ADVERTISEMENT

ಸಾಧ್ಯವಾದಷ್ಟು ಮಕ್ಕಳು ಮಾಡಲು ಹಿಂದೂಗಳಿಗೆ ಕರೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 19:30 IST
Last Updated 24 ಫೆಬ್ರುವರಿ 2018, 19:30 IST

ಲಖನೌ: ‘ದೇಶದಲ್ಲಿ ಜನಸಂಖ್ಯೆ ನಿಯಂತ್ರಣದ ಕಾನೂನು ಜಾರಿಗೆ ಬರುವವರೆಗೆ ಎಷ್ಟು ಸಾಧ್ಯವೋ ಅಷ್ಟು ಮಕ್ಕಳಿಗೆ ಜನ್ಮ ನೀಡಬೇಕು. ಈ ಸಂಬಂಧ ಕಾನೂನು ಜಾರಿ ಆಗುವವರೆಗೆ ನಿಮಗೆ ಆ ಸ್ವಾತಂತ್ರ್ಯ ಇದೆ’ ಎಂದು ಉತ್ತರ ಪ್ರದೇಶ ಬಿಜೆಪಿ ಶಾಸಕ ವಿಕ್ರಂ ಸೈನಿ ಹಿಂದೂಗಳಿಗೆ ಕರೆ ನೀಡಿದ್ದಾರೆ.‌

ಜನಸಂಖ್ಯೆ  ನಿಯಂತ್ರಣಕ್ಕೆ ಸಂಬಂಧಿಸಿದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸೈನಿ ಈ ರೀತಿ ಕರೆ ನೀಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನಸಂಖ್ಯೆಯನ್ನು ನಿಯಂತ್ರಿಸಲು ದೇಶ ಹರಸಾಹಸ ಪಡುತ್ತಿದ್ದರೆ, ಇವರು ಜನಸಂಖ್ಯೆ ಹೆಚ್ಚಳವನ್ನು ಉತ್ತೇಜಿಸುತ್ತಿದ್ದಾರೆ ಎಂದು ಕೆಲವರು ಟೀಕೆ ಮಾಡಿದ್ದಾರೆ.

‘ನೋಡಿ, ನಮ್ಮಲ್ಲಿ ನಾವಿಬ್ಬರು–ನಮಗಿಬ್ಬರು ಎಂಬ ನೀತಿ ಇದೆ. ಅದನ್ನು ಹಿಂದೂಗಳು ಮಾತ್ರ ಪಾಲಿಸಿದ್ದಾರೆ. ಕೆಲವು ಹಿಂದೂಗಳಂತೂ ನಾವಿಬ್ಬರು–ನಮಗೊಂದೇ ಎಂಬಲ್ಲಿಗೇ ನಿಂತುಬಿಟ್ಟಿದ್ದಾರೆ. ಆದರೆ ಬೇರೆಯವರು ನಾವಿಬ್ಬರು–ನಮಗೆ ಹದಿನೆಂಟು (ಹಮ್ ದೋ–ಹಮಾರೆ ಅಟಾರ) ಎನ್ನುತ್ತಿದ್ದಾರೆ. ಒಂದು ದೇಶ ಎಂದ ಮೇಲೆ ಇಲ್ಲಿರುವ ನಿಯಮ ಎಲ್ಲರಿಗೂ ಅನ್ವಯವಾಗಬೇಕು. ಹೀಗಾಗಿ ನೀವೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಜನ್ಮ ನೀಡಿ’ ಎಂದು ಸೈನಿ ಕರೆ ನೀಡಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ADVERTISEMENT

‘ನಮಗೆ ಎರಡು ಮಕ್ಕಳಾದಾಗ ಇನ್ನೂ ಮೂರ್ನಾಲ್ಕು ಮಕ್ಕಳಾಗಲಿ ಎಂದು ನಾನು ನನ್ನ ಪತ್ನಿಯನ್ನು ಒತ್ತಾಯಿಸಿದ್ದೆ. ಆದರೆ ಅವಳು ಎರಡು ಮಕ್ಕಳು ಸಾಕು ಎಂದಳು’ ಎಂದು ಸೈನಿ ಹೇಳಿರುವುದೂ ವಿಡಿಯೊದಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.