ADVERTISEMENT

ಸಾಲದ ಹೊರೆ ಭರಿಸುವ ಭರವಸೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 19:30 IST
Last Updated 17 ಆಗಸ್ಟ್ 2012, 19:30 IST
ಸಾಲದ ಹೊರೆ ಭರಿಸುವ ಭರವಸೆ
ಸಾಲದ ಹೊರೆ ಭರಿಸುವ ಭರವಸೆ   

ನವದೆಹಲಿ: ರಾಜ್ಯ ಸರ್ಕಾರ ಮನ್ನಾ ಮಾಡಿರುವ ರೈತರ ಸಾಲದ ಒಟ್ಟಾರೆ ಹೊರೆಯಲ್ಲಿ ಶೇ 75ರಷ್ಟನ್ನು ಭರಿಸುವ ಕುರಿತು ಪ್ರಧಾನಿ ಮನಮೋಹನ್‌ಸಿಂಗ್ ಅವರ ಜತೆ ಚರ್ಚಿಸಿ ತೀರ್ಮಾನಿಸುವುದಾಗಿ ಹಣಕಾಸು ಸಚಿವ ಪಿ.ಚಿದಂಬರಂ  ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಶುಕ್ರವಾರ ಭರವಸೆ ನೀಡಿದರು.

ನಲವತ್ತು ವರ್ಷಗಳಿಂದ ಕಂಡರಿಯದ ಬರಗಾಲದ ಹಿನ್ನೆಲೆಯಲ್ಲಿ ಕೃಷಿ ಸಹಕಾರ ಸಂಘಗಳಿಂದ ರೈತರು ಪಡೆದಿರುವ 25 ಸಾವಿರದವರೆಗಿನ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಿದೆ. ಇದರಿಂದ ರೂ 3600 ಕೋಟಿ ರೂಪಾಯಿ ಹೊರೆಯಾಗಿದೆ. ಇದರಲ್ಲಿ ಶೇ 75ರಷ್ಟನ್ನು ಕೇಂದ್ರ ಪಾವತಿಸುವ ಮೂಲಕ ರಾಜ್ಯದ ನೆರವಿಗೆ ಧಾವಿಸಬೇಕು ಎಂದು ಹಣಕಾಸು ಸಚಿವರಿಗೆ ಜಗದೀಶ್ ಶೆಟ್ಟರ್ ಮನವಿ ಮಾಡಿದರು.

ಮುಖ್ಯಮಂತ್ರಿಗಳ ಮನವಿ ಕೇಳಿದ ಹಣಕಾಸು ಸಚಿವರು. ಕರ್ನಾಟಕದ ಬೇಡಿಕೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡರೆ ಬರಗಾಲಕ್ಕೆ ಸಿಕ್ಕಿರುವ ಉಳಿದ ರಾಜ್ಯಗಳು ಸುಮ್ಮನೆ ಕೂರುವುದಿಲ್ಲ. ಅವೂ ಮನವಿ ಹಿಡಿದು ಬರುತ್ತವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಬೇಡಿಕೆ ಕುರಿತು ಮನಮೋಹನ್‌ಸಿಂಗ್ ಅವರ ಜತೆ ಸಮಾಲೋಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಚಿದಂಬರಂ ತಿಳಿಸಿದರು ಎಂದು ಶೆಟ್ಟರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಎರಡು ದಿನಗಳ ಭೇಟಿಗಾಗಿ ದೆಹಲಿಗೆ ಆಗಮಿಸಿರುವ ಮುಖ್ಯಮಂತ್ರಿಗಳು ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಹಣಕಾಸು ಸಚಿವರು, ಕೃಷಿ ಸಚಿವ ಶರದ್ ಪವಾರ್, ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಇಂಧನ ಸಚಿವ ಎಂ. ವೀರಪ್ಪ ಮೊಯಿಲಿ, ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ರೈಲ್ವೆ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ರಾಜ್ಯದ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರನ್ನು ಭೇಟಿ ಮಾಡಿ ವಿವಿಧ ವಿಷಯಗಳನ್ನು ಕುರಿತು ಚರ್ಚಿಸಿದರು.

ಬರಗಾಲದ ಹಿನ್ನೆಲೆಯಲ್ಲಿ ಕೇಂದ್ರದಿಂದ 11,489 ಕೋಟಿ ನೆರವಿಗೆ ಮನವಿ ಸಲ್ಲಿಸಲಾಗಿದೆ. ಅಲ್ಪಾವಧಿಗೆ 7672 ಕೋಟಿ ಮತ್ತು ದೀರ್ಘಾವಧಿಗೆ 3812 ಕೋಟಿ  ಕೇಳಲಾಗಿದೆ. ಕೃಷಿ ಸಚಿವ ಶರದ್ ಪವಾರ್ ಕೇಂದ್ರದ ಪರಿಣತರ ತಂಡವನ್ನು ಪರಿಸ್ಥಿತಿ ಅಧ್ಯಯನಕ್ಕಾಗಿ ರಾಜ್ಯಕ್ಕೆ ಕಳುಹಿಸುತ್ತಿದ್ದಾರೆ.

ಈಚೆಗೆ ಬೆಂಗಳೂರಿಗೆ ಬಂದಿದ್ದ ಪವಾರ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ಅವರಿಗೆ ಪರಿಸ್ಥಿತಿ ಮನವರಿಕೆ ಮಾಡಿಕೊಡಲಾಗಿದೆ. ಸೂಕ್ತ ನೆರವು ದೊರೆಯುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾದರೂ ಪರಿಸ್ಥಿತಿ ಸುಧಾರಣೆ ಆಗಿಲ್ಲ. ಶೆ. 35ರಷ್ಟು ಮಾತ್ರ ಬಿತ್ತನೆ ಆಗಿದೆ. ಮಳೆ ವಿಫಲವಾದ ಹಿನ್ನೆಲೆಯಲ್ಲಿ ಅದೂ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ತುರ್ತು ಬರ ಪರಿಹಾರ ಕಾಮಗಾರಿ ಕೈಗೊಳ್ಳಬೇಕಿದ್ದು ಕೇಂದ್ರ ಸರ್ಕಾರ ರಾಜ್ಯದ ಬೇಡಿಕೆಗೆ ಸ್ಪಂದಿಸಬೇಕೆಂದು ಆಗ್ರಹ ಮಾಡಿರುವುದಾಗಿ ಶೆಟ್ಟರ್ ವಿವರಿಸಿದರು.

`ಕೇಂದ್ರ ವಿದ್ಯುತ್ ಜಾಲದಿಂದ ರಾಜ್ಯಕ್ಕೆ 1540ಮೆ.ವಾ ವಿದ್ಯುತ್ ನಿಗದಿ ಆಗಿದೆ. ಆದರೆ, ಪೂರ್ಣವಾಗಿ ನಮ್ಮ ಪಾಲು ಸಿಗುತ್ತಿಲ್ಲ. ನಮ್ಮ ಪಾಲು ನಮಗೆ ಕೊಡಿ ಹಂಚಿಕೆ ಆಗದೆ ಉಳಿದ ವಿದ್ಯುತ್‌ನಲ್ಲೂ ಪಾಲು ನಿಗದಿ ಮಾಡಿ~ ಎಂದು ರಾಜ್ಯದವರೇ ಆಗಿರುವ ಇಂಧನ ಸಚಿವ ಎಂ. ವೀರಪ್ಪ ಮೊಯಿಲಿ ಅವರಿಗೆ ಒತ್ತಾಯಿಸಲಾಗಿದೆ.

ಕೇಂದ್ರ ಮತ್ತು ಬೇರೆ ರಾಜ್ಯಗಳಿಂದ ವಿದ್ಯುತ್ ಪಡೆಯಲು ಅನುಕೂಲವಾಗುವಂತೆ ಸಂಪರ್ಕ ಜಾಲದ ವ್ಯವಸ್ಥೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ಸುವರ್ಣಸೌಧ ಉದ್ಘಾಟನೆಗೆ ರಾಷ್ಟ್ರಪತಿ

ಬೆಳಗಾವಿಯಲ್ಲಿ 391ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸುವರ್ಣಸೌಧದ ಉದ್ಘಾಟನೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಆಹ್ವಾನಿಸಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲು ಉದ್ದೇಶಿಸಿರುವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ರಾಷ್ಟ್ರಪತಿ ಒಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಶೆಟ್ಟರ್ ನುಡಿದರು.

ರಾಷ್ಟ್ರಪತಿ ಅವರನ್ನು ಶುಕ್ರವಾರ ಭೇಟಿ ಮಾಡಿ ಸುವರ್ಣಸೌಧ ಉದ್ಘಾಟನೆಗೆ ಬರುವಂತೆ ಆಹ್ವಾನಿಸಲಾಯಿತು. ರಾಷ್ಟ್ರಪತಿ ಕರ್ನಾಟಕ ಭೇಟಿಗೆ ಅವರ ಕಚೇರಿ ದಿನಾಂಕ ನಿಗದಿಪಡಿಸಲಿದೆ. ಅವರು ಬರುವ ದಿನದಂದು ಉದ್ಘಾಟನಾ ಸಮಾರಂಭ ಏರ್ಪಡಲಿದೆ. ಸಮಾರಂಭದ ಬಳಿಕ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಪ್ರಣವ್ ಮುಖರ್ಜಿ ಭಾಷಣ ಮಾಡಲಿದ್ದಾರೆ ಎಂದು ಶೆಟ್ಟರ್ ವಿವರಿಸಿದರು.

127ಎಕರೆ ಪ್ರದೇಶದಲ್ಲಿರುವ ಸುವರ್ಣ ಸೌಧದಲ್ಲಿ ವಿಧಾನಸಭೆ ಹಾಗೂ ಪರಿಷತ್ ಸಭಾಂಗಣದ ಜತೆ ಲೋಕಸಭೆ ಮಾದರಿಯಲ್ಲಿ `ಸೆಂಟ್ರಲ್ ಹಾಲ್~ ಕಟ್ಟಲಾಗಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.
ಸಚಿವರಾದ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ, ಸಿ.ಎಂ. ಉದಾಸಿ, ಶೋಭಾ ಕರಂದ್ಲಾಜೆ ಹಾಗೂ ಹಿರಿಯ ಅಧಿಕಾರಿಗಳನ್ನು ಒಳಗೊಂಡ ನಿಯೋಗ ಶೆಟ್ಟರ್ ನೇತೃತ್ವದಲ್ಲಿ ಪ್ರಣವ್ ಮುಖರ್ಜಿ ಅವರನ್ನು ಭೇಟಿ ಮಾಡಿತ್ತು.

ವಿಶೇಷ ಸ್ಥಾನಮಾನ ಮಸೂದೆ
ಸಂವಿಧಾನದ 371ನೇ ಕಲಮಿಗೆ ತಿದ್ದುಪಡಿ ತಂದು ಹೈದರಾಬಾದ್- ಕರ್ನಾಟಕದ ಆರು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡುವ ಮಸೂದೆಯನ್ನು ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲೇ ಮಂಡಿಸಬೇಕು ಎಂದು ಚಿದಂಬರಂ ಅವರಿಗೆ ಮನವಿ ಮಾಡಲಾಗಿದೆ.
 - ಜಗದೀಶ ಶೆಟ್ಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT