ADVERTISEMENT

ಸೇನಾ ಸಾಮರ್ಥ್ಯ ಹೆಚ್ಚಳಕ್ಕೆ ‘ಏರ್‌ ಕ್ಯಾವಲ್ರಿ’

ವಿಯೆಟ್ನಾಂ ಯುದ್ಧದಲ್ಲಿ ಅಮೆರಿಕ ಬಳಸಿದ್ದ ಯುದ್ಧತಂತ್ರ ಅಳವಡಿಕೆಗೆ ಮುಂದಾದ ಭಾರತೀಯ ಸೇನೆ

ಪಿಟಿಐ
Published 13 ಮೇ 2018, 19:30 IST
Last Updated 13 ಮೇ 2018, 19:30 IST
ಸೇನಾ ಸಾಮರ್ಥ್ಯ ಹೆಚ್ಚಳಕ್ಕೆ ‘ಏರ್‌ ಕ್ಯಾವಲ್ರಿ’
ಸೇನಾ ಸಾಮರ್ಥ್ಯ ಹೆಚ್ಚಳಕ್ಕೆ ‘ಏರ್‌ ಕ್ಯಾವಲ್ರಿ’   

ಕದನ ಹೆಲಿಕಾಪ್ಟರ್‌ಗಳು, ಟ್ಯಾಂಕ್‌ಗಳು ಮತ್ತು ಕಾಲಾಳು ಸೈನಿಕರನ್ನು ಬಳಸಿಕೊಂಡು ವೈರಿ ಪಡೆಯ ಮೇಲೆ ದಾಳಿ ನಡೆಸುವ ‘ಏರ್ ಕ್ಯಾವಲ್ರಿ’ ಯುದ್ಧತಂತ್ರವನ್ನು ಆಧರಿಸಿ ಭಾರತೀಯ ಸೇನೆಯು ರಾಜಸ್ಥಾನದ ಮರುಭೂಮಿ ಪ್ರದೇಶದಲ್ಲಿ ಈಚೆಗೆ ಅಣಕು ಕಾರ್ಯಾಚರಣೆ ನಡೆಸಿದೆ.

1970ರ ದಶಕದಲ್ಲಿ ವಿಯೆಟ್ನಾಂ ಯುದ್ಧದಲ್ಲಿ ಸ್ಥಳೀಯರ ಗೆರಿಲ್ಲಾ ತಂತ್ರಕ್ಕೆ ಪ್ರತಿಯಾಗಿ ಅಮೆರಿಕದ ಸೇನೆ ‘ಏರ್ ಕ್ಯಾವಲ್ರಿ’ಯನ್ನು ಬಳಸಿತ್ತು. ಆ ತಂತ್ರವನ್ನೇ ತುಸು ಮಾರ್ಪಡಿಸಿ ತನ್ನ ಕದನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಭಾರತೀಯ ಸೇನೆ ಮುಂದಾಗಿದೆ. 

ಸಾಮಾನ್ಯವಾಗಿ ಯುದ್ಧದ ಸಂದರ್ಭದಲ್ಲಿ ಭೂಸೇನೆಯ ಟ್ಯಾಂಕ್ ಮತ್ತು ಕಾಲಾಳು ತುಕಡಿಗಳು ವೈರಿ ಪಡೆಯ ಮೇಲೆ ಜಂಟಿಯಾಗಿ ಮುಗಿಬೀಳುತ್ತವೆ. ವೈರಿಗಳನ್ನು ಹಿಮ್ಮೆಟ್ಟಿಸಲು ಈ ಎರಡೂ ತುಕಡಿಗಳಿಗೆ ಸಾಧ್ಯವಾಗದಿದ್ದಾಗ ಕದನ ಹೆಲಿಕಾಪ್ಟರ್‌ಗಳ ತುಕಡಿಯನ್ನು ಯುದ್ಧಕ್ಕೆ ನಿಯೋಜಿಸಲಾಗುತ್ತದೆ. ಆದರೆ ‘ಏರ್ ಕ್ಯಾವಲ್ರಿ’ ಯುದ್ಧತಂತ್ರದ ಪ್ರಕಾರ ಟ್ಯಾಂಕ್, ಕಾಲಾಳು ಮತ್ತು ಕದನ ಹೆಲಿಕಾಪ್ಟರ್‌ಗಳನ್ನು ಒಳಗೊಂಡ ತುಕಡಿ ಒಟ್ಟಾಗಿಯೇ ದಾಳಿ ನಡೆಸುತ್ತದೆ.

ADVERTISEMENT

ಲಘು ಕದನ ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ವೈರಿ ಪಡೆಯ ಮೇಲೆ ದಾಳಿ ನಡೆಸಲಾಗುತ್ತದೆ. ಸೈನಿಕರನ್ನು ಮತ್ತು ಸೇನಾ ವಾಹನಗಳನ್ನು ಏರ್‌ಡ್ರಾಪ್‌ ಮಾಡಲೂ ಇವು ಬಳಕೆಯಾಗುತ್ತವೆ. ಸೇನಾ ವಾಹನಗಳಿಗಿಂತ ಕ್ಷಿಪ್ರವಾಗಿ ಸೈನಿಕರನ್ನು ವೈರಿ ನೆಲೆಯತ್ತ ಕರೆದೊಯ್ಯಲು ಸಾಧ್ಯವಾಗುತ್ತದೆ

* ಕಾಲಾಳುಗಳು ದಾಳಿ ಮುಂದುವರಿಸುತ್ತಾರೆ

* ಕಾಲಾಳುಗಳಿಗೆ ರಕ್ಷಣೆ ಒದಗಿಸುವುದರ ಜತೆಗೆ ಟ್ಯಾಂಕ್‌ಗಳು ಎದುರಾಳಿಗಳ ಮೇಲೆ ದಾಳಿ ನಡೆಸುತ್ತವೆ

* ಇವೆಲ್ಲವುಗಳಿಗಿಂತ ಮುಂಬದಿಯಲ್ಲಿರುವ ಕದನ ಹೆಲಿಕಾಪ್ಟರ್‌ಗಳು ವೈರಿ ಪಡೆಗಳ ಮೇಲೆ ಭಾರಿ ಪ್ರಮಾಣದಲ್ಲಿ ದಾಳಿ ನಡೆಸುತ್ತಾ, ತುಕಡಿಯನ್ನು ಮುನ್ನಡೆಸುತ್ತವೆ

* ಯುದ್ಧಗಳಲ್ಲಿ ಕದನ ಹೆಲಿಕಾಪ್ಟರ್‌ಗಳನ್ನು ಪರಿಣಾಮಕಾರಿ ಯಾಗಿ ಬಳಸಿಕೊಳ್ಳಲು, ತರಬೇತಿ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ.

* ಅತ್ಯಾಧುನಿಕ ಅಪಾಚೆ ಕದನ ಹೆಲಿಕಾಪ್ಟರ್‌ ಗಳನ್ನು ಖರೀದಿಸಲಾಗುತ್ತಿದೆ. ಅವನ್ನು ಏರ್‌ ಕ್ಯಾವಲ್ರಿಯಲ್ಲಿ ಬಳಸಲಾಗುತ್ತದೆ.

* ಅಗತ್ಯ ಸಂದರ್ಭಗಳಲ್ಲಿ ಏರ್‌ ಕ್ಯಾವಲ್ರಿ ತುಕಡಿಗಳನ್ನು ದೇಶದ ಪಶ್ಚಿಮ ಮತ್ತು ಪೂರ್ವಗಡಿ ಗಳಲ್ಲಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

* ಈ ಯುದ್ಧತಂತ್ರವನ್ನು ಅನುಕರಿಸುವುದರಿಂದ ಯಾವುದೇ ಕಾರ್ಯಾಚರಣೆಯನ್ನು ಅತ್ಯಂತ ಕ್ಷಿಪ್ರಗತಿಯಲ್ಲಿ ನಡೆಸಲು ಸಾಧ್ಯವಾಗುತ್ತದೆ.

* ಕಾರ್ಯಾಚರಣೆ ವೇಳೆಯಲ್ಲಿ ಟ್ಯಾಂಕ್‌ಗಳು, ಹೆಲಿಕಾಪ್ಟರ್‌ಗಳು ಮತ್ತು ಕಾಲಾಳುಗಳ ಮಧ್ಯೆ ಗರಿಷ್ಠ ಮಟ್ಟದ ಸಹಕಾರ ಇರಬೇಕಾಗುತ್ತದೆ.

* ಕಾರ್ಯಾಚರಣೆಗಳು ಪೂರ್ವ ಯೋಜಿತವಾಗಿ ನಡೆಯುವುದರಿಂದ ಹಣ, ಸಮಯ ಉಳಿತಾಯ ಸಾಧ್ಯ. ಪ್ರಾಣ ಹಾನಿ ತಗ್ಗಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.