ADVERTISEMENT

ಸಿಬಿಐನಿಂದ ಶೌರಿಗೆ ಬುಲಾವ್

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 18:30 IST
Last Updated 13 ಫೆಬ್ರುವರಿ 2011, 18:30 IST

ನವದೆಹಲಿ (ಪಿಟಿಐ): ದೂರಸಂಪರ್ಕ ನೀತಿಯನ್ನು ಜಾರಿಗೊಳಿಸುವಲ್ಲಿ ನಡೆದಿರಬಹುದಾದ ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ, ಎನ್‌ಡಿಎ ಅಧಿಕಾರಾವಧಿಯಲ್ಲಿ ದೂರಸಂಪರ್ಕ ಸಚಿವರಾಗಿದ್ದ ಅರುಣ್ ಶೌರಿ ಅವರಿಗೆ ಬುಲಾವ್ ನೀಡಿದೆ. ಅವರು ಫೆ. 21ರಂದು ತನಿಖಾ ಸಂಸ್ಥೆಯ ಮುಂದೆ ಹಾಜರಾಗಲಿದ್ದಾರೆ.

2001ರಿಂದೀಚೆಗೆ ನಡೆದಿರುವ ದೂರಸಂಪರ್ಕ ನೀತಿ ಪಾಲನೆ ಬಗ್ಗೆ ತನಿಖೆ ನಡೆಸಬೇಕು ಎಂಬ ಸುಪ್ರೀಂ ಕೋರ್ಟ್‌ನ ಸೂಚನೆಯ ಮೇರೆಗೆ ಸಿಬಿಐ ಇದೀಗ ಆರಂಭಿಕ ವಿಚಾರಣೆಗೆ ತೊಡಗಿದ್ದು, ತನ್ನ ಮುಂದೆ ಹಾಜರಾಗಬೇಕು ಎಂದು ಅದು ಕಳೆದ ವಾರ ಶೌರಿ ಅವರಿಗೆ ಸೂಚಿಸಿತ್ತು. ‘ಅನಾಮಿಕ ವ್ಯಕ್ತಿ’ಗಳ ವಿರುದ್ಧ ಈ ಪ್ರಾಥಮಿಕ ತನಿಖೆ ಕೈಗೊಳ್ಳಲಾಗಿದೆ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸಂಪುಟವು ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ನೀತಿ ನಿರೂಪಿಸಿತ್ತು.
 
ಈ ನೀತಿಯನ್ನು ಅನುಸರಿಸಲಾಗಿದೆಯೇ, ಇಲ್ಲವೇ ಎಂಬುದು ಈ ಹಂತದ ತನಿಖೆಯ ಮುಖ್ಯ ಅಂಶವಾಗಿದೆ.ಆದರೆ ಸಿಬಿಐಯಿಂದ ನೇರವಾಗಿ ತಮಗೆ ಕರೆ ಬಂದಿಲ್ಲ ಎಂದು ಹೇಳಿಕೊಂಡಿರುವ ಶೌರಿ, ತಾವು ಮನೆಯಲ್ಲಿ ಇಲ್ಲದಿದ್ದಾಗ ಯಾರೋ ಮನೆಗೆ ಕರೆ ಮಾಡಿದ್ದರು, ತಾವು ಬಳಿಕ ಸಿಬಿಐ ಅನ್ನು ಸಂಪರ್ಕಿಸಿ ಕೋಲ್ಕತ್ತದಿಂದ ಹಿಂದಿರುಗಿದ ಬಳಿಕ ಫೆ.21ರಂದು ಹಾಜರಾಗುವುದಾಗಿ ತಿಳಿಸಿದ್ದಾಗಿ ಹೇಳಿದ್ದಾರೆ.

ಸಿಬಿಐ ತನ್ನ ವಿಚಾರಣೆ ಸಂದರ್ಭದಲ್ಲಿ ಮಾಜಿ ಟೆಲಿಕಾಂ ಸಚಿವರುಗಳಾದ ಪ್ರಮೋದ್ ಮಹಾಜನ್, ಅರುಣ್ ಶೌರಿ ಮತ್ತು ದಯಾನಿಧಿ ಮಾರನ್ ಅವರ ಅಧಿಕಾರ ಅವಧಿಯಲ್ಲಿ ನಡೆದ ಪ್ರತಿಯೊಂದು ಸಭೆಗಳ ನಡಾವಳಿಗಳನ್ನೂ ಪರಿಶೀಲಿಸಲಿದೆ.  ಸುಮಾರು 50 ಪರವಾನಗಿಗಳನ್ನು ಮೊದಲು ಬಂದವರಿಗೆ ಮೊದಲ ಆದ್ಯತೆ ಮೇಲೆ ನೀಡಲಾಗಿತ್ತು.
 
ಹೀಗೆ ಪರವಾನಗಿ ಪಡೆದ ಕಂಪೆನಿಗಳಲ್ಲಿ ಭಾರ್ತಿ, ವೊಡಾಫೋನ್, ಐಡಿಯಾ ಮತ್ತಿತರ ಕಂಪೆನಿಗಳು ಸೇರಿವೆ ಎಂದು ಸಿಬಿಐ ಮೂಲಗಳಿಂದ ಗೊತ್ತಾಗಿದೆ.
ಸಿಬಿಐಯು ಗುತ್ತಿಗೆ ನೀಡಲಾದ ಕಂಪೆನಿಗಳ ದಾಖಲೆಗಳನ್ನೂ ಪರಿಶೀಲಿಸಲಿದೆ. ತಾವು ಸಿಬಿಐ ಮುಂದೆ ಹಾಜರಾಗುವಾಗ ಕೆಲವು ದಾಖಲೆಗಳನ್ನು ಸಲ್ಲಿಸುವುದಾಗಿ ಶೌರಿ ಹೇಳಿದ್ದಾರೆ.

ದೂರಸಂಪರ್ಕ ಕ್ಷೇತ್ರದಲ್ಲಿ ನಡೆದಿರುವ ಹಗರಣದ ಬಗ್ಗೆ ಕಳೆದ ಡಿಸೆಂಬರ್ 16ರಂದು ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, 2001ರಿಂದ ಮೊದಲ್ಗೊಂಡು ತನಿಖೆ ನಡೆಸುವಂತೆ ನಿರ್ದೇಶನ ನೀಡಿತ್ತು. ಅರುಣ್ ಶೌರಿ ಅವರ 2003ರ ಜನವರಿಯಿಂದ 2004ರ ಮೇ ತನಕ ದೂರಸಂಪರ್ಕ ಸಚಿವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.