ADVERTISEMENT

ಸಿದ್ಧಾರ್ಥ ಮಲ್ಯಗೆ ಜೋಹಾಲ್ ಲೀಗಲ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 19 ಮೇ 2012, 9:40 IST
Last Updated 19 ಮೇ 2012, 9:40 IST

ನವದೆಹಲಿ (ಪಿಟಿಐ): ಆಸ್ಟ್ರೇಲಿಯಾದ ಕ್ರಿಕೆಟಿಗ ತನ್ನ ಮಾನಭಂಗ ಮಾಡಿರುವುದಾಗಿ ಆರೋಪಿಸಿರುವ ಭಾರತೀಯ ಮೂಲದ ಅಮೆರಿಕನ್ ಮಹಿಳೆ ಜೋಹಾಲ್ ಹಮೀದ್ ಅವರು ತನ್ನ ಚಾರಿತ್ರ್ಯದ ಬಗ್ಗೆ ಲಘುವಾಗಿ ಮಾತನಾಡಿದ್ದಕ್ಕಾಗಿ 48 ಗಂಟೆಗಳ ಒಳಗೆ ಕ್ಷಮೆ ಯಾಚಿಸುವಂತೆ ಇಲ್ಲವೇ ಕಾನೂನು ಕ್ರಮ ಎದುರಿಸುವಂತೆ ಸಿದ್ಧಾರ್ಥ ಮಲ್ಯ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಸಿದ್ಧಾರ್ಥ ಮಲ್ಯ ಅವರು ಶುಕ್ರವಾರ ಪ್ರಕಟಿಸಿದ ಟ್ವಿಟ್ಟರ್ ಸಂದೇಶ ವಿರುದ್ಧ ದೆಹಲಿಯ ಮಹಿಳಾ ಆಯೋಗಕ್ಕೂ ಅಮೆರಿಕನ್ ಮಹಿಳೆ ದೂರು ನೀಡಿದ್ದಾರೆ.

ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಪರ ಆಟಗಾರ ಆಸ್ಟ್ರೇಲಿಯಾದ ಲ್ಯೂಕ್ ಪೊಮರ್ಸ್ ಬ್ಯಾಚ್ ಅವರು ಪಂಚತಾರಾ ಹೋಟೆಲ್ ಒಂದರಲ್ಲಿ ತನ್ನ ಮಾನಭಂಗ ಮಾಡಿದ್ದಲ್ಲದೆ ಭಾವೀ ವರ ಸಾಹಿಲ್ ಪೀರ್ ಜಾದಾ ಮೇಲೂ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ಜೋಹಾಲ್ ಹಮೀದ್ ಮಾಡಿದ ಆರೋಪವನ್ನು ಅನುಸರಿಸಿ ಆಸ್ಟ್ರೇಲಿಯಾ ಕ್ರಿಕೆಟಿಗನನ್ನು ಬಂಧಿಸಿದ ಬಳಿಕ ಸಿದ್ದಾರ್ಧ ಮಲ್ಯ ಘಟನೆ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದರು.

~ನನಗೆ ನಿಜವಾಗಿಯೂ ನೋವಾಗಿದೆ.ನನಗೆ ಭ್ರಮ ನಿರಸನವಾಗಿದೆ. ಅದು ತಪ್ಪು ಹೇಳಿಕೆ. ನನ್ನ ವಕೀಲರು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ~ ಎಂದು ಹಮೀದ್ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ತಂದೆ ವಿಜಯ ಮಲ್ಯ ಅವರು ಕಟ್ಟಿದ ರಾಯಲ್ ಚಾಲೆಂಜರ್ಸ್ ತಂಡದ ನಿರ್ದೇಶಕ ಸಿದ್ಧಾರ್ಥ ಅವರು ಅಮೆರಿಕನ್ ಮಹಿಳೆ ಅಸಂಬದ್ಧ ಮಾತುಗಳನ್ನು ಆಡುತ್ತಿರುವುದಾಗಿಯೂ, ಆಕೆ ಕಳೆದ ರಾತ್ರಿ (ಗುರುವಾರ) ತನ್ನ ಜೊತೆಗಿದ್ದುದಾಗಿಯೂ ತನ್ನ ಬಿಬಿಎಂ (ಬ್ಲ್ಯಾಕ್ ಬೆರ್ರಿ ಮೆಸೆಂಜರ್) ಪಿನ್ ಕೇಳುತ್ತಿದ್ದುದಾಗಿಯೂ ಸಿದ್ಧಾರ್ಥ ಆಪಾದಿಸಿದ್ದರು.

ತಾನು ಭಾವೀ ವರ ಸಾಹಿಲ್ ಪೀರ್ ಜಾದಾ ಕೂಡಾ ಆಹ್ವಾನಿತನಾಗಿದ್ದುದರಿಂದ ಆತನ ಜೊತೆಗೆ ಐಪಿಎಲ್ ಪಾನಕೂಟಕ್ಕೆ ಹೋಗಿದ್ದುದಾಗಿ ಹೇಳಿದ ಜೋಹಾಲ್ ಹಮೀದ್, ~ಅಲ್ಲಿ ಮಲ್ಯ (ಸಿದ್ಧಾರ್ಧ) ಭೇಟಿಯಾಗಿದ್ದರು. ಸಾಹಿಲ್ ನನ್ನ ಜೊತೆಗಿದ್ದರು~ ಎಂದು ನುಡಿದರು.

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷ ಬರ್ಖಾ ಸಿಂಗ್ ಅವರು ~ಹಮೀದ್ ಅವರು ಸಿದ್ಧಾರ್ಥ ವಿರುದ್ಧ ನೀಡಿದ ದೂರು ಬಂದಿದೆ. ವಿಷಯವನ್ನು ಸೋಮವಾರ ಪರಿಶೀಲನೆಗೆ ಎತ್ತಿಕೊಳ್ಳಲಾಗುವುದು~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.