ADVERTISEMENT

ಸೇವಾ ತೆರಿಗೆ ವಂಚನೆ: ಕಿಂಗ್‌ಫಿಷರ್ ವಿರುದ್ಧ ಕೋರ್ಟ್‌ಗೆ- ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 19:30 IST
Last Updated 17 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಪ್ರಯಾಣಿಕರಿಂದ ಸಂಗ್ರಹಿಸಿರುವ ಸೇವಾ ತೆರಿಗೆಯನ್ನು ಪಾವತಿ ಸದಿರುವುದಕ್ಕಾಗಿ ಕಿಂಗ್‌ಫಿಷರ್ ಏರ್‌ಲೈನ್ಸ್ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಕಂದಾಯ ಇಲಾಖೆ ಬೆದರಿಸಿದೆ.

`ಅವರು (ಕಿಂಗ್‌ಫಿಷರ್) ನ್ಯಾಯಾಲಯವನ್ನು ಎದುರಿಸಲೇಬೇಕು. ಕಂಪೆನಿ ಸೇವಾ ತೆರಿಗೆ ಪಾವತಿಸದೆ ವಂಚಿಸಿದೆ. ಅದಕ್ಕಾಗಿ ಜೈಲು ಶಿಕ್ಷೆ ಆಗಬಹುದು~ ಎಂದು ಕೇಂದ್ರ ಅಬಕಾರಿ ಮತ್ತು ಸೀಮಾ ಸುಂಕ ಮಂಡಳಿಯ (ಸಿಬಿಇಸಿ) ಅಧ್ಯಕ್ಷ ಎಸ್.ಕೆ. ಗೋಯಲ್ ಹೇಳಿದ್ದಾರೆ.

76 ಕೋಟಿ ರೂಪಾಯಿ ಮೊತ್ತವನ್ನು ಪಾವತಿಸದೇ ಇರುವುದಕ್ಕಾಗಿ ಈಗಾಗಲೇ ಸೇವಾ ತೆರಿಗೆ ಇಲಾಖೆಯು ಸಾಲದ ಸುಳಿಯಲ್ಲಿ ಸಿಲುಕಿರುವ ಕಿಂಗ್‌ಫಿಷರ್ ಸಂಸ್ಥೆಯ ಸುಮಾರು 40 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿದೆ. ಅಲ್ಲದೇ ಕಂಪೆನಿಯ ಅಂತರರಾಷ್ಟ್ರೀಯ ವಿಮಾನಯಾನ ಒಕ್ಕೂಟದ ಖಾತೆಗಳನ್ನೂ ಮುಟ್ಟುಗೋಲು ಹಾಕಿಕೊಂಡಿದೆ.

`ಈಗ ನಮ್ಮ ಮುಂದೆ ಎರಡು ಆಯ್ಕೆಗಳಿವೆ. ಒಂದು ಬಾಕಿ ಉಳಿದಿರುವ ಮೊತ್ತವನ್ನು ಕಂಪೆನಿಯಿಂದ ವಶಪಡಿಸಿಕೊಳ್ಳುವುದು. ಎರಡನೆಯದಾಗಿ ನ್ಯಾಯಾಲಯದಿಂದ ಕಂಪೆನಿಗೆ ಶಿಕ್ಷೆ ಆಗುವಂತೆ ಮಾಡುವುದು~ ಎಂದು ಗೋಯಲ್ ಹೇಳಿದ್ದಾರೆ.

ಮಾರ್ಚ್ 31ರ ಒಳಗಾಗಿ ಬಾಕಿ ಉಳಿದಿರುವ ಸೇವಾ ತೆರಿಗೆಗಳನ್ನು ಪಾವತಿಸುವುದಾಗಿ ಕಿಂಗ್‌ಫಿಷರ್ ಸಿಬಿಇಸಿಗೆ ತಿಳಿಸಿದೆ. ಕಿಂಗ್‌ಫಿಷರ್ ತನ್ನ ಪ್ರಯಾಣಿಕರಿಂದ ಶೇ 10ರಷ್ಟು ಸೇವಾ ತೆರಿಗೆ ಸಂಗ್ರಹಿಸಿದೆ. ಆದರೆ ಅದನ್ನು ಇಲಾಖೆಗೆ ಪಾವತಿಸಿಲ್ಲ ಎಂದು ಗೋಯಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.