ADVERTISEMENT

ಸಿಬಿಐನಿಂದ ಪ್ರಥಮ ಆರೋಪಪಟ್ಟಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2011, 19:00 IST
Last Updated 2 ಏಪ್ರಿಲ್ 2011, 19:00 IST
ಸಿಬಿಐನಿಂದ ಪ್ರಥಮ ಆರೋಪಪಟ್ಟಿ ಸಲ್ಲಿಕೆ
ಸಿಬಿಐನಿಂದ ಪ್ರಥಮ ಆರೋಪಪಟ್ಟಿ ಸಲ್ಲಿಕೆ   

ನವದೆಹಲಿ(ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶನಿವಾರ ಮೊದಲ ಆರೋಪಪಟ್ಟಿ ಸಲ್ಲಿಸಿದೆ.ಬೊಕ್ಕಸಕ್ಕೆ 30,984 ಕೋಟಿ ನಷ್ಟ ಉಂಟುಮಾಡಿದ ಈ ಹಗರಣದಲ್ಲಿ ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಮತ್ತು ಇತರ ಎಂಟು  ಆರೋಪಿಗಳು ಎಂದು ತಿಳಿಸಲಾಗಿದೆ.

ಈ ಹಗರಣದ ತನಿಖೆಗಾಗಿಯೇ ರಚಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಒ.ಪಿ.ಸೈನಿ ಅವರಿಗೆ 80 ಸಾವಿರ ಪುಟಗಳ ಈ ಆರೋಪಪಟ್ಟಿ ಸಲ್ಲಿಸಲಾಯಿತು.ಆರೋಪಪಟ್ಟಿಯಲ್ಲಿ ಮಾಜಿ ದೂರಸಂಪರ್ಕ ಕಾರ್ಯದರ್ಶಿ ಸಿದ್ಧಾರ್ಥ ಬೆಹುರಾ ಮತ್ತು ಮೂರು ಟೆಲಿಕಾಂ ಕಂಪೆನಿಗಳಾದ ರಿಲಾಯನ್ಸ್, ಯೂನಿಟೆಕ್ ವೈರ್‌ಲೆಸ್  ಮತ್ತು ಸ್ವ್ಯಾನ್ ಟೆಲಿಕಾಂಗಳ ಹೆಸರುಗಳು ಸೇರಿವೆ. ಸುಪ್ರೀಂಕೋರ್ಟ್ ಈ ಪ್ರಕರಣದ ತನಿಖೆಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಈ ತಿಂಗಳಲ್ಲಿ ಪೂರಕ ಆರೋಪಪಟ್ಟಿ ಸಲ್ಲಿಸಲಾಗುತ್ತದೆ.

 ರಾಜಾ, ಅವರ ಆಪ್ತ ಕಾರ್ಯದರ್ಶಿ ಆರ್.ಕೆ. ಚಂಡೋಲಿಯಾ, ಬೆಹುರಾ ಮತ್ತು ಸ್ವ್ಯಾನ್ ಟೆಲಿಕಾಂ ಪ್ರವರ್ತಕರಾದ ಶಾಹಿದ್ ಉಸ್ಮಾನ್ ಬಲ್ವಾ ವಿರುದ್ಧ ವಂಚನೆ, ನಕಲಿ, ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ಆರೋಪ ಹೊರಿಸಲಾಗಿದೆ.ಹೊಸದಾಗಿ ಜಾರಿಗೆ ತರಲಾದ ದೂರಸಂಪರ್ಕ ಪರವಾನಗಿ (ಯೂನಿಫೈಡ್ ಅಸೆಸ್ ಸರ್ವೀಸಸ್ ಲೈಸೆನ್ಸ್) ವ್ಯವಸ್ಥೆ ಮತ್ತು ಅದರ ಆಧಾರದಲ್ಲಿ 2ಜಿ ತರಂಗಾಂತರ ಹಂಚಿಕೆಯಲ್ಲಿ 2008-09ರಲ್ಲಿ ಕಮಿಷನ್ ರೂಪದಲ್ಲಿ ಭಾರಿ ಅಕ್ರಮ ನಡೆದಿದೆ. ಇದು ಭಾರತೀಯ ದಂಡ ಸಂಹಿತೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯನ್ವಯ ಅಪರಾಧವಾಗುತ್ತದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಿದೆ.

 ಆರೋಪಪಟ್ಟಿಯಲ್ಲಿ ಹೆಸರಿಸಿದ ಇತರೆಂದರೆ ಮುಂಬೈ ಮೂಲದ ಡಿ.ಬಿ.ರಿಯಾಲ್ಟಿಯ ನಿರ್ದೇಶಕ ವಿನೋದ್ ಗೋಯೆಂಕಾ, ಗುಡ್‌ಗಾಂವ್ ಮೂಲದ ರಿಯಲ್ ಎಸ್ಟೇಟ್ ಕಂಪೆನಿ ಯೂನಿಟೆಕ್ ಆ್ಯಂಡ್ ಯೂನಿಟೆಕ್ ವೈರ್‌ಲೆಸ್ (ತಮಿಳುನಾಡು) ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಚಂದ್ರ, ರಿಲಾಯನ್ಸ್ ಟೆಲಿಕಾಂ ಕಂಪೆನಿ ಮೂವರು ಹಿರಿಯ ಅಧಿಕಾರಿಗಳಾದ ಗೌತಮ್ ದೋಶಿ, ಹರಿ ನಾಯರ್ ಮತ್ತು ಸುರೇಂದ್ರ ಪಿಪಾರಾ.

2ಜಿ ತರಂಗಾಂತರ ಹಂಚಿಕೆಯಲ್ಲಿ ಎಸಗಿದ ಅಕ್ರಮಗಳಿಂದ ಬೊಕ್ಕಸಕ್ಕೆ ರೂ 1.76 ಲಕ್ಷ ಕೋಟಿ ನಷ್ಟ ಉಂಟಾಗಿದೆ ಎಂದು ಸಿಎಜಿ ತಮ್ಮ ವರದಿಯಲ್ಲಿ ತಿಳಿಸಿದ್ದರು.ಆರೋಪಪಟ್ಟಿಯನ್ನು ಸ್ವೀಕರಿಸಿದ ವಿಶೇಷ ನ್ಯಾಯಾಧೀಶ ಸೈನಿ ಅವರು ಬಂಧಿತರಾಗಿಲ್ಲದ ಆರೋಪಿಗಳು ಏ. 13ರಂದು ತಮ್ಮ ಮುಂದೆ ಹಾಜರಾಗುವಂತೆ ಸೂಚನೆ ನೀಡಿದರು. ಈ ಹಗರಣದಿಂದ ಅತ್ಯಂತ ದೊಡ್ಡದಾಗಿ ಲಾಭ ಮಾಡಿಕೊಂಡವರೆಂದರೆ ಯೂನಿಟೆಕ್ ವೈರ್‌ಲೆಸ್ ಕಂಪೆನಿ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. 2ಜಿ ತರಂಗಾಂತರ ಹಂಚಿಕೆಯಲ್ಲಿ ಯೂನಿಟೆಕ್ ವೈರ್‌ಲೆಸ್ ಮತ್ತು ಸ್ವ್ಯಾನ್ ಟೆಲಿಕಾಂಗಳು ಮಾತ್ರ ಅರ್ಹ ಎರಡು ಕಂಪೆನಿಗಳಾಗಿದ್ದವು ಎಂಬುದನ್ನು ಬೆಟ್ಟುಮಾಡಿ ತೋರಿಸಲಾಗಿದೆ. ಸ್ವ್ಯಾನ್ ಟೆಲಿಕಾಂ ಕಂಪೆನಿ ರಿಲಾಯನ್ಸ್ ಟೆಲಿಕಾಂಗೆ 2ಜಿ ತರಂಗಾಂತರ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದು ತಿಳಿಸಲಾಗಿದೆ. 

ಕಲೈಞ್ಞರ್ ಟಿವಿ ಪ್ರೈ.ಲಿ., ಸಿನಿಯುಗ್ ಫಿಲ್ಸ್ಮ್, ಗ್ರೀನ್ ಹೌಸ್ ಪ್ರೈ.ಲಿ. ಮತ್ತು ಕುಸೆಗಾನ್ ಫೂರ್ಯೃಟ್ಸ್ ಆ್ಯಂಡ್ ವೆಜಿಟೆಬಲ್ಸ್ ಪ್ರೈ.ಲಿ.ಗಳ ಕಾರ್ಯವೈಖರಿಗಳು ಸದ್ಯ ತನ್ನ ಪರಿಶೀಲನೆಯಲ್ಲಿ ಇವೆ ಎಂದು ಸಿಬಿಐ ತಿಳಿಸಿದೆ. ತಮಿಳುನಾಡಿನ ಮುಖ್ಯಮಂತ್ರಿ ಕೆ. ಕರುಣಾನಿಧಿ ಅವರ ಸಂಸದೆ ಪುತ್ರಿ ಕನಿಮೋಳಿ ಮತ್ತು ಪತ್ನಿ ದಯಾಳು ಅಮ್ಮಾಳ್ ಮತ್ತು ಕಲೈಞ್ಞರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ಶರದ್ ಕುಮಾರ್ ಅವರು ಚಾನೆಲ್‌ನಲ್ಲಿ ಕ್ರಮವಾಗಿ ಶೇ 20, 60 ಮತ್ತು 20ರಷ್ಟು ಪಾಲು ಹೊಂದಿದ್ದಾರೆ. ಈ ಬೃಹತ್ ಆರೋಪಪಟ್ಟಿಯಲ್ಲಿ 654 ದಾಖಲೆಗಳನ್ನು ಮತ್ತು 125 ಸಾಕ್ಷಿಗಳನ್ನು ಉಲ್ಲೇಖಿಲಾಗಿದೆ.

2ಜಿ ಹಗರಣಕ್ಕೆ ಸಂಬಂಧಿಸಿದ ಹಣ ಬಲ್ವಾ ಅವರ ಕಂಪೆನಿಯಿಂದಸಿನಿಯುಗ್ ಫಿಲ್ಸ್ಮ್ ಮತ್ತು ಕುಸೆಗಾನ್ ಫೂರ್ಯೃಟ್ಸ್ ಆ್ಯಂಡ್ ವೆಜಿಟೆಬಲ್ಸ್ ಪ್ರೈ.ಲಿ. ಮೂಲಕ ಕಲೈಞ್ಞರ್ ಟಿವಿಗೆ ತಲುಪಿತ್ತು. ಕುಸೆಗಾನ್ ಕಂಪೆನಿಯ ನಿರ್ದೇಶಕರಾದ ಆಸಿಫ್ ಬಲ್ವಾ ಮತ್ತು ರಾಜೀವ್ ಅಗರ್‌ವಾಲ್ ಅವರನ್ನು ಮಾರ್ಚ್ 29ರಂದು ಬಂಧಿಸಲಾಗಿತ್ತು. ಅಗರ್‌ವಾಲ್ ಅವರು ಸಿನಿಯುಗ್ ಬ್ಯಾಂಕ್ ಖಾತೆ ಮೂಲಕ ಕಲೈಞ್ಞರ್  ಟಿವಿಗೆ 200 ಕೋಟಿ ರೂಪಾಯಿ ರವಾನಿಸಿದ್ದರು.

ರಾಜಾ ಅವರ ನಿಕಟವರ್ತಿಯಾದ ಸಾದಿಕ್ ಬಚ್ಚಾ ಕಳೆದ ತಿಂಗಳು ಚೆನ್ನೈನಲ್ಲಿ ನಿಗೂಢ ರೀತಿಯಲ್ಲಿ ಸತ್ತಿದ್ದರು. ಅವರು ಗ್ರೀನ್‌ಹೌಸ್ ಪ್ರೊಮೋಟರ್ಸ್‌ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಬಚ್ಚಾ ಅವರ ಸಾವಿನಲ್ಲಿ ಒ.ಬಿ.ರಿಯಾಲ್ಟಿ ಮತ್ತು ಗ್ರೀನ್‌ಹೌಸ್ ಪ್ರಮೋಟರ್ಸ್‌ ಕಂಪೆನಿಗಳ ನಡುವಿನ ಹಣದ ವ್ಯವಹಾರದ ಸಂಪರ್ಕ ಇದ್ದಿರುವ ಸಾಧ್ಯತೆ ಇದೆ ಎಂದು ಸಿಬಿಐ ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.