ADVERTISEMENT

ಸಿವಿಸಿ ಹಗರಣ: ಪ್ರಧಾನಿ ಆತ್ಮಾವಲೋಕನಕ್ಕೆ ಬಿಜೆಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 10:15 IST
Last Updated 4 ಮಾರ್ಚ್ 2011, 10:15 IST
ಸಿವಿಸಿ ಹಗರಣ: ಪ್ರಧಾನಿ ಆತ್ಮಾವಲೋಕನಕ್ಕೆ ಬಿಜೆಪಿ ಆಗ್ರಹ
ಸಿವಿಸಿ ಹಗರಣ: ಪ್ರಧಾನಿ ಆತ್ಮಾವಲೋಕನಕ್ಕೆ ಬಿಜೆಪಿ ಆಗ್ರಹ   

ನವದೆಹಲಿ (ಪಿಟಿಐ): ಸಿವಿಸಿ ವಿವಾದದ ಹಿನ್ನೆಲೆಯಲ್ಲಿ ಆತ್ಮಾವಲೋಕನ ಮಾಡಿಕೊಂಡು ಪಿ.ಜೆ. ಥಾಮಸ್ ನೇಮಕಾತಿಯಲ್ಲಿ ತಮ್ಮನ್ನು ದಾರಿ ತಪ್ಪಿಸಲಾಯಿತೇ ಅಥವಾ ದಾರಿತಪ್ಪಲು ಸ್ವತಃ ಅವಕಾಶ ನೀಡಿದರೇ ಎಂದು ದೇಶದ ಜನತೆಗೆ ವಿವರಿಸಬೇಕು ಎಂದು ಬಿಜೆಪಿ ಶುಕ್ರವಾರ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಗ್ರಹಿಸಿದೆ.

~ಸೀಸರನ ಪತ್ನಿ ಶಂಕಾತೀತಳಾಗಿರಬೇಕು~ ಎಂಬ ಮನಮೋಹನ್ ಸಿಂಗ್ ಅವರಿಗೆ ಪ್ರಿಯವಾದ ಮಾತನ್ನೇ ಪ್ರಧಾನಿ ವಿರುದ್ಧ ತಿರುಗಿಸಿದ ಬಿಜೆಪಿಯ ಹಿರಿಯ ನಾಯಕ  ಅರುಣ್ ಶೌರಿ ಅವರು  ~ಸೀಸರನ ಪತ್ನಿಯಂತೆ ಶಂಕಾತೀತರಾಗಲು ಪ್ರಧಾನಿ ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕು~ ಎಂದು ಹೇಳಿದರು.

~ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು ಥಾಮಸ್ ನೇಮಕಾತಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯದ ಟಿಪ್ಪಣಿ ನೀಡುವ ಮೂಲಕ ತಮ್ಮನ್ನು ತಾವು ಸಂರಕ್ಷಿಸಿಕೊಂಡಿದ್ದಾರೆ. ಈಗ ಹೊಣೆಗಾರಿಕೆ ಪ್ರಧಾನಿ ಮತ್ತು ಗೃಹ ಸಚಿವರ ಮೇಲಿದೆ ಎಂದು ಶೌರಿ ನುಡಿದರು.

ಸಿವಿಸಿ ನೇಮಕಾತಿಯನ್ನು ಮಾಡುವುದು ಪ್ರಧಾನಿ, ಗೃಹ ಸಚಿವರು ಮತ್ತು ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿ. ಥಾಮಸ್ ಆಯ್ಕೆಗಾಗಿ ನಡೆದ ಸಮಿತಿ ಸಭೆಯಲ್ಲಿ ಸುಷ್ಮಾ ಸ್ವರಾಜ್ ಅವರು ಥಾಮಸ್ ವಿರುದ್ಧ ತಾಳೆಎಣ್ಣೆ ಹಗರಣದ ತನಿಖೆ ಬಾಕಿ ಇದೆ ಎಂದು ಹೇಳಿದ್ದರು. ಆಗ ಚಿದಂಬರಂ ಅವರು ಈ ಪ್ರಕರಣದಲ್ಲಿ ಥಾಮಸ್ ಅವರನ್ನು ದೋಷಮುಕ್ತರನ್ನಾಗಿಸಲಾಗಿದೆ ಎಂದು ಸ್ವರಾಜ್ ಬಳಿ ಪ್ರತಿಪಾದಿಸಿದ್ದರು ಎನ್ನಲಾಗಿದೆ.

~ಸಿವಿಸಿ ಹುದ್ದೆಗೆ ಏರುವವರು ಕಳಂಕರಹಿತ ದಾಖಲೆ ಹೊಂದಿರಬೇಕು ಎಂಬುದನ್ನು ಸುಪ್ರೀಂಕೋರ್ಟ್ ತೀರ್ಪು ಎತ್ತಿ ಹಿಡಿದಿದೆ. ಮುಕ್ತ ಮನಸ್ಸಿನಿಂದ ಚಿಂತಿಸದ ಕಾರಣ ಥಾಮಸ್ ನೇಮಕಾತಿ ನಡೆದಿದೆ~ ಎಂದು ಶೌರಿ ಹೇಳಿದರು.

ಪ್ರಧಾನಿಯವರು ಸಂಸತ್ತಿನಲ್ಲಿ ಹೇಳಿಕೆ ನೀಡುವ ನಿರೀಕ್ಷೆ ಇದೆ. ಬೇರೆ ಯಾವುದೇ ಪ್ರತಿಕ್ರಿಯೆ ನೀಡುವ ಮುನ್ನ ಪ್ರಧಾನಿ ನೀಡುವ ಹೇಳಿಕೆಗಾಗಿ ಬಿಜೆಪಿ ಕಾಯುತ್ತಿದೆ ಎಂದು ಪಕ್ಷ ಮೂಲಗಳು ಹೇಳಿವೆ.

ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಲು ಒಂದೇ ಒಂದು ಅವಕಾಶ ಸಿಕ್ಕಿದರೂ ಬಿಡದೆ ಬಳಸಿಕೊಳ್ಳುತ್ತಿದ್ದ ಬಿಜೆಪಿ ಈ ಬಾರಿ ಅಂತಹ  ಹೇಳಿಕೆಯಿಂದ ದೂರ ಉಳಿದಿದೆ.
.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.