ADVERTISEMENT

ಸುಳ್ಳು ಮಾಹಿತಿ ನೀಡಿದರೆ ಹಾಸ್ಯಕ್ಕೆ ಗುರಿಯಾಗುವಿರಿ: ಯೋಗಿ ಟೀಕೆಗೆ ಪಿಣರಾಯಿ ತಿರುಗೇಟು

ಏಜೆನ್ಸೀಸ್
Published 5 ಅಕ್ಟೋಬರ್ 2017, 14:36 IST
Last Updated 5 ಅಕ್ಟೋಬರ್ 2017, 14:36 IST
ಪಿಣರಾಯಿ ವಿಜಯನ್‌ (ಸಂಗ್ರಹ ಚಿತ್ರ)
ಪಿಣರಾಯಿ ವಿಜಯನ್‌ (ಸಂಗ್ರಹ ಚಿತ್ರ)   

ತಿರುವನಂತಪುರ: ಬಿಜೆಪಿ ನಾಯಕರ ‘ಸುಳ್ಳು ಮತ್ತು ನಕಲಿ’ ಮಾಹಿತಿ ನಂಬಿ ಮಾತನಾಡಿದರೆ ಅಪಹಾಸ್ಯಕ್ಕೆ ಗುರಿಯಾಗುವಿರಿ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ತಿರುಗೇಟು ನೀಡಿದ್ದಾರೆ.

ಕೇರಳದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದ್ದು, ಉತ್ತಮ ವೈದ್ಯಕೀಯ ಸೇವೆಗಳಿಲ್ಲ ಎಂದು ಆದಿತ್ಯನಾಥ್‌ ಬುಧವಾರ ಬಿಜೆಪಿಯ ಜನರಕ್ಷಾ ಯಾತ್ರೆಯ ವೇಳೆ ಟೀಕಿಸಿದ್ದರು.

ಕೇರಳದಲ್ಲಿ ನವಜಾತ ಶಿಶುಗಳ ಸಾವಿನ ಪ್ರಮಾಣ 10ರಷ್ಟಿದ್ದರೆ, ಉತ್ತರ ಪ್ರದೇಶದಲ್ಲಿ ಅದು 43ರಷ್ಟಿದೆ. ರಾಷ್ಟ್ರೀಯ ಪ್ರಮಾಣ 34ರಷ್ಟಿದೆ. ವಾಸ್ತವ ಹೀಗಿರುವಾಗ ಜವಾಬ್ದಾರಿಯುತ ಹುದ್ದೆಯಲ್ಲಿರುವ ಯೋಗಿ ಆದಿತ್ಯನಾಥ್‌ ಅವರು ಬಿಜೆಪಿಯ ಸುಳ್ಳು ಅಂಕಿ ಅಂಶ ಹೇಳಿ ನಗೆಪಾಟಲಿಗೀಡಾಗಿದ್ದಾರೆ ಎಂದು ವಿಜಯನ್‌ ವ್ಯಂಗ್ಯವಾಡಿದ್ದಾರೆ.

ADVERTISEMENT

‘ಆದಿತ್ಯನಾಥ ಅವರಿಂದಾಗಿ ಇಡೀ ದೇಶದ ಜನರಿಗೆ ನವಜಾತ ಶಿಶುಗಳ ಸಾವಿನ ಪ್ರಮಾಣದಲ್ಲಿ ಎರಡೂ ರಾಜ್ಯಗಳ ನಡುವಿರುವ ವ್ಯತ್ಯಾಸ ತಿಳಿಯುವಂತಾಯಿತು. ಅವರಿಗೆ ನಾನು ಋಣಿ’ ಎಂದು ಅವರು ವ್ಯಂಗ್ಯವಾಡಿದ್ದಾರೆ.

‘ಉತ್ತರ ಪ್ರದೇಶದಲ್ಲಿಯೇ ಅಸಂಖ್ಯಾತ ಸಮಸ್ಯೆಗಳಿರುವಾಗ ಬಿಡುವು ಮಾಡಿಕೊಂಡು ಕೇರಳದ ಕುಂದುಕೊರತೆಗಳ ಬಗ್ಗೆ ಪಟ್ಟಿ ಮಾಡಿರುವುದು ನಿಜಕ್ಕೂ ಸಂತಸದ ವಿಚಾರ’ ಎಂದು ಪಿಣರಾಯಿ ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.