗ ವಕೀಲರು ಪೂರ್ವಸಿದ್ಧತೆ ಇಲ್ಲದೇ ಕೋರ್ಟ್‌ಗೆ ಹಾಜರಾಗುತ್ತಿರುವ ಕುರಿತು ಪೀಠ ಅಸಮಾಧಾನ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಪೂರ್ವ ಸಿದ್ಧತೆಯೊಂದಿಗೆ ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿದೆ.
2009ರಲ್ಲಿ ಹೈಕೋರ್ಟ್‌ನಲ್ಲಿ ನೀಡಿದ ಹೇಳಿಕೆ ಪ್ರಕಾರ ಶೇ 8ರಷ್ಟು ಸಲಿಂಗಕಾಮಿಗಳು ಎಚ್‌ಐವಿ ಬಾಧಿತರಾಗಿದ್ದಾರೆ. ಪ್ರಸ್ತುತ ಎಚ್‌ಐವಿ ಪೀಡಿತರ ಸಂಖ್ಯೆಯನ್ನು ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಕಳೆದ ವರ್ಷ ದೆಹಲಿ ಹೈಕೋರ್ಟ್ ಸಲಿಂಗಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿತ್ತು.
ನ್ಯಾಯಾಲಯದ ತೀರ್ಪನ್ನು ಸಲಿಂಗಕಾಮ ವಿರೋಧಿ ಕಾರ್ಯಕರ್ತರು, ಕೆಲವು ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆಗಳು ವಿರೋಧಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು. ಬಿಜೆಪಿ ಹಿರಿಯ ನಾಯಕ ಬಿ.ಪಿ.ಸಿಂಘಾಲ್ ಕೂಡ ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಗುರುವಾರ ಅದರ ವಿಚಾರಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.