ADVERTISEMENT

ಸುಳ್ಳು ಪ್ರಚಾರದಲ್ಲಿ ಬಿಜೆಪಿ ಕೈವಾಡ

ಮೋದಿ ‘ಶುದ್ಧಹಸ್ತ’ ಎಂದಿಲ್ಲ–ವಿಕಿಲೀಕ್ಸ್‌: ವಿವಾದಕ್ಕೆ ಹೊಸ ತಿರುವು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ):  ‘ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ‘ಶುದ್ಧಹಸ್ತ’  ಎಂದು ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿ­­ಯನ್ ಅಸಾಂಜ್‌ ಬಣ್ಣಿಸಿದ್ದಾರೆ’ ಎಂಬು­ದಾಗಿ ಕೆಲವು ದಿನಗಳಿಂದ ಅಂತ­ರ್ಜಾ­ಲ­ಗಳಲ್ಲಿ ಹರಿದಾಡುತ್ತಿರುವ  ಸುಳ್ಳು ಸುದ್ದಿ­ಯನ್ನು ಪಕ್ಷವೇ ಹರಿಯಬಿಟ್ಟಿದೆ ಎಂದು ವಿಕಿ­ಲೀಕ್ಸ್‌ ಬಹಿರಂಗಪಡಿಸಿದೆ. 

ಮಹಾರಾಷ್ಟ್ರ ಬಿಜೆಪಿ ಪ್ರಚಾರ ಘಟ­ಕದ ಸಹ ಸಂಚಾಲಕಿ ಪ್ರೀತಿ ಗಾಂಧಿ ಎಂಬ ಕಾರ್ಯಕರ್ತೆ ಅಂತರ್ಜಾಲದಲ್ಲಿ ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಿಯ ಬಿಟ್ಟಿ­ದ್ದಾರೆ ಎಂದು ಸಂಸ್ಥೆ ಹೇಳಿದೆ. ಅಮೆರಿಕ ರಾಜತಾಂತ್ರಿಕ ಅಧಿಕಾರಿಗಳ ಮುಂದೆ ಮೋದಿ ಅವರನ್ನು ಹೀಗೆ ಬಣ್ಣಿ­ಸಿರುವುದು ರಾಜ್‌ಕೋಟ್‌ನ ಕಾಂಗ್ರೆಸ್‌ ನಾಯಕ ಮನೋಹರ ಸಿಂಗ್ ಜಡೇಜಾ ಅವರೇ ಹೊರತು ಅಸಾಂಜ್ ಅಲ್ಲ ಎಂದೂ ಸಂಸ್ಥೆ ಸ್ಪಷ್ಟಪಡಿಸಿದೆ.

‘ಮೋದಿ ಭ್ರಷ್ಟರಲ್ಲದ ಕಾರಣ ಅಮೆ­ರಿಕ ಅವರಿಗೆ ಹೆದರುತ್ತಿದೆ ಎಂದು ವಿಕಿ­ಲೀಕ್ಸ್‌ ಸಂಸ್ಥಾ­ಪಕ ಅಸಾಂಜ್ ಹೇಳಿ­ದ್ದಾರೆ’ ಎಂಬ ಹೇಳಿಕೆಯುಳ್ಳ  ಭಿತ್ತಿಚಿತ್ರ ಹಾಗೂ  ಫಲಕಗಳನ್ನು ಬಿಜೆಪಿ ಬೆಂಬಲಿ­ಗರು ಅಹ­ಮದಾಬಾದ್‌ನಲ್ಲಿ  ಇತ್ತೀಚೆಗೆ ಪ್ರದರ್ಶಿ­ಸಿದ್ದರು. ಇದರಿಂದ ಕೆರಳಿರುವ ವಿಕಿಲೀಕ್ಸ್, ಪಕ್ಷಕ್ಕೆ ದೇಣಿಗೆ ಸಂಗ್ರಹಿಸಲು ಬಿಜೆಪಿ ಇಂತಹ ಸುಳ್ಳು ಸುದ್ದಿಗಳನ್ನು ಬಳ­ಸಿ­­ಕೊಳ್ಳುತ್ತಿದೆ ಎಂದು ಹರಿ­ಹಾಯ್ದಿದೆ.

‘ಪ್ರಮಾಣಪತ್ರ ಬೇಕಿಲ್ಲ’
‘ಮೋದಿ ಅವರಿಗೆ ವಿಕಿಲೀಕ್ಸ್‌ ಅಥವಾ ಅಸಾಂಜ್ ಪ್ರಮಾಣಪತ್ರ ಬೇಕಿಲ್ಲ’ ಎಂದು ಬಿಜೆಪಿ ನಾಯಕ ಮುಖ್ತಾರ್‌ ಅಬ್ಬಾಸ್‌ ನಖ್ವಿ ತಿರುಗೇಟು ನೀಡಿದ್ದಾರೆ.

ಅಮೆರಿಕ ತಂತಿ ಸಂದೇಶ ಬಹಿರಂಗ
‘ಮೋದಿ ಸಂಕುಚಿತ ಮನೋಭಾವದ ಹಾಗೂ ನಂಬಿಕೆಗೆ ಅನರ್ಹವಾದ ವ್ಯಕ್ತಿ.  ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು  ಆಡಳಿತ ನಡೆಸುವ ಬದಲು ಭಯವನ್ನು ಹುಟ್ಟು ಹಾಕುತ್ತಿದ್ದಾರೆ’  ಹೀಗಂತ ಮುಂಬೈನಲ್ಲಿರುವ ಅಮೆ­ರಿಕ ಕಾನ್ಸುಲ್‌ ಜನರಲ್‌ ಮೈಕೆಲ್ ಎಸ್‌ ಓವನ್‌, 2006ರಲ್ಲಿ ಮೋದಿ ಅವರನ್ನು ಭೇಟಿಯಾದ ನಂತರ ಅಮೆರಿಕಕ್ಕೆ ಕಳುಹಿ­ಸಿದ್ದ ರಹಸ್ಯ ಸಂದೇಶದಲ್ಲಿ ತಿಳಿಸಿದ್ದರು ಎಂದು ವಿಕಿ­ಲೀಕ್ಸ್‌ ಇದೇ ವೇಳೆ ಬಹಿರಂಗ­ಪಡಿಸಿದೆ.

ADVERTISEMENT

ಅಧಿಕಾರದಲ್ಲಿರುವ ಮೋದಿ, ಪಕ್ಷದ ಹಿರಿಯ ಪದಾಧಿಕಾರಿ­ಗಳನ್ನು ಕೂಡ ಗಣ­ನೆಗೆ ತೆಗೆದುಕೊಳ್ಳದ ಅಸಭ್ಯ ವರ್ತನೆಯ ಮನುಷ್ಯ. ಇದೇ  ಮೋದಿ ನಾಯಕತ್ವದ ಶೈಲಿ ಎಂದು ಅಮೆರಿಕದ ಕಾನ್ಸುಲ್ ಜನ­ರಲ್ ಬಣ್ಣಿಸಿದ್ದರು. ಆದರೆ, ಭಾರತದ ಉಳಿದ ರಾಜಕಾರ­ಣಿ­­ಗಳಂತೆ ಮೋದಿ, ಶ್ರೀಮಂತರಾಗಲು ಅಧಿಕಾರವನ್ನು ದುರು­ಪ­ಯೋಗಪಡಿಸಿ­ಕೊಂಡಿಲ್ಲ ಎಂಬ ಮಾತು­ಗಳನ್ನೂ ಹೇಳಿ­ದ್ದರು.

  ರಾಜ್ಯದ ಕೆಳ ಮತ್ತು ಮಧ್ಯಮ ಹಂತದ ಆಡಳಿತ ಯಂತ್ರದಲ್ಲಿ ಸಣ್ಣಪುಟ್ಟ ಭ್ರಷ್ಟಾ­ಚಾರಕ್ಕೆ ಕಡಿವಾಣ ಹಾಕಲು ಮಾತ್ರ ಅವರು ಸಫಲರಾಗಿದ್ದಾರೆ. ಆದರೆ, ಉನ್ನತ ಹಂತದಲ್ಲಿ ಇನ್ನೂ ಭ್ರಷ್ಟಾಚಾರ ಮೊದ­ಲಿ­ನಂತೆಯೇ ಉಳಿದುಕೊಂಡಿದೆ ಎಂದೂ ಕಾನ್ಸುಲ್‌ ಜನರಲ್‌ ತಿಳಿಸಿದ್ದರು ಎಂದು ವಿಕಿಲೀಕ್ಸ್‌ ಈ ಸಂದರ್ಭದಲ್ಲಿ ಬಹಿರಂಗ­ಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.