ಬದಿಯಡ್ಕ (ಕಾಸರಗೋಡು ಜಿಲ್ಲೆ): ಬಹು ಭಾಷಾ ವಿದ್ವಾಂಸ, ತುಳು ಭಾಷಾ ಸಾಹಿತ್ಯ ಹಾಗೂ ಐತಿಹಾಸಿಕ ತಾಳೆಗರಿಗಳ ಅನ್ವೇಷಣೆಯಲ್ಲಿ ಮಹತ್ವದ ಸಾಧನೆ ಮಾಡಿ ತುಳುಭಾಷೆಗೆ ಶುದ್ಧ ಭಾಷ್ಯ ನೀಡಿದ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ (76) ಅವರು ಶುಕ್ರವಾರ ಸಂಜೆ ಐತನಡ್ಕದ ಸ್ವಗ್ರಹದಲ್ಲಿ ನಿಧನರಾದರು. ಅವರು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರಿದ್ದಾರೆ.
ಎಡನೀರಿನ ಸ್ವಾಮೀಜಿ ಪ್ರೌಢಶಾಲೆಯಲ್ಲಿ 30 ವರ್ಷಕ್ಕೂ ಹೆಚ್ಚು ಕಾಲ ಅಧ್ಯಾಪಕರಾಗಿದ್ದ ಪುಣಿಂಚಿತ್ತಾಯರು 1991ರಲ್ಲಿ ರಾಷ್ಟ್ರ ಪ್ರಶಸ್ತಿ ಗಳಿಸಿದ್ದರು. ತುಳು ಭಾಷೆಗೆ ಲಿಪಿಯನ್ನು ಕಂಡುಹಿಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕೇರಳ ಸರ್ಕಾರದ ತುಳು ಅಕಾಡೆಮಿ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ಅತಿ ಪ್ರಾಚೀನ ತಾಡವೋಲೆಗಳಾದ ಶ್ರೀ ಭಾಗವತೊ (2 ಸಾವಿರ ಪದ್ಯಗಳುಳ್ಳ ತುಳು ಮಹಾಕಾವ್ಯ), ಕಾವೇರಿ (ತುಳು ಕಾವ್ಯ), ತುಳು ದೇವಿ ಮಹಾತ್ಮೆ (ತುಳು ಗದ್ಯ) ಗ್ರಂಥಗಳನ್ನು ಪತ್ತೆ ಹಚ್ಚಿ, ಅವುಗಳನ್ನು ತುಳುವಿನಿಂದ ಕನ್ನಡಕ್ಕೆ ತರ್ಜಮೆಗೊಳಿಸಿ, ವಿಸ್ತಾರವಾದ ಪೀಠಿಕೆ, ಅಡಿ ಟಿಪ್ಪಣಿ, ಅರ್ಥಕೋಶದೊಂದಿಗೆ ಸಂಪಾದಿಸಿ, ತುಳು ಭಾಷೆಗೆ ಇತರ ಭಾಷೆಯೊಂದಿಗೆ ಸಮಾನತೆ ಒದಗಿಸಿಕೊಟ್ಟ ಸಾಧನೆ ಪುಣಿಂಚಿತ್ತಾಯರದ್ದು. `ಶ್ರೀ ಭಾಗವತೊ~ ತುಳುವಿನ ಆದಿಕಾವ್ಯ ಎಂಬ ಕೀರ್ತಿ ಗಳಿಸಿದೆ.
ಶೈಲೂಷಿ, ಸುಭಾಷಿತ ಲಹರಿ, ಜೋಕಾಲಿ, ನನ್ನಜ್ಜನಿಗೊಂದಾನೆಯಿತ್ತು, ಮೊಗವೀರ ಸಂಸ್ಕೃತಿ, ಕೇರಳ ವರ್ಣ ಚಿತ್ರ ಲೋಕ, ಶಂಕರ ವಿಜಯ, ಅಲಡೆ ಮೊದಲಾದ ವಿವಿಧ ವಿಚಾರಗಳ ಕೃತಿಗಳನ್ನು ಬರೆದಿದ್ದಾರೆ. ಅನೇಕ ಸಂಸ್ಕೃತ ನಾಟಕಗಳು, ಶಿಶುಗೀತೆಗಳು, ಹಾಸ್ಯ ಮುಕ್ತಕಗಳು, ಕಬೀರ, ತುಳಸೀದಾಸ, ರಹೀಮರ ದೋಹಾಗಳ ಕನ್ನಡಾನುವಾದ, ಅನೇಕ ಯಕ್ಷಗಾನ ಪ್ರಸಂಗಗಳು ಪ್ರಕಟವಾಗಬೇಕಿವೆ. ತುಳು, ಕನ್ನಡ, ಮಲಯಾಳ ಭಾಷೆಯ ಸುಮಾರು 40ರಷ್ಟು ಭಕ್ತಿಪ್ರದಾನ ಧ್ವನಿಸುರುಳಿಗಳಿಗೆ ಸಾಹಿತ್ಯ ರಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.