ಡೆಹ್ರಾಡುನ್/ ನವದೆಹಲಿ (ಪಿಟಿಐ): ಕಾಂಗ್ರೆಸ್‌ನಲ್ಲಿ ಎದ್ದಿರುವ ಭಿನ್ನಮತ ಸವಾಲಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ವಿಜಯ್ ಬಹುಗುಣ ಶುಕ್ರವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದರು.
ಆದರೆ ಈ ಇಬ್ಬರ ಮಧ್ಯೆ ಏನು ಮಾತುಕತೆ ನಡೆಯಿತೆಂಬುದು ಗೊತ್ತಾಗಿಲ್ಲ. ಇದೇ ವೇಳೆ ಸೋನಿಯಾ ಗಾಂಧಿ ಕೂಡ ಪಕ್ಷದ ಇತರ ಪ್ರಮುಖರೊಂದಿಗೆ ಉತ್ತರಾಖಂಡದಲ್ಲಿ ಭಿನ್ನಮತ ಶಮನಗೊಳಿಸಲು ಅನುಸರಿಸಬೇಕಾದ ಕಾರ್ಯತಂತ್ರ ಕುರಿತು ಚರ್ಚಿಸಿದರು. ಪ್ರಧಾನಿ ಮನಮೋಹನ್ ಸಿಂಗ್ ಅವರೂ ಸಭೆಯಲ್ಲಿ ಭಾಗವಹಿಸಿದ್ದರು.
ಕೇಂದ್ರ ಸಚಿವ ಹರೀಶ್ ರಾವತ್ ಅವರಿಗೆ ನಿಷ್ಠರಾದ ಪಕ್ಷದ 14 ಶಾಸಕರು ಬಹುಗುಣ ಅವರನ್ನು ಮುಖ್ಯಮಂತ್ರಿ ಯಾಗಿ ನೇಮಿಸಿರುವುದನ್ನು ವಿರೋಧಿಸಿ ಬಂಡಾಯ ಮೊಳಗಿಸಿರುವುದು ಈ ಪರಿಸ್ಥಿತಿಗೆ ಕಾರಣವಾಗಿದೆ.
ಈ ಮಧ್ಯೆ ಪಕ್ಷದ ಮೂವರು ಶಾಸಕರಿಗೆ ಸ್ಪೀಕರ್ ಶೈಲೇಂದ್ರ ಮೋಹನ್ ಸಿಂಘಲ್ ಶುಕ್ರವಾರ ಪ್ರಮಾಣ ವಚನ ಬೋಧಿಸಿದರು. ಕಾಂಗ್ರೆಸ್ ಇಲ್ಲಿ 32 ಶಾಸಕರ ಬಲ ಹೊಂದಿದ್ದು, ರಾವತ್ ನಿಷ್ಠರಾದ 14 ಶಾಸಕರು ಇನ್ನೂ ಪ್ರಮಾಣವಚನ ಸ್ವೀಕರಿಸಿಲ್ಲ.
ಈ 14 ಶಾಸಕರು ಎಲ್ಲಿದ್ದಾರೆಂಬ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಸ್ಪೀಕರ್ ಸಿಂಘಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.