ADVERTISEMENT

ಸಿಎಜಿ ಅಧಿಕಾರ ಪ್ರಶ್ನಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 8:20 IST
Last Updated 1 ಅಕ್ಟೋಬರ್ 2012, 8:20 IST
ಸಿಎಜಿ ಅಧಿಕಾರ ಪ್ರಶ್ನಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ
ಸಿಎಜಿ ಅಧಿಕಾರ ಪ್ರಶ್ನಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ   

ನವದೆಹಲಿ (ಪಿಟಿಐ): `ಮಹಾಲೇಖಪಾಲರು (ಸಿಎಜಿ) ಲೆಕ್ಕದ ಗುಮಾಸ್ತರಲ್ಲ~ ಎಂದು ಸೋಮವಾರ ಹೇಳಿರುವ ಸುಪ್ರೀಂ ಕೋರ್ಟ್ ಸಿಎಜಿ ಅಧಿಕಾರ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯೊಂದನ್ನು ವಜಾಗೊಳಿಸಿದೆ.
 
ಯುಪಿಎ ಸರ್ಕಾರದ ಗಣಿ ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದ ಸಿಎಜಿ ವರದಿಯ ಹಿನ್ನೆಲೆಯಲ್ಲಿ ಅರವಿಂದ ಗುಪ್ತಾ ಎನ್ನುವವರು ಸಿಎಜಿ ಅಧಿಕಾರ ವ್ಯಾಪ್ತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಆರ್.ಎಮ್.ಲೋಧ ಹಾಗೂ ಎ.ಆರ್.ಡೇವ್ ಅವರನ್ನು ಒಳಗೊಂಡ ನ್ಯಾಯಪೀಠವು ಅರ್ಜಿ ವಜಾಗೊಳಿಸಿತು.

ಇದೇ ವೇಳೆ ಪೀಠವು `ಸಿಎಜಿ ಒಂದು ಸಾಂವಿಧಾನಿಕ ಪ್ರಾಧಿಕಾರವಾಗಿದೆ. ಅದು ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆದಾಯ ಹಂಚಿಕೆ ಕುರಿತಂತೆ ಲೆಕ್ಕಪತ್ರಗಳ ತಪಾಸಣೆ ನಡೆಸಲು ಅರ್ಹತೆ ಹೊಂದಿದೆ~ ಎಂದು ಹೇಳಿತು.

`ಸಿಎಜಿ ಲೆಕ್ಕದ ಗುಮಾಸ್ತರಲ್ಲ. ಅದು ಒಂದು ಸಂವಿಧಾನಿಕ ಪ್ರಾಧಿಕಾರವಾಗಿದ್ದು, ಆರ್ಥಿಕತೆಗೆ ಸಂಬಂಧಿಸಿದ ವಿಷಯಗಳನ್ನು ಪರೀಕ್ಷೆಗೆ ಒಳಪಡಿಸುವ ಅಧಿಕಾರ ಹೊಂದಿದೆ. ಸಿಎಜಿ ವರದಿಯನ್ನು ಅಂಗೀಕರಿಸುವುದು ಇಲ್ಲವೇ, ತಿರಸ್ಕರಿಸುವುದು ಸಂಸತ್ತಿಗೆ ಬಿಟ್ಟ ವಿಷಯ ~ ಎಂದು ನ್ಯಾಯಾಲಯದಲ್ಲಿ ಹಾಜರಿದ್ದ ಗುಪ್ತಾ ಪರ ವಕೀಲರಾದ ಸಂತೋಷ್ ಪಾಲ್ ಅವರಿಗೆ ನ್ಯಾಯಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT