ADVERTISEMENT

ಸುಪ್ರೀಂ ಕಟ್ಟೆಗೆ ಕಾವೇರಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST

ನವದೆಹಲಿ: ತಮಿಳುನಾಡಿಗೆ ಸೆ. 20ರಿಂದ ಅ.15ರವರೆಗೆ 9000 ಕ್ಯೂಸೆಕ್ ನೀರು ಬಿಡಬೇಕೆಂಬ ಪ್ರಧಾನಿ ನೇತೃತ್ವದ `ಕಾವೇರಿ ನದಿ ಪ್ರಾಧಿಕಾರ~ದ (ಸಿಆರ್‌ಎ)  ನಿರ್ದೇಶನ ಪಾಲಿಸುವಂತೆ ನೀಡಿರುವ ಆದೇಶವನ್ನು ತಡೆ ಹಿಡಿಯಬೇಕು ಇಲ್ಲವೆ ಮಾರ್ಪಾಡು ಮಾಡಬೇಕೆಂದು ಮನವಿ ಮಾಡಿ ಕರ್ನಾಟಕ ಗುರುವಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.

`ಸಿಆರ್‌ಎ~ ನಿರ್ದೇಶನ ಪಾಲಿಸುವಂತೆ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಹೇಳಿದೆ. ಆದರೆ, ಈ ನಿರ್ದೇಶನ ವಸ್ತುಸ್ಥಿತಿ ಆಧರಿಸಿಲ್ಲ. ಮಳೆ- ಬಿತ್ತನೆ ಸಂಬಂಧಿಸಿದ ಅಂಕಿಸಂಖ್ಯೆಗಳೂ ಸಮರ್ಪಕ ಆಗಿಲ್ಲ. ಪ್ರಾಧಿಕಾರ ತನ್ನ ತೀರ್ಮಾನ ಪ್ರಕಟಿಸುವ ಮುನ್ನ ಪರಿಣತರ ತಂಡ ಕಳುಹಿಸಿ ವಾಸ್ತವ ಸ್ಥಿತಿಗತಿ ವರದಿ ಪಡೆದಿಲ್ಲ. 1996 ಹಾಗೂ 2002ರಲ್ಲಿ ಇಂತಹದೇ ಪರಿಸ್ಥಿತಿ ತಲೆದೋರಿದ್ದಾಗ ಕೇಂದ್ರ ತಂಡ ಕಳುಹಿಸಲಾಗಿತ್ತು ಎಂದು ಮೇಲ್ಮನವಿಯಲ್ಲಿ ವಿವರಿಸಲಾಗಿದೆ.

ಕಾವೇರಿ ನದಿಯಿಂದ ತಮಿಳುನಾಡಿಗೆ ದಿನಕ್ಕೆ 2ಟಿಎಂಸಿ ಅಡಿಯಂತೆ 24 ದಿನ ನೀರು ಬಿಡುಗಡೆ ಮಾಡಲು ಸೂಚನೆ ನೀಡಬೇಕೆಂದು ಮನವಿ ಮಾಡಿ ತಮಿಳುನಾಡು ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಡಿ.ಕೆ. ಜೈನ್ ಹಾಗೂ ನ್ಯಾ. ಮದನ್ ಬಿ. ಲೋಕೋರ್ ಅವರನ್ನೊಳಗೊಂಡ ಪೀಠ ಸೆ. 28ರಂದು ಪ್ರಧಾನಿ ನೇತೃತ್ವದ ಅತ್ಯುನ್ನತ ಪ್ರಾಧಿಕಾರದ ನಿರ್ದೇಶನ ಪಾಲನೆ ಮಾಡುವಂತೆ ಕರ್ನಾಟಕಕ್ಕೆ ಆದೇಶ ನೀಡಿದೆ. ಈ ಆದೇಶ ತಡೆ ಹಿಡಿಯಬೇಕು ಇಲ್ಲವೆ ಮಾರ್ಪಾಡು ಮಾಡಬೇಕೆಂದು ಮನವಿ ಮಾಡಿ ಕರ್ನಾಟಕ ಈ ಮೇಲ್ಮನವಿ ಸಲ್ಲಿಸಿದೆ.

ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಈ ವರ್ಷ ಶೇ 48.3ರಷ್ಟು ಮಳೆ ಕಡಿಮೆ ಆಗಿದೆ. ಈ ಸಂಗತಿಯನ್ನು ತಮಿಳುನಾಡು ನಿರಾಕರಿಸಿಲ್ಲ ಅಥವಾ ಪ್ರಶ್ನೆ ಮಾಡಿಲ್ಲ. 38 ವರ್ಷದಲ್ಲಿ ಇಷ್ಟೊಂದು ಕಡಿಮೆ ಮಳೆಯಾದ ಉದಾಹರಣೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಕರ್ನಾಟಕ ಸೆ.12ರಿಂದ ಸೆ. 20ರವರೆಗೆ ಪ್ರತಿದಿನ ಹತ್ತು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದೆ. ಒಳ ಹರಿವು ಹೆಚ್ಚಿದ್ದಾಗ ಹೆಚ್ಚು ನೀರು ಹರಿಸಲಾಗಿದೆ. ಈಗ ಒಳಹರಿವಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ. ಇಂಥ ಕಷ್ಟದ ಪರಿಸ್ಥಿತಿಯಲ್ಲೂ ಅಕ್ಟೋಬರ್ 1ರಿಂದ ಬರುವ ವರ್ಷ ಜನವರಿ 31ರವರೆಗೆ ತಮಿಳುನಾಡಿಗೆ 38ಟಿಎಂಸಿ ನೀರು ದೊರೆಯಲಿದೆ ಎಂದು ಹೇಳಲಾಗಿದೆ.

ತಮಿಳುನಾಡು ಜುಲೈ 20ರಂದು ಸಲ್ಲಿಸಿದ್ದ ಮಧ್ಯಂತರ ಅರ್ಜಿ ಸೆ. 10ರಂದು ವಿಚಾರಣೆಗೆ ಬಂದಾಗ ಕರ್ನಾಟಕದ ವಕೀಲರು, `ಸೆ. 4ರ ಬಳಿಕ 7000 ಕ್ಯೂಸೆಕ್ ನೀರು ಹರಿಯುತ್ತಿದ್ದು, ಸ್ನೇಹ ಪೂರ್ವಕವಾಗಿ ಸೆ. 12ರಿಂದ ಸೆ. 20ರವರೆಗೆ ಹತ್ತು ಸಾವಿರ ಕ್ಯೂಸೆಕ್ ಬಿಡುಗಡೆ ಮಾಡಲು ಸಿದ್ಧ~ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಅರ್ಜಿಯನ್ನು ಇತ್ಯರ್ಥಪಡಿಸಿತು.

ವಿಶ್ವಾಸಾರ್ಹವಾಗಿಲ್ಲ: ಆದರೆ, ಸೆ.19ರಂದು ನಡೆದ ಕಾವೇರಿ ನದಿ ನೀರು ಪ್ರಾಧಿಕಾರದ ಸಭೆ, ಕರ್ನಾಟಕದ ಮುಖ್ಯಮಂತ್ರಿ ರಾಜ್ಯದ ಗಂಭೀರ ಪರಿಸ್ಥಿತಿಯನ್ನು ವಿವರಿಸಿದರೂ ಗಮನಕ್ಕೆ ತೆಗೆದುಕೊಳ್ಳದೆ ಸೆ. 20ರಿಂದ  ಅ.15 ರವರೆಗೆ ಪ್ರತಿನಿತ್ಯ 9ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದೆ.

ಅದು ಪರಿಗಣಿಸಿರುವ ಮಳೆ ಹಾಗೂ ಬಿತ್ತನೆಗೆ ಸಂಬಂಧಿಸಿದ ಅಂಕಿಅಂಶಗಳು ವಿಶ್ವಾಸಾರ್ಹವಾಗಿಲ್ಲ. ಪ್ರಸ್ತುತವೂ ಆಗಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಕರ್ನಾಟಕಕ್ಕೆ ಮುಂಗಾರು- ಸರ್ವಋತು ಬೆಳೆಗಳಿಗೆ 140 ಟಿಎಂಸಿ ಅಡಿ ನೀರಿನ ಅಗತ್ಯವಿದೆ. ಅಕ್ಟೋಬರ್ 2 ರ ವೇಳೆಗೆ ನಾಲ್ಕು ಜಲಾಶಯಗಳಲ್ಲಿರುವ ಸಂಗ್ರಹ 67 ಟಿಎಂಸಿ ಅಡಿ. 40 ಟಿಎಂಸಿ ಒಳ ಹರಿವು ನಿರೀಕ್ಷಿಸಲಾಗಿದೆ.

ರಾಜ್ಯಕ್ಕೆ ಒಟ್ಟಾರೆ ಸಿಗುವ ನೀರು 107 ಟಿಎಂಸಿ ಅಡಿ. ನೀರಾವರಿ ಹಾಗೂ ಕುಡಿಯುವ ಉದ್ದೇಶಕ್ಕೆ ಇದು ಸಾಕಾಗುವುದಿಲ್ಲ. ಕಬಿನಿ ಜಲಾಶಯದಲ್ಲೂ ಶೇ.55ರಷ್ಟು ನೀರಿನ ಕೊರತೆ ತಲೆದೋರಿದೆ. ಸಾಮಾನ್ಯವಾಗಿ 98 ಟಿಎಂಸಿ ಸಂಗ್ರಹವಾಗಬೇಕಿದ್ದ ಕಬಿನಿ ಜಲಾಶಯಕ್ಕೆ 43 ಟಿಎಂಸಿ ಹರಿದು ಬಂದಿದೆ ಎಂದು ವಿವರಿಸಲಾಗಿದೆ.

ತಮಿಳುನಾಡು ಹೇಳಿರುವಂತೆ ಸಾಂಬಾ ಬೆಳೆಗೆ ಬೇಕಾಗುವ ನೀರು 123 ಟಿಎಂಸಿ. ಈಶಾನ್ಯ ಮಾರುತದಿಂದ ಸಂಗ್ರಹವಾಗುವ ನೀರಿನ ಪ್ರಮಾಣ 40ಟಿಎಂಸಿ ಅಡಿ. ಮೆಟ್ಟೂರು, ಬಿಳಿಗುಂಡ್ಲು ಸೇರಿದಂತೆ ಒಟ್ಟಾರೆ ಎಲ್ಲ ಮೂಲಗಳಿಂದ 120 ಟಿಎಂಸಿ ಅಡಿ ದೊರೆಯಲಿದೆ ಎಂದು ಕರ್ನಾಟಕ ಸ್ಪಷ್ಟಪಡಿಸಿದೆ.

 ತಮಿಳುನಾಡಿಗೆ 9000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕೆಂಬ ನಿರ್ದೇಶನವನ್ನು ಮರು ಪರಿಶೀಲಿಸುವಂತೆ ಕರ್ನಾಟಕ `ಸಿಆರ್‌ಎ~ಗೂ ಮೇಲ್ಮನವಿ ಸಲ್ಲಿಸಿದೆ. `ಸಿಆರ್‌ಎ~ ಕಾರ್ಯದರ್ಶಿ ಕರ್ನಾಟಕ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಪ್ರತಿವಾದಿ ರಾಜ್ಯಗಳಿಂದ ಪ್ರತಿಕ್ರಿಯೆ ಕೇಳಿದ್ದಾರೆ. `ಸಿಆರ್‌ಎ~ ಕಾರ್ಯದರ್ಶಿ ವಸ್ತುಸ್ಥಿತಿ ಕುರಿತು ಅಧ್ಯಯನಕ್ಕೆ ಶುಕ್ರವಾರ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಕಾವೇರಿ ಉಸ್ತುವಾರಿ ಸಮಿತಿ ಈ ತಿಂಗಳ 8ರಂದು ಸೇರುತ್ತಿದೆ. ಕರ್ನಾಟಕದ ಪುನರ್ ಪರಿಶೀಲನಾ ಅರ್ಜಿಯನ್ನು ಸ್ವೀಕರಿಸಿರುವ ಸಿಆರ್‌ಎ, ತನ್ನ ನಿರ್ದೇಶನಕ್ಕೆ ತಡೆ ನೀಡಿಲ್ಲ ಎಂದು ಕರ್ನಾಟಕ ಪ್ರತಿಪಾದಿಸಿದೆ.

`ಸಿಆರ್‌ಎ~ ನಿರ್ದೇಶನ ಪಾಲಿಸಬೇಕೆಂಬ ನ್ಯಾಯಾಲಯದ ಆದೇಶ ಜಾರಿಗೊಳಿಸಲು ಕರ್ನಾಟಕ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ವಿಧಾನಮಂಡಲದ ವಿವಿಧ ಪಕ್ಷಗಳ ನಾಯಕರ ಜತೆ ಸಮಾಲೋಚಿಸಿದೆ. ರೈತ ಸಂಘಟನೆಗಳ ಸಭೆ ಕರೆದು ಚರ್ಚಿಸಿದೆ. ಎಲ್ಲರ ಸಹಕಾರ ಕೇಳಿದೆ. ಕಾನೂನು- ಸುವ್ಯವಸ್ಥೆ ಕಾಪಾಡಲು ಭದ್ರತಾ ಪಡೆಗಳನ್ನು ನಿಯೋಜಿಸಿದೆ. 29ರ ಮಧ್ಯರಾತ್ರಿ ಬಳಿಕ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗಿದೆ. ಯಾವ ದಿನ ಯಾವ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ ಎಂಬ ವಿವರಗಳನ್ನು ಮೇಲ್ಮನವಿಯಲ್ಲಿ ಒದಗಿಸಲಾಗಿದೆ.

ಕಾವೇರಿ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿರುವುದರಿಂದ ರೈತರು ಪ್ರತಿಭಟನೆಗಿಳಿದಿದ್ದಾರೆ. ಜನಜೀವನ ಅಸ್ತವ್ಯಸ್ತಗೊಳಿಸಿದ್ದಾರೆ. ಬೆಂಗಳೂರು- ಮೈಸೂರು ನಡುವೆ ಸಂಚಾರ ಬಂದ್ ಆಗಿದೆ. ಚಳವಳಿಯನ್ನು ಹದ್ದುಬಸ್ತಿನಲ್ಲಿಡಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಇವೆಲ್ಲ ಕಾರಣಗಳಿಂದ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಬೇಕೆಂದು ಕರ್ನಾಟಕ ಮನವಿ ಮಾಡಿದೆ. ಈ ಮೇಲ್ಮನವಿ ಜತೆಗೆ ಕರ್ನಾಟಕ ತಮಿಳುನಾಡಿನ ಮಧ್ಯಂತರ ಅರ್ಜಿಗೂ ಆಕ್ಷೇಪಣೆ ಸಲ್ಲಿಸಿದೆ. ಮಧ್ಯಂತರ ಅರ್ಜಿಗೆ ವಾರದಲ್ಲಿ ಉತ್ತರಿಸುವಂತೆ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಕೇಳಿತ್ತು.

ಅಂತಿಮ ವರದಿಯಲ್ಲಿ...
ಕಾವೇರಿ ನ್ಯಾಯಮಂಡಳಿ ಅಂತಿಮ ವರದಿಯಲ್ಲಿ, ಸಾಮಾನ್ಯ ಮಳೆ ವರ್ಷದಲ್ಲಿ ತಮಿಳುನಾಡಿಗೆ 192 ಟಿಎಂಸಿ ಅಡಿ ನೀರು ಬಿಡಬೇಕು. ಮಳೆ ಅಭಾವದ ವರ್ಷದಲ್ಲಿ ಸಂಕಷ್ಟವನ್ನು ಸಂಬಂಧಪಟ್ಟ ರಾಜ್ಯಗಳ ಸಮನ್ವಯದೊಂದಿಗೆ ಹಂಚಿಕೊಳ್ಳಬೇಕು. ವಾಸ್ತವ ಸ್ಥಿತಿಗತಿ ಹಾಗೂ ಬೆಳೆ ಸ್ವರೂಪಗಳಿಗೆ ಅನುಗುಣವಾಗಿ ನೀರು ಬಿಡುಗಡೆ ಕುರಿತು ನಿರ್ಧರಿಸಬೇಕೆಂದು ಹೇಳಲಾಗಿದೆ.

ADVERTISEMENT

ರಾಜ್ಯದ ವಾದ
ಕಾವೇರಿ ನದಿ ನೀರು ಪ್ರಾಧಿಕಾರ ಪರಿಗಣಿಸಿರುವ ಮಳೆ ಹಾಗೂ ಬಿತ್ತನೆಗೆ ಸಂಬಂಧಿಸಿದ ಅಂಕಿಅಂಶಗಳು ವಿಶ್ವಾಸಾರ್ಹವಾಗಿಲ್ಲ. ಪ್ರಸ್ತುತವೂ ಆಗಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.