ADVERTISEMENT

ಸಿಂಗ್‌– ಷರೀಫ್‌ ಮಾತುಕತೆಗೆ ವೇದಿಕೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 19:55 IST
Last Updated 25 ಸೆಪ್ಟೆಂಬರ್ 2013, 19:55 IST

ನವದೆಹಲಿ (ಪಿಟಿಐ): ಅಮೆರಿಕ ಭೇಟಿ ವೇಳೆ ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಅವರೊಂದಿಗೆ ಮಾತುಕತೆ ನಡೆಸಲಿರುವುದಾಗಿ ಪ್ರಧಾನಿ ಮನ ಮೋಹನ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ನೇಪಾಳ ಸೇರಿದಂತೆ ನೆರೆಯ ದೇಶಗಳ ಮುಖ್ಯಸ್ಥರೊಂದಿಗೆ  ದ್ವಿಪಕ್ಷೀಯ ಮಾತುಕತೆ ನಡೆಸಲು ಆಸಕ್ತಿ ಹೊಂದಿರುವುದಾಗಿ ಅವರು ಪ್ರವಾಸ ಆರಂಭಕ್ಕೂ  ಮೊದಲು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.  

ಸಿಂಗ್‌ ಹಾಗೂ ಷರೀಫ್‌ ಅವರು ಇದೇ 29 ರಂದು ನ್ಯೂಯಾರ್ಕ್‌ನಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ.

ಪಾಕಿಸ್ತಾನ ನಡೆಸುತ್ತಿರುವ ಭಯೋ ತ್ಪಾದನಾ ಕೃತ್ಯಗಳೇ  ಪ್ರಮುಖವಾಗಿ ಉಭಯ ನಾಯಕರ ನಡುವೆ ಚರ್ಚೆಯಾಗುವುದು ನಿಚ್ಚಳವಾಗಿದೆ.

  ಅಮೆರಿಕ ವೀಸಾ ನಿಯಮ ಚರ್ಚೆ: ಅಮೆರಿಕ ಭೇಟಿ ವೇಳೆ ಅಲ್ಲಿನ ಅಧ್ಯಕ್ಷ ಬರಾಕ್‌ ಒಬಾಮ ಅವರೊಂದಿಗೆ ಸಿಂಗ್‌ ಮಾತುಕತೆ ನಡೆಸಲಿದ್ದಾರೆ.
ಈ ವೇಳೆ ಭಾರತದ ಐಟಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ಅಮೆರಿಕದ ಹೊಸ ವೀಸಾ ನಿಯಮಗಳ ಬಗ್ಗೆ ಸಿಂಗ್‌್ ಚರ್ಚೆ ನಡೆಸಲಿದ್ದಾರೆ.

  ಅಲ್ಲದೆ ಆಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ, ಸಿರಿಯಾ ಬಿಕ್ಕಟ್ಟು, ಪರಮಾಣು ಕ್ಷೇತ್ರ ಮತ್ತು ರಕ್ಷಣಾ ವಲಯಗಳಲ್ಲಿನ ಸಹಕಾರ ಮುಂತಾದವುಗಳ ಬಗ್ಗೆ ಮಾತುಕತೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.