ADVERTISEMENT

ಸಿಎಜಿ: ನಾರಾಯಣಸ್ವಾಮಿ ಹೇಳಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 19:30 IST
Last Updated 18 ಆಗಸ್ಟ್ 2012, 19:30 IST

ನವದೆಹಲಿ (ಐಎಎನ್‌ಎಸ್): ಮಹಾಲೇಖಪಾಲರು (ಸಿಎಜಿ) ತಮ್ಮ ವ್ಯಾಪ್ತಿ ಮೀರಿ ಕೆಲಸ ಮಾಡಿದ್ದಾರೆ ಎಂಬ ಸಚಿವ ವಿ. ನಾರಾಯಣಸ್ವಾಮಿ ಹೇಳಿಕೆಯನ್ನು ಬಿಜೆಪಿ ಬಲವಾಗಿ ಖಂಡಿಸಿದ್ದು, ಇದರಿಂದ ಮಹಾಲೇಖಪಾಲರ ಹಕ್ಕುಚ್ಯುತಿಯಾಗಿದೆ ಎಂದು ಹೇಳಿದೆ.

ಪ್ರಧಾನಿ ಕಾರ್ಯಾಲಯದಲ್ಲಿ ರಾಜ್ಯ ಸಚಿವರ ಹುದ್ದೆ ಸೇರಿದಂತೆ ಹಲವು ಖಾತೆಗಳ ಉಸ್ತುವಾರಿ ಹೊತ್ತಿರುವ ನಾರಾಯಣಸ್ವಾಮಿ ಅವರು ಶುಕ್ರವಾರ ಸಿಎಜಿ ವರದಿಗೆ ಪ್ರತಿಕ್ರಿಯಿಸಿ, ಸಂವಿಧಾನದ ಅಡಿ ಮಹಾಲೇಖಪಾಲರ ಕಾರ್ಯನಿರ್ವಹಣೆಗೆ ನಿರ್ದಿಷ್ಟ ನಿಯಮಾವಳಿಗಳು ಇವೆ. ಆದರೆ, ದುರದೃಷ್ಟವಶಾತ್ ಸಿಎಜಿ ಈ ನಿಯಮಾವಳಿ ಪಾಲಿಸಿಲ್ಲ ಎಂದು ಟೀಕಿಸಿದ್ದರು.

`ಮಂಗಳವಾರ ಸಂಸತ್ತಿನ ಕಲಾಪ ಆರಂಭವಾದಾಗ ನಾವು ಈ ಹೇಳಿಕೆಯ ವಿಚಾರ ಎತ್ತುತ್ತೇವೆ. ಇದರಿಂದಾಗಿ `ಸಿಎಜಿ~ ಹಕ್ಕುಚ್ಯುತಿಯಾಗಿದೆ~ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ವರದಿಗಾರರಿಗೆ ತಿಳಿಸಿದರು.

ನೈಸರ್ಗಿಕ ಸಂಪತ್ತು ಲೂಟಿ
ಕೊಯಮತ್ತೂರು (ಪಿಟಿಐ): 
ಅರ್ಜಿ ಸಲ್ಲಿಸಿದ ಕಂಪೆನಿಗೆ ಆದ್ಯತೆಯ ಮೇರೆಗೆ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಮಾಡಿರುವುದರಿಂದ ಯುಪಿಎ ಸರ್ಕಾರ ದೇಶದ ನೈಸರ್ಗಿಕ ಸಂಪನ್ಮೂಲ ಲೂಟಿ ಮಾಡುವಲ್ಲಿ ಖಾಸಗಿ ಕಂಪೆನಿಗಳ ಜತೆ ಕೈಜೋಡಿಸಿದಂತಾಗಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಹೇಳಿದ್ದಾರೆ.

ಸ್ಪರ್ಧಾತ್ಮಕ ಹರಾಜಿನ ಬದಲಾಗಿ ಅರ್ಜಿ ಸಲ್ಲಿಸಿದವರಿಗೆ ನಿಕ್ಷೇಪ ಹಂಚಿಕೆ ಮಾಡಿರುವುದರಿಂದ ದೇಶದ ಬೊಕ್ಕಸಕ್ಕೆ ನಷ್ಟ ಮಾಡಿ, ಟಾಟಾಗಳು, ಬಿರ್ಲಾಗಳು ಹಾಗೂ ಜಿಂದಾಲ್‌ಗಳಿಗೆ ಸರ್ಕಾರ ಲಾಭ ಮಾಡಿಕೊಟ್ಟಿದೆ. ಇಡೀ ಪ್ರಕರಣದ ಕುರಿತು ವಿಸ್ತೃತ ತನಿಖೆಯಾಗಬೇಕು. ತಪ್ಪಿತಸ್ಥರನ್ನು ಜೈಲಿಗೆ ಹಾಕಬೇಕು ಎಂದೂ ಕಾರಟ್ ವಾಗ್ದಾಳಿ ಮಾಡಿದ್ದಾರೆ.   ದೆಹಲಿ ವಿಮಾನ ನಿಲ್ದಾಣದ ಖಾಸಗೀಕರಣದ ವಿರುದ್ಧವೂ ಕಾರಟ್ ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.