ADVERTISEMENT

ಸಿಬಿಐ ಆರೋಪ ಪಟ್ಟಿಯಲ್ಲಿ ಸಬಿತಾ ಇಂದ್ರಾ ರೆಡ್ಡಿ

ಜಗನ್ ಅಕ್ರಮ ಆಸ್ತಿ ಗಳಿಕೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 9:35 IST
Last Updated 13 ಏಪ್ರಿಲ್ 2013, 9:35 IST

ಹೈದರಾಬಾದ್ (ಐಎಎನ್‌ಎಸ್): ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕ ವೈ.ಎಸ್.ಜಗನ್‌ಮೋಹನ್ ರೆಡ್ಡಿ ವಿರುದ್ಧ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳ ತಂಡ ಶನಿವಾರ ಭ್ರಷ್ಟಾಚಾರ ಶಂಕೆಯ ಆಧಾರದ ಮೇಲೆ ಆಂಧ್ರ ಪ್ರದೇಶದ ಗೃಹ ಸಚಿವೆ ಸಬಿತಾ ಇಂದ್ರಾ ರೆಡ್ಡಿ ಅವರ ಹೆಸರನ್ನು ತನ್ನ ಐದನೇ ಆರೋಪ ಪಟ್ಟಿಯಲ್ಲಿ ಸೇರಿಸಿದೆ.

ಇದರೊಂದಿಗೆ ಸಬಿತಾ ಇಂದ್ರಾ ರೆಡ್ಡಿ ಅವರು ಸಿಬಿಐ ಆರೋಪ ಪಟ್ಟಿಗಳಲ್ಲಿ ಹೆಸರು ದಾಖಲಾದ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರ ಸಚಿವ ಸಂಪುಟದ ಮೂರನೇ ಸಚಿವರಾಗಿದ್ದಾರೆ.

ಜಗನ್‌ಮೋಹನ್ ರೆಡ್ಡಿ ಅವರಿಗೆ ಸಂಬಂಧಿಸಿದ ಸಿಮೆಂಟ್ ಕಂಪೆನಿ ವ್ಯವಹಾರದಲ್ಲಿ ಅಕ್ರಮ ಬಂಡವಾಳ ಹೂಡಿದ ಆರೋಪ ಇವರ ಮೇಲಿದೆ.

ಇದರೊಂದಿಗೆ ಸಬಿತಾ ಅವರ ಮೇಲೆ ಅಧಿಕಾರ ದುರುಪಯೋಗ ಸೇರಿದಂತೆ, ವಂಚನೆ, ಒಳಸಂಚು/ ಪಿತೂರಿ ಮತ್ತು ಒಪ್ಪಂದ ಉಲ್ಲಂಘನೆ ಪ್ರಕರಣಗಳನ್ನು ಸಿಬಿಐ ಆರೋಪ ಪಟ್ಟಿಯಲ್ಲಿ ದಾಖಲಿಸಿದೆ.

 ಪ್ರಕರಣಕ್ಕೆ ಸಂಬಂಧಿಸಿದಂತೆ ಐದನೇ ಆರೋಪ ಪಟ್ಟಿಯನ್ನು ಇದೇ ವಾರದಲ್ಲಿ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಸಬಿತಾ ರೆಡ್ಡಿ ಅವರನ್ನು ಸಮರ್ಥಿಸಿಕೊಂಡಿದ್ದು, ಅವರು ರಾಜೀನಾಮೆ ನೀಡದಂತೆ ತಡೆಯುತ್ತಿದ್ದಾರೆ ಎನ್ನಲಾಗಿದೆ.

ಆದರೆ, ಪ್ರಮುಖ ವಿರೋಧ ಪಕ್ಷವಾದ ತೆಲುಗು ದೇಶಂ ಪಕ್ಷ (ಟಿಡಿಪಿ)ಸೇರಿದಂತೆ ಇತರೆ ಪಕ್ಷಗಳ ಸದಸ್ಯರು ಕಿರಣ್ ಕುಮಾರ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದರೊಂದಿಗೆ ಸಬಿತಾ ಇಂದ್ರಾ ರೆಡ್ಡಿ ಅವರು ತಕ್ಷಣ ರಾಜೀನಾಮೆಯನ್ನು ನೀಡಲೇ ಬೇಕು ಎಂದು ಆಗ್ರಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.