ADVERTISEMENT

‘ಸುದ್ದಿವಾಹಿನಿಯ ಆ್ಯಂಕರ್‌ ಕೇಳಿದ ಪ್ರಶ್ನೆ ಪಿಒಕೆಯಲ್ಲಿ ನಿರ್ದಿಷ್ಟ ದಾಳಿ ನಡೆಸಲು ಪ್ರೇರಣೆ’

ಪಿಟಿಐ
Published 1 ಜುಲೈ 2017, 6:22 IST
Last Updated 1 ಜುಲೈ 2017, 6:22 IST
ಮನೋಹರ್ ಪರಿಕ್ಕರ್ (ಸಾಂದರ್ಭಿಕ ಚಿತ್ರ)
ಮನೋಹರ್ ಪರಿಕ್ಕರ್ (ಸಾಂದರ್ಭಿಕ ಚಿತ್ರ)   

ಪಣಜಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಸೇನೆ ನಡೆಸಿದ ನಿರ್ದಿಷ್ಟ ದಾಳಿಗೆ ಪ್ರೇರಣೆ ನೀಡಿದ್ದು ಸುದ್ದಿವಾಹಿನಿಯೊಂದರ ಆ್ಯಂಕರ್ ಒಬ್ಬರು ಕೇಳಿದ್ದ ಪ್ರಶ್ನೆ ಎಂದು ಮಾಜಿ ರಕ್ಷಣಾ ಸಚಿವ, ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ. ಅಲ್ಲದೆ, ನಿರ್ದಿಷ್ಟ ದಾಳಿಗೆ 15 ತಿಂಗಳು ಮೊದಲೇ ಯೋಜನೆ ರೂ‍ಪಿಸಲಾಗಿತ್ತು ಎಂದೂ ಅವರು ಹೇಳಿದ್ದಾರೆ.

ಉದ್ಯಮಿಗಳನ್ನು ಉದ್ದೇಶಿಸಿ ಇಲ್ಲಿ ಮಾತನಾಡಿದ ಅವರು, ‘ಮ್ಯಾನ್ಮಾರ್ ಗಡಿಯಲ್ಲಿ 2015ರಲ್ಲಿ ನಿರ್ದಿಷ್ಟ ದಾಳಿ ನಡೆಸಲಾಗಿತ್ತು. ದಾಳಿಯ ನಂತರ ಮಾಜಿ ಯೋಧ, ಕೇಂದ್ರ ಸಚಿವರಾಗಿರುವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಸುದ್ದಿವಾಹಿನಿಯೊಂದಕ್ಕೆ ಮಾಹಿತಿ ನೀಡುತ್ತಿದ್ದರು. ಆಗ ರಾಥೋಡ್‌ ಅವರನ್ನು ಪ್ರಶ್ನಿಸಿದ್ದ ಆ್ಯಂಕರ್, ಈಶಾನ್ಯ ಗಡಿಯಲ್ಲಿ ತೋರಿದ ಇದೇ ಧೈರ್ಯವನ್ನು ನೀವು ಪಶ್ಚಿಮದ ಗಡಿಯಲ್ಲೂ ಪ್ರದರ್ಶಿಸಲು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದ್ದರು. ಸಮಯ ಬಂದಾಗ ಇದಕ್ಕೆ ಉತ್ತರ ನೀಡಬೇಕು ಎಂದು ಆಗಲೇ ನಿರ್ಧರಿಸಿದ್ದೆ. 2016ರ ಸೆಪ್ಟೆಂಬರ್ 29ರಂದು ಪಿಒಕೆಯಲ್ಲಿ ನಡೆಸಿದ ನಿರ್ದಿಷ್ಟ ದಾಳಿಗೆ ಆಗಲೇ ಪ್ರೇರಣೆ ದೊರೆತಿತ್ತು’ ಎಂದು ಹೇಳಿದ್ದಾರೆ.

2015ರ ಜೂನ್ 4ರಂದು ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 18 ಯೋಧರು ಹತರಾಗಿದ್ದರು. ಆಗ ಭಾರತೀಯ ಸೇನೆಯು ಮ್ಯಾನ್ಮಾರ್ ಗಡಿಯಲ್ಲಿ ನಿರ್ದಿಷ್ಟ ದಾಳಿ ನಡೆಸಿ 70–80 ಉಗ್ರರನ್ನು ಹತ್ಯೆ ಮಾಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.