ADVERTISEMENT

ಸೇನೆಗೆ ಸುಪ್ರೀಂಕೋರ್ಟ್ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2011, 19:30 IST
Last Updated 2 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): 14 ವರ್ಷಗಳ ಅಲ್ಪಾವಧಿ ಸೇವಾ ಅವಧಿ ಬಳಿಕ ನಿವೃತ್ತರಾದ 11 ಮಹಿಳಾ ಅಧಿಕಾರಿಗಳನ್ನು ಸೇವೆಯಲ್ಲಿ ಮುಂದುವರಿಸುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಸೇನಾ ಪಡೆಗೆ ನಿರ್ದೇಶನ ನೀಡಿದೆ.

ಇದೇ ತಿಂಗಳ 12ರಿಂದ ಅವರನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ಜೆ.ಎಂ.ಪಾಂಚಾಲ್ ಹಾಗೂ ಎಚ್.ಎಲ್. ಗೋಖಲೆ ಅವರನ್ನು ಒಳಗೊಂಡ ಪೀಠ ಆದೇಶದಲ್ಲಿ ತಿಳಿಸಿದೆ.

ತಮ್ಮನ್ನು ಪೂರ್ಣಾವಧಿಗೆ ನೇಮಕ ಮಾಡಿಕೊಳ್ಳುವಂತೆ ಕೋರಿ ಈ ಮಹಿಳಾ ಅಧಿಕಾರಿಗಳು ದೆಹಲಿ ಹೈಕೋರ್ಟ್‌ಗೆ ಈ ಮೊದಲು ಮನವಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ ಹೈಕೋರ್ಟ್, ಇವರನ್ನು ಕಾಯಂಗೊಳಿಸುವಂತೆ 2010ರ ಮಾರ್ಚ್ 12 ರಂದು ನಿರ್ದೇಶನ ನೀಡಿತ್ತು. ನಂತರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸೇನೆಯು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ ಸುಪ್ರೀಂಕೋರ್ಟ್, ಸೇನೆಯ ಮೇಲ್ಮನವಿಯನ್ನು ಮಾನ್ಯ ಮಾಡದೇ, ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ.

ಪೂರ್ಣಾವಧಿಗೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ 11 ಮಹಿಳಾ ಅಧಿಕಾರಿಗಳಿಗೆ ಮಾತ್ರವೇ ತನ್ನ ಈ ಆದೇಶವು ಅನ್ವಯವಾಗುತ್ತದೆ ಎಂದೂ ಅದು ಹೇಳಿದೆ.

ಈ ಮೊದಲು ಹೈಕೋರ್ಟ್, ತನ್ನ ಆದೇಶವನ್ನು ಜಾರಿಗೊಳಿಸಲು ಸೇನೆಗೆ ಎರಡು ತಿಂಗಳ ಕಾಲಾವಕಾಶ ನೀಡಿತ್ತು. ಆದರೆ ಸೇನೆ ಇದನ್ನು ಪಾಲಿಸಲಿಲ್ಲ. ಆದೇಶಕ್ಕೆ ಅಗೌರವ ತೋರಿದ್ದಕ್ಕಾಗಿ ನಂತರದಲ್ಲಿ ದೆಹಲಿ ಹೈಕೋರ್ಟ್, ಸೇನೆಗೆ ನೋಟಿಸ್ ಜಾರಿಗೊಳಿಸಿತ್ತು.

ಹೈಕೋರ್ಟ್ ಆದೇಶದ ಅನ್ವಯ 11 ಮಹಿಳಾ ಅಧಿಕಾರಿಗಳನ್ನು ಸೇವೆಯಲ್ಲಿ ಮುಂದುವರಿಸುವುದಕ್ಕೆ ಸೇನೆಯು ವಾದ ಮಂಡನೆ ವೇಳೆ ವಿರೋಧ ವ್ಯಕ್ತಪಡಿಸಿತು.

ಆದರೆ ಸುಪ್ರೀಂಕೋರ್ಟ್ ಇದಕ್ಕೆ ಸೊಪ್ಪು ಹಾಕಲಿಲ್ಲ. `ಹೈಕೋರ್ಟ್ ಆದೇಶಕ್ಕೆ ತಡೆ ನೀಡಿಲ್ಲ. ಹಾಗಾಗಿ ಮಹಿಳಾ ಅಧಿಕಾರಿಗಳು ಸೇವೆಯಲ್ಲಿ ಯಾಕೆ ಮುಂದುವರಿಯಬಾರದು?~ ಎಂದು ಪ್ರಶ್ನಿಸಿತು.

ಮೇಜರ್ ಸಂಧ್ಯಾ ಯಾದವ್, ರೇಣು ನೌಟಿಯಾಲ್, ಎನ್‌ವಿಎನ್ ರಾವ್, ಅನ್ನಪೂರ್ಣ, ಪ್ರೇರಣಾ ಪಂಡಿತ್, ರೀಟಾ ತನೇಜಾ, ಲೆ.ಕರ್ನಲ್ ಅಶು ಯಾದವ್, ಸಂಗೀತಾ ಸರ್ದಾನಾ, ರೇಣು ಖಿಮಾ, ಮೋನಿಕಾ ಮಿಶ್ರ ಅವರು ಕೋರ್ಟ್ ಆದೇಶದ ಲಾಭ ಪಡೆಯಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.