ADVERTISEMENT

ಸೇನಾ ಸಮವಸ್ತ್ರದಲ್ಲಿದ್ದ ಉಗ್ರರು!

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 19:59 IST
Last Updated 26 ಸೆಪ್ಟೆಂಬರ್ 2013, 19:59 IST

ಜಮ್ಮು(ಪಿಟಿಐ): ‘ಪ್ರಾಥಮಿಕ ವರದಿ­ಗಳ ಪ್ರಕಾರ, ಸೇನಾ ಸಮವಸ್ತ್ರದಲ್ಲಿದ್ದ ನಾಲ್ವರು ಉಗ್ರರು ಗುರುವಾರ ಬೆಳಗಿನ ಜಾವ ಗಡಿಯೊಳಗಿಂದ ನುಸುಳಿದ್ದರು ಎಂದು ತಿಳಿದು ಬಂದಿದೆ’ ಎಂದು ಕೇಂದ್ರ ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ನವದೆಹಲಿಯಲ್ಲಿ ತಿಳಿಸಿದ್ದಾರೆ.

ಅಲ್ಲಿ ನಡೆದದ್ದು ಏನು?: ಕಥುವಾ ಜಿಲ್ಲೆಯ ಹೀರಾ ನಗರ ಪೊಲೀಸ್‌ ಠಾಣೆಗೆ ಗುರುವಾರ ಬೆಳಗಿನ ಜಾವ ನುಗ್ಗಿದ ಸೇನಾ ಸಮವಸ್ತ್ರ ಧರಿಸಿದ್ದ ಉಗ್ರರು ಅಲ್ಲಿಯ ಸಿಬ್ಬಂದಿ ಮೇಲೆ ಮನಬಂದಂತೆ ಗುಂಡು ಹಾರಿಸಿದರು.

ನಂತರ  ಅಂಗಡಿ­ಯೊಂದರ ಮಾಲೀಕ ಹಾಗೂ ಲಾರಿ  ಚಾಲಕ­ನೊಬ್ಬನ್ನು ಗುಂಡಿಕ್ಕಿ ಸಾಯಿಸಿದ್ದಾರೆ. ತಮ್ಮನ್ನು ಸಾಂಬಾ ಸೇನಾ ಶಿಬಿರಕ್ಕೆ ಕರೆದೊಯ್ಯುವಂತೆ ಲಾರಿ ಕ್ಲೀನರ್‌ಗೆ ಬೆದರಿಸಿದ್ದಾರೆ. ಅವನೇ ಲಾರಿಯಲ್ಲಿ  ಉಗ್ರರನ್ನು ಅಲ್ಲಿಂದ ಕರೆದೊಯ್ದಿದ್ದಾನೆ.

ನೇರವಾಗಿ ಪಠಾಣಕೋಟ್‌–ಜಮ್ಮು ಹೆದ್ದಾರಿ ಮೂಲಕ 18 ಕಿ.ಮೀ ದೂರದ ಸಾಂಬಾ ಜಿಲ್ಲೆಯ ಸೇನಾ ಶಿಬಿರಕ್ಕೆ  ಬಂದಿಳಿದಿದ್ದಾರೆ. 
ಸಾಂಬಾ ಬ್ರಿಗೇಡ್‌ ಕಚೇರಿಯಿಂದ ಒಂದೂ­ವರೆ ಕಿ.ಮೀ ದೂರದಲ್ಲಿರುವ ಸೇನಾ ಅಧಿಕಾರಿಗಳ ಮೆಸ್‌­ನೊಳಗೆ­(ಭೋಜನಾಲಯ) ನೇರವಾಗಿ ಲಾರಿ ನುಗ್ಗಿಸಿದ ಶಸ್ತ್ರಸಜ್ಜಿತ ಉಗ್ರರು ಅಲ್ಲಿಯೂ ಮನಬಂದಂತೆ ಗುಂಡಿನ ಮಳೆಗೆರೆದಿದ್ದಾರೆ.

ಲೆಫ್ಟಿನೆಂಟ್‌ ಕರ್ನಲ್‌  ವಿಕ್ರಂಜೀತ್‌ ಸಿಂಗ್‌ ಸೇರಿದಂತೆ ನಾಲ್ವರು ಸೇನಾ ಸಿಬ್ಬಂದಿ ರಕ್ತದ ಮಡುವಲ್ಲಿ ಬಿದ್ದಿದ್ದಾರೆ.

12ಗಂಟೆ ಮೊದಲೇ ಬಂದಿದ್ದರು!: ಪೊಲೀಸ್‌ ಠಾಣೆಯ ಮೇಲಿನ ದಾಳಿಗೂ 12 ಗಂಟೆಗೂ ಮೊದಲೇ ಗೆರಿಲ್ಲಾ ಯುದ್ಧ ಪರಿಣತ ಉಗ್ರರು ಭಾರತದೊಳಗೆ ನುಸುಳಿದ್ದರು ಎಂದು ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ  ಸುದ್ದಿಗಾರರಿಗೆ ತಿಳಿಸಿದರು.

ಕೊಡಗಿನ ಸೇನಾಧಿಕಾರಿಗೆ ಗಾಯ
ಮಡಿಕೇರಿ:
ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶಕ್ಕೆ ಸಮೀಪದಲ್ಲಿರುವ ಸಾಂಬಾ ಎಂಬಲ್ಲಿ ಗುರುವಾರ ಬೆಳಿಗ್ಗೆ ನಡೆದ ಆತ್ಮಹತ್ಯೆ ಬಾಂಬ್‌ ದಾಳಿಯಲ್ಲಿ ಕೊಡಗು ಮೂಲದವರಾದ ಸೇನಾಧಿ­ಕಾರಿ ಕಾಕೋಟು ಪರಂಬು ಗ್ರಾಮದ ಮಂಡೆಟೀರ ಎಂ. ಉತ್ತಯ್ಯ ಗಾಯಗೊಂಡಿದ್ದಾರೆ.

ಹೆಚ್ಚಿನ ಚಿಕಿತ್ಸೆಗಾಗಿ ಸೇನಾ ಆಸ್ಪತ್ರೆಗೆ ದಾಖಲಿ­ಸಲಾ­ಗಿದೆ. 

‘ವೀರಚಕ್ರ’ ಪುರಸ್ಕಾರ: ಉತ್ತಯ್ಯ ಅವರ ತಂದೆ ಮಂಡೆಟೀರ ರವಿ ಕೂಡ ಕರ್ನಲ್‌ ಆಗಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಇವರ ಅಪ್ರತಿಮ ಸಾಹಸ ಪರಿಗಣಿಸಿ ಕೇಂದ್ರ ಸರ್ಕಾರ ‘ವೀರಚಕ್ರ’ ಪ್ರಶಸ್ತಿ ನೀಡಿ ಗೌರವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.