ADVERTISEMENT

ಸಾದಿಕ್ ಶವಪರೀಕ್ಷೆ ಮಾಡಿದ್ದ ವೈದ್ಯ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 19:30 IST
Last Updated 21 ಮಾರ್ಚ್ 2011, 19:30 IST

ಚೆನ್ನೈ: ನಿಗೂಢ ರೀತಿಯಲ್ಲಿ ಈಚೆಗೆ ಮೃತಪಟ್ಟ ಕೇಂದ್ರ ಮಾಜಿ ಸಚಿವ ರಾಜಾ ಅವರ ಆಪ್ತ ಸಾದಿಕ್ ಶವಪರೀಕ್ಷೆ ನಡೆಸಿದ್ದ ಚೆನ್ನೈನ ರಾಯಪೇಟಾ ಸರ್ಕಾರಿ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ವೈದ್ಯ ಡಾ. ವಿ. ದೇಕಲ್ ತಮ್ಮ ಹುದ್ದೆಗೆ ದಿಡೀರ್ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ 2ಜಿ ತರಂಗಾಂತರ ಬಹುಕೋಟಿ ಹಗರಣ ಮತ್ತೊಂದು ಹಠಾತ್ ತಿರುವು ಪಡೆದುಕೊಂಡಿದೆ.

ಅವರ ರಾಜೀನಾಮೆ ಸುತ್ತ ಎದ್ದಿರುವ ಊಹಾಪೋಹಗಳನ್ನು ಅಲ್ಲಗಳೆದಿರುವ ಡಾ.ದೇಕಲ್ ಅವರು, ಸಾಧಿಕ್ ಶವಪರೀಕ್ಷೆಗೂ ತಮ್ಮ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿರುವುದಾಗಿ ಅವರು ರಾಜೀನಾಮೆಯ ಕಾರಣ ತಿಳಿಸಿದ್ದಾರೆ. ಸಾದಿಕ್ ಶವಪರೀಕ್ಷೆ ಮತ್ತು ರಾಜೀನಾಮೆಗೆ ಥಳಕು ಹಾಕುವುದು ಬೇಡ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಏಪ್ರಿಲ್ 13ರಂದು ನಡೆಯಲಿರುವ ತಮಿಳುನಾಡು ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಉದ್ದೇಶದಿಂದ ಮಾರ್ಚ್ 3ರಂದೇ ತಾವು ರಾಜೀನಾಮೆ ಪತ್ರ ಸಲ್ಲಿಸಿದ್ದಾಗಿ ಅವರು ಹೇಳಿದ್ದಾರೆ. ಆದರೆ, ತಮ್ಮನ್ನು ಇನ್ನೂ ಸೇವೆಯಿಂದ ಬಿಡುಗಡೆಗೊಳಿಸದ ಕಾರಣ ಕೆಲಸ ನಿರ್ವಹಿಸುತ್ತಿದ್ದು ಸೇವೆಯಿಂದ ಬಿಡುಗಡೆಗೊಳಿಸಿದ ಆದೇಶ ಬಂದತಕ್ಷಣ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಅನೇಕ ಸಂಶಯಗಳನ್ನು ಹುಟ್ಟುಹಾಕಿದ್ದ ಸಾದಿಕ್ ಅವರ ಹಠಾತ್ ಮತ್ತು ನಿಗೂಢ ಸಾವಿನ ಕುರಿತು ಸಿಬಿಐ ಇನ್ನೂ ತನಿಖೆ ಆರಂಭಿಸುವ ಮೊದಲೇ ಶವಪರೀಕ್ಷೆ ನಡೆಸಿದ್ದ ವಿಧಿವಿಜ್ಞಾನ ತಜ್ಞ ವೈದ್ಯ ಡಾ.ದೇಕಲ್ ರಾಜೀನಾಮೆ ನೀಡಿರುವುದು ಶಂಕೆ ಮೂಡಿಸಿದೆ.

‘ಕತ್ತಿನ ಭಾಗದ ಸುತ್ತ ಕುಣಿಕೆಯ ಕಲೆ ಕಂಡುಬಂದಿದ್ದು ಕತ್ತಿನ ಮೂಳೆಗಳು ಅಪ್ಪಚ್ಚಿಯಾಗಿವೆ. ಹೀಗಾಗಿ ಉಸಿರಾಟದ ತೊಂದೆಯಿಂದ ಸಾದಿಕ್ ಮೃತಪಟ್ಟಿದ್ದಾರೆ’ ಎಂದು ಶವಪರೀಕ್ಷೆ ನಡೆಸಿದ್ದ ಡಾ.ದೇಕಲ್ ಅಭಿಪ್ರಾಯಪಟ್ಟಿದ್ದರು.

 ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುವುದನ್ನು ನಿಖರವಾಗಿ ಹೇಳಲಾಗದು. 15 ದಿನಗಳಲ್ಲಿ ವೈದ್ಯಕೀಯ ವರದಿ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ ವರದಿ ಬರಲಿದ್ದು ಸತ್ಯ ಹೊರಬೀಳಲಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.