ADVERTISEMENT

ಸುಗ್ರೀವಾಜ್ಞೆ ‘ಅಸಂಬದ್ಧ’: ರಾಹುಲ್

ಸರ್ಕಾರಕ್ಕೆ ಮುಖಭಂಗ, ಪ್ರಧಾನಿ ರಾಜೀನಾಮೆಗೆ ಪಟ್ಟು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2013, 19:59 IST
Last Updated 27 ಸೆಪ್ಟೆಂಬರ್ 2013, 19:59 IST
ಸುಗ್ರೀವಾಜ್ಞೆ ‘ಅಸಂಬದ್ಧ’: ರಾಹುಲ್
ಸುಗ್ರೀವಾಜ್ಞೆ ‘ಅಸಂಬದ್ಧ’: ರಾಹುಲ್   

ನವದೆಹಲಿ (ಪಿಟಿಐ/ಐಎಎನ್‌ಎಸ್‌ ): ಕಳಂಕಿತ ಸಚಿವರು ಹಾಗೂ ಸಂಸದರನ್ನು ಅನರ್ಹತೆಯಿಂದ ರಕ್ಷಿಸುವ ಸುಗ್ರೀ­ವಾಜ್ಞೆಗೆ ತೀವ್ರ ವಿರೋಧ  ವ್ಯಕ್ತಪಡಿಸಿರುವ  ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ‘ಸುಗ್ರೀವಾಜ್ಞೆಯನ್ನು ಹರಿದು ಬಿಸಾಕಬೇಕು’ ಎಂದು ಖಾರವಾಗಿ ಹೇಳಿದ್ದಾರೆ.

ರಾಹುಲ್‌  ಹೇಳಿಕೆ, ಯುಪಿಎ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು­ಮಾಡಿದ್ದು, ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ಇನ್ನೊಂದೆಡೆ, ಸರ್ಕಾರ ಸುಗ್ರೀವಾಜ್ಞೆಯನ್ನು ವಾಪಸ್‌ ಪಡೆಯುವ ಸಾಧ್ಯತೆ ಕೂಡ ಇದೆ ಎಂದೂ ಹೇಳಲಾಗುತ್ತಿದೆ.  

ದೆಹಲಿ ಪ್ರೆಸ್‌ ಕ್ಲಬ್‌ ಶುಕ್ರವಾರ ಏರ್ಪಡಿಸಿದ್ದ  ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡ ಅಜಯ್‌ ಮಾಕನ್‌ ಅವರು ಮಾತು ಮುಗಿಸುತ್ತಿದ್ದಂತೆಯೇ  ದಿಢೀರ್‌ ಪ್ರತ್ಯಕ್ಷರಾದ ರಾಹುಲ್‌, ‘ಸುಗ್ರೀವಾಜ್ಞೆ ವಿಷಯದಲ್ಲಿ  ಸರ್ಕಾರ ಮಾಡಿದ್ದು ಸರಿಯಲ್ಲ. ಇದು ಶುದ್ಧ ಅಸಂಬದ್ಧ’ ಎಂದರು.

‘ಇಂಥ ಸಣ್ಣ ವಿಷಯಕ್ಕೆ ರಾಜಿ­ಯಾದರೆ ಮುಂದೆ ಎಲ್ಲ ಕಡೆಯೂ ಬಾಗುತ್ತಲೇ ಹೋಗಬೇಕಾಗುತ್ತದೆ’ ಎನ್ನುತ್ತ ರಾಹುಲ್‌ ತಾವು ಕುಳಿತಲ್ಲಿಂದ ಎದ್ದು ಹೊರ ನಡೆಯಲು ಮುಂದಾ­ದಾಗ ಪತ್ರಕರ್ತರು ಅವರನ್ನು ಬಲವಂತವಾಗಿ ಕೂರಿಸಿದರು.

‘ಸುಗ್ರೀವಾಜ್ಞೆ ವಿಷಯದಲ್ಲಿ ಸರ್ಕಾರ ತಪ್ಪು ಮಾಡಿದೆ’ ಎಂದವರೇ ಅಲ್ಲಿಂದ ಹೊರನಡೆದರು.

ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಸುಗ್ರೀವಾಜ್ಞೆ ಅಗತ್ಯದ ಬಗ್ಗೆ ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ,  ಕಾನೂನು ಸಚಿವ ಕಪಿಲ್‌ ಸಿಬಲ್‌ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕಮಲ್‌ ನಾಥ್‌ ಅವರಿಂದ ಸ್ಪಷ್ಟನೆ ಕೇಳಿದ ಬೆನ್ನಲ್ಲೇ ರಾಹುಲ್‌ ಗಾಂಧಿ, ಸುಗ್ರೀವಾಜ್ಞೆಗೆ ವಿರೋಧ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ್ದಾರೆ.

ಪ್ರಶ್ನೆಗಳ ಸುರಿಮಳೆ: ರಾಹುಲ್‌ ಹೇಳಿಕೆ ನೀಡಿ ಹೊರನಡೆದ ಬಳಿಕ ಅಜಯ್‌ ಮಾಕನ್‌ ಅವರು ಮಾಧ್ಯಮ ಪ್ರತಿನಿಧಿ­ಗಳ ಪ್ರಶ್ನೆಗಳ ಸುರಿಮಳೆ ಎದುರಿಸಬೇಕಾಯಿತು.

‘ರಾಹುಲ್‌ ಅವರು ಸರ್ಕಾರ ಅಥವಾ ಪ್ರಧಾನಿ ವಿರುದ್ಧ ಬಂಡೆದ್ದಿದ್ದಾರಾ?’ ಎಂಬ ಪ್ರಶ್ನೆಗೆ, ‘ರಾಹುಲ್‌ ನಮ್ಮ ನಾಯಕರು. ಅವರು ಏನು ಹೇಳಿದರು ಎನ್ನುವುದು ಬಹುಮುಖ್ಯ ವಿಚಾರ. ಇದು ಪಕ್ಷದ ಅನಿಸಿಕೆಯೂ ಹೌದು’ ಎಂದರು.

‘ಈಗ ಕಾಲ ಬದಲಾಗಿದೆ. ಕಳಂಕಿತರು ಜನಪ್ರತಿ­ನಿಧಿ­ಯಾಗುವುದನ್ನು ಜನ ಸಹಿಸುವುದಿಲ್ಲ. ರಾಹುಲ್‌ ಅವರು ಜನಸಾಮಾನ್ಯರ ಅನಿಸಿಕೆಗಳನ್ನು ಹೇಳಿದ್ದಾರೆ’ ಎಂದು   ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುಗ್ರೀವಾಜ್ಞೆಗೆ ಮುನ್ನ ರಾಹುಲ್‌ ಗಾಂಧಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲವೇ? ಇದು ಸಂವಹನ ಕೊರತೆಯಾ? ಎಂಬ ಪ್ರಶ್ನೆಗಳು ಕೂಡ ತೂರಿ ಬಂದವು. ಇವುಗಳಿಗೆ ಪ್ರತಿಕ್ರಿಯಿಸಿದ ಮಾಕನ್‌, ‘ರಾಹುಲ್‌ ಹೇಳಿಕೆ ಬಳಿಕ ಪಕ್ಷವು ಅನಿಸಿಕೆ ವ್ಯಕ್ತಪಡಿಸಿದೆ. ಕಾದು ನೋಡೋಣ’ ಎಂದರು.

ತಮ್ಮ ಅಭಿಪ್ರಾಯವನ್ನು ಪ್ರಧಾನಿ ಸರಿಯಾದ ಅರ್ಥದಲ್ಲಿ ತೆಗೆದುಕೊಳ್ಳುತ್ತಾರೆ ಎಂದು ರಾಹುಲ್‌ ಹೇಳಿದ್ದಾರೆ.

ಇಂಥ ನಾಟಕ ಹೊಸದೇನಲ್ಲ
ನವದೆಹಲಿ (ಪಿಟಿಐ): ರಾಹುಲ್‌ ಗಾಂಧಿ ಅವರು ಸುಗ್ರೀವಾಜ್ಞೆಯನ್ನು ವಿರೋಧಿಸಿ ನೀಡಿದ ಹೇಳಿಕೆಯನ್ನು ಅಲ್ಲಗಳೆದಿರುವ ಬಿಜೆಪಿ, ‘ಇದು ತಪ್ಪನ್ನು ಸರಿಪಡಿಸಿಕೊಳ್ಳಲು ಮಾಡಿದ ನಾಟಕ’ ಎಂದು ಲೇವಡಿ ಮಾಡಿದೆ.

‘ಆತ್ಮಗೌರವ ಇದ್ದರೆ ಪ್ರಧಾನಿ ಈ ಕೂಡಲೇ ರಾಜೀನಾಮೆ ಕೊಡಬೇಕು’ ಎಂದು ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ ಆಗ್ರಹಿಸಿದ್ದಾರೆ.
‘ಕಾಂಗ್ರೆಸ್‌ ಪಕ್ಷಕ್ಕೆ ಅವಕಾಶವಾದಿ ರಾಜ­ಕಾರಣ ಸಿದ್ಧಿಸಿದೆ. ಚುನಾವಣೆ  ಸಮೀಪಿಸುತ್ತಿರುವ ಸಂದರ್ಭದಲ್ಲಿ  ಇಂಥ ನಾಟಕ ಮಾಡುತ್ತಿದೆ. ರಾಹುಲ್‌ ಗಾಂಧಿ ಅವರಿಗೆ ಇದು ಹೊಸದೇನೂ ಅಲ್ಲ’ ಎಂದು ಅವರು ಟೀಕಿಸಿದ್ದಾರೆ.

ರಾಹುಲ್‌ ಉದ್ಧಟತನ
‘ಸುಗ್ರೀವಾಜ್ಞೆ ಕುರಿತ ಸಂಪುಟದ ತೀರ್ಮಾನ ವನ್ನು ಅಸಂಬದ್ಧ ಎಂದು ರಾಹುಲ್‌  ಹೇಳಿದ್ದು ಉದ್ಧಟತನವನ್ನು ತೋರಿಸುತ್ತದೆ’ ಎಂದು ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್‌ ಬರು ಪ್ರತಿಕ್ರಿಯಿಸಿದ್ದಾರೆ.

‘ಸಾಕಪ್ಪಾ ಸಾಕು. ಪ್ರಧಾನಿ ರಾಜೀನಾಮೆ ಕೊಡಬೇಕು’ ಎಂದೂ ಅವರು ಹೇಳಿದ್ದಾರೆ.

ರಾಹುಲ್‌ ಸಲಹೆ ಪರಿಶೀಲನೆ
ವಾಷಿಂಗ್ಟನ್‌: ರಾಷ್ಟ್ರ­ಪತಿ ಸಹಿಗೆ ಕಳುಹಿಸಿರುವ ಜನತಾ ಪ್ರಾತಿ­ನಿಧ್ಯ ಕಾಯ್ದೆ ತಿದ್ದುಪಡಿ ಬಗೆಗಿನ ವಿವಾ­­ದಿತ ಸುಗ್ರೀ­ವಾಜ್ಞೆ ಹಿಂಪಡೆ­ಯಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ ಗಾಂಧಿ ನೀಡಿರುವ ಸಲಹೆ ಮತ್ತು ಹೇಳಿಕೆ ಕುರಿತು ಭಾರತಕ್ಕೆ ಮರಳಿದ ನಂತರ ಪರಿಶೀಲಿಸು­ವುದಾಗಿ ಪ್ರಧಾನಿ ಮನಮೋಹನ್‌ ಸಿಂಗ್‌ ಹೇಳಿದ್ದಾರೆ.

ಈಗಾಗಲೇ ಸುಗ್ರೀ­ವಾಜ್ಞೆಗೆ ಅಸಮ್ಮತಿ ಸೂಚಿಸಿ ರಾಹುಲ್‌ ತಮಗೆ ಪತ್ರ ಬರೆದಿದ್ದು ಈ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗು­ವುದೆಂದು ಅವರು ಶುಕ್ರವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.