ADVERTISEMENT

ಸುಧಾರಿಸದ ಬಾಬಾ ಆರೋಗ್ಯ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2011, 19:00 IST
Last Updated 23 ಏಪ್ರಿಲ್ 2011, 19:00 IST
ಸುಧಾರಿಸದ ಬಾಬಾ ಆರೋಗ್ಯ
ಸುಧಾರಿಸದ ಬಾಬಾ ಆರೋಗ್ಯ   

ಪುಟ್ಟಪರ್ತಿ: ಸತ್ಯ ಸಾಯಿ ಬಾಬಾ ಅವರ ರಕ್ತದೊತ್ತಡ ತೀವ್ರವಾಗಿ ಕುಸಿದಿದ್ದು, ಇದು ಅವರ ದೇಹಸ್ಥಿತಿಗೆ ಸಂಬಂಧಿಸಿದಂತೆ ಚಿಂತೆಗೆ ಕಾರಣವಾಗಿದೆ ಎಂದು ಬಾಬಾ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಪ್ರಕಟಿಸಿದ್ದಾರೆ.

ಅಂಗಾಂಗಗಳ ವೈಫಲ್ಯದ ಸಮಸ್ಯೆ ಎದುರಿಸುತ್ತಿರುವ ಬಾಬಾ ಇಲ್ಲಿನ ಪ್ರಶಾಂತಿ ಗ್ರಾಮದಲ್ಲಿರುವ ಸತ್ಯಸಾಯಿ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಮೆಡಿಕಲ್ ಸೈನ್ಸಸ್‌ನ ಸತ್ಯ ಸಾಯಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿ ಶನಿವಾರಕ್ಕೆ 27 ದಿನಗಳಾಗಿವೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇದ್ದು, ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ಬಾಬಾ ಅವರ ಚಿಕಿತ್ಸೆಯ ನೇತೃತ್ವ ವಹಿಸಿರುವ ಸತ್ಯಸಾಯಿ ವೈದ್ಯಕೀಯ ಸಂಸ್ಥೆಯ ನಿರ್ದೇಶಕ ಡಾ.ಎ.ಎನ್. ಸಫಾಯ ಶನಿವಾರ ಸಂಜೆ ಅಧಿಕೃತವಾಗಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗುರುವಾರ ಸಂಜೆಯಿಂದಲೇ ಬಾಬಾ ಅವರಲ್ಲಿ ಕಡಿಮೆ ರಕ್ತದೊತ್ತಡ ಸಮಸ್ಯೆ ತೀವ್ರವಾಗಿದೆ. ಅಂದಿನಿಂದ ಈವರೆಗೆ ಬಾಬಾ ದೇಹಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಶುಕ್ರವಾರ ಮತ್ತು ಶನಿವಾರ ಆಸ್ಪತ್ರೆಯ ವತಿಯಿಂದ ಬಿಡುಗಡೆ ಮಾಡಲಾಗಿರುವ ಹೇಳಿಕೆಗಳಲ್ಲಿ ಹೆಚ್ಚಿನ ವ್ಯತ್ಯಾಸಗಳೇನೂ ಇಲ್ಲ. ಶನಿವಾರ ಬೆಳಿಗ್ಗೆ ಇದ್ದ ಪರಿಸ್ಥಿತಿಯೇ ಸಂಜೆಯೂ ಮುಂದುವರಿದಿದೆ.

‘ಬಾಬಾ ಅವರು ಕೃತಕ ಉಸಿರಾಟ ಸಾಧನಗಳ ಸಹಾಯದಿಂದಲೇ ಉಸಿರಾಡುತ್ತಿದ್ದಾರೆ. ತಜ್ಞ ವೈದ್ಯರ ತಂಡ ಬಾಬಾ ಅವರ ದೇಹಸ್ಥಿತಿ ಮೇಲೆ ನಿಗಾ ವಹಿಸಿದ್ದು, ಅಗತ್ಯ ಚಿಕಿತ್ಸೆ ಮುಂದುವರಿಸಿದೆ’ ಎಂದು ಡಾ.ಸಫಾಯ ವಿವರಿಸಿದ್ದಾರೆ.

ಒಟ್ಟು 27 ಮಂದಿ ತಜ್ಞ ವೈದ್ಯರು ಬಾಬಾ ಅವರಿಗೆ ಚಿಕಿತ್ಸೆ ನೀಡುತ್ತಿರುವ ತಂಡದಲ್ಲಿದ್ದಾರೆ. ಈ ಪೈಕಿ 15 ವೈದ್ಯರು ಸತ್ಯಸಾಯಿ ಆಸ್ಪತ್ರೆಯವರು. ಉಳಿದ 12 ವೈದ್ಯರು ಆಂಧ್ರಪ್ರದೇಶ ಸರ್ಕಾರ ನಿಯೋಜಿಸಿರುವ ತಜ್ಞರು. ಸತ್ಯಸಾಯಿ ಆಸ್ಪತ್ರೆಯ ತಂಡದ ನೇತೃತ್ವವನ್ನು ಡಾ.ಸಫಾಯ ಮತ್ತು ಸರ್ಕಾರದ ವತಿಯಿಂದ ನಿಯೋಜಿಸಿರುವ ವೈದ್ಯರ ತಂಡದ ನೇತೃತ್ವವನ್ನು ಆಂಧ್ರಪ್ರದೇಶ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಟಿ.ರವಿರಾಜ್ ವಹಿಸಿದ್ದಾರೆ.

ಪರಿಸ್ಥಿತಿ ಅವಲೋಕನ:
ಬಾಬಾ ಆರೋಗ್ಯ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರದ ಹಿನ್ನೆಲೆಯಲ್ಲಿ ಸತ್ಯ ಸಾಯಿ ಆಸ್ಪತ್ರೆಯಲ್ಲೇ ಶನಿವಾರ ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು, ಜಿಲ್ಲಾಡಳಿತದ ಪ್ರತಿನಿಧಿಗಳು, ಸತ್ಯ ಸಾಯಿ ಟ್ರಸ್ಟ್ ಸದಸ್ಯರು, ಪ್ರಶಾಂತಿ ನಿಲಯದ ಆಡಳಿತ ಮಂಡಳಿ ಸದಸ್ಯರನ್ನು ಒಳಗೊಂಡಂತೆ ಸಮನ್ವಯ ಸಭೆ ನಡೆಯಿತು.   

ಬೃಹತ್ ಕೈಗಾರಿಕಾ ಸಚಿವೆ ಜೆ.ಗೀತಾ ರೆಡ್ಡಿ ನೇತೃತ್ವದಲ್ಲಿ ಈ ಸಭೆ ನಡೆದಿದೆ. ಸ್ಥಳೀಯ ಸಂಸದ ಕ್ರಿಸ್ತಪ್ಪ ನಿಮ್ಮಲ, ಪುಟ್ಟಪರ್ತಿ ಶಾಸಕ ಪಲ್ಲ ರಘುನಾಥ ರೆಡ್ಡಿ, ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು, ಸತ್ಯ ಸಾಯಿ ಟ್ರಸ್ಟ್‌ನ ಪ್ರಮುಖರು, ಆಡಳಿತ ಮಂಡಳಿಯ ಕೆಲ ಸದಸ್ಯರು, ಬಾಬಾ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡದಲ್ಲಿರುವ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬಾಬಾ ಅವರ ಸದ್ಯದ ಆರೋಗ್ಯ ಸ್ಥಿತಿ, ಚಿಕಿತ್ಸೆಯ ಕ್ರಮ, ಪುಟ್ಟಪರ್ತಿಯಲ್ಲಿ ಕೈಗೊಂಡಿರುವ ಭದ್ರತಾ ವ್ಯವಸ್ಥೆ, ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಸದ್ಯದ ವರದಿ, ಈಗಾಗಲೇ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮ ಮತ್ತಿತರ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಮುಂದೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಭೆಯ ಬಳಿಕ ಪ್ರತಿಕ್ರಿಯಿಸಿರುವ ಗೀತಾ ರೆಡ್ಡಿ, ‘ಬಾಬಾ ಅವರ ಚಿಕಿತ್ಸೆಯ ವಿಷಯದಲ್ಲಿ ಸರ್ಕಾರ ಸೂಕ್ತ ಸಹಕಾರ ನೀಡುತ್ತದೆ. ಈ ವಿಷಯದಲ್ಲಿ ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಮತ್ತೆ ಟ್ರಸ್ಟ್ ಸಭೆ: ಬಾಬಾ ಅವರ ಆಶ್ರಮ ಪ್ರಶಾಂತಿ ನಿಲಯದಲ್ಲಿ ಶನಿವಾರವೂ ಸುದೀರ್ಘ ಕಾಲ ಸತ್ಯಸಾಯಿ ಟ್ರಸ್ಟ್ ಸದಸ್ಯರ ಸಭೆ ನಡೆಯಿತು. ಟ್ರಸ್ಟ್‌ನ  ಮುಖ್ಯಸ್ಥರ ಹುದ್ದೆಗೆ ಉತ್ತರಾಧಿಕಾರಿ ಆಯ್ಕೆಯೂ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.

ಆದರೆ ಯಾವುದೇ ವ್ಯಕ್ತಿಯನ್ನು ಉತ್ತರಾಧಿಕಾರಿ ಹುದ್ದೆಗೆ ಆಯ್ಕೆ ಮಾಡುವ ಬಗ್ಗೆ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎನ್ನಲಾಗಿದೆ. ಬಾಬಾ ಅವರ ಚಿಕಿತ್ಸೆ ಮತ್ತು ಟ್ರಸ್ಟ್‌ನ ಉತ್ತರಾಧಿಕಾರಿ ಆಯ್ಕೆಗೆ ಸಂಬಂಧಿಸಿದಂತೆ ಶನಿವಾರವೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಟ್ರಸ್ಟ್‌ನ ಸದಸ್ಯರು ಯೋಚಿಸಿದ್ದರು. ಆದರೆ ಕೆಲ ಕ್ಷಣಗಳ ಬಳಿಕ ದಿಢೀರ್ ನಿಲುವು ಬದಲಿಸಿದರು.

ಈ ಎರಡೂ ವಿಷಯಗಳಿಗೆ ಸಂಬಂಧಿಸಿದಂತೆ ಕೆಲ ಮಾಹಿತಿಯನ್ನು ನೀಡುವ ಮೂಲಕ ಗೊಂದಲಕ್ಕೆ ತೆರೆ ಎಳೆಯುವಂತೆ ಆಂಧ್ರಪ್ರದೇಶ ಸರ್ಕಾರ ಟ್ರಸ್ಟ್ ಸದಸ್ಯರಿಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಭಾನುವಾರವೂ ಪ್ರಶಾಂತಿ ನಿಲಯದಲ್ಲಿ ಟ್ರಸ್ಟ್ ಸದಸ್ಯರ ಸಭೆ ನಡೆಯಲಿದೆ.ಅದಾದ ಬಳಿಕ ಟ್ರಸ್ಟ್‌ನಪ್ರಮುಖ ಸದಸ್ಯರು ಪತ್ರಿಕಾಗೋಷ್ಠಿ ನಡೆಸಿ, ಕೆಲವು ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದೆ.

 ತೆಂಗಿನಕಾಯಿ ಸೇವೆ
ಬಾಬಾ ಅವರು ಚೇತರಿಸಿಕೊಳ್ಳಲಿ ಎಂದು ಪುಟ್ಟಪರ್ತಿ ಶಾಸಕ ಪಲ್ಲ ರಘುನಾಥ ರೆಡ್ಡಿ ಅವರು ಸತ್ಯಸಾಯಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎದುರು ಶನಿವಾರ ಬೆಳಿಗ್ಗೆ 101 ತೆಂಗಿನಕಾಯಿ ಒಡೆದರು.

ಬಾಬಾ ಅವರನ್ನು ದಾಖಲಿಸಿರುವ ಆಸ್ಪತ್ರೆಯ ಬಳಿಗೆ ತಮ್ಮ ಬೆಂಬಲಿಗರೊಂದಿಗೆ ಬಂದ ಶಾಸಕರು, ಅಲ್ಲಿನ ಹುತ್ತವೊಂದರ ಮೇಲೆ ಶಿರಡಿ ಸಾಯಿಬಾಬಾ ಮತ್ತು ಪುಟ್ಟಪರ್ತಿ ಸತ್ಯ ಸಾಯಿಬಾಬಾ ಫೋಟೊ ಇರಿಸಿ ಪೂಜೆ ಸಲ್ಲಿಸಿದರು. ಬಳಿಕ ಹುತ್ತದ ಎದುರು 101 ತೆಂಗಿನಕಾಯಿಗಳನ್ನು ಒಡೆದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.