ADVERTISEMENT

ಸೋನಿಯಾ ವಿರುದ್ಧ ಜಗನ್‌ ವಾಗ್ದಾಳಿ

ರಾಜಕೀಯ ಲಾಭಕ್ಕೆ ರಾಜ್ಯ ವಿಭಜನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2014, 19:30 IST
Last Updated 17 ಫೆಬ್ರುವರಿ 2014, 19:30 IST
ಏಕೀಕೃತ ಆಂಧ್ರಕ್ಕೆ ಒತ್ತಾಯಿಸಿ ದೆಹಲಿಯ ಜಂತರ್‌ಮಂತರ್‌ನಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಸೋಮವಾರ ವೈಎಸ್‌ಆರ್‌ ಕಾಂಗ್ರೆಸ್‌ ಮುಖಂಡ ಜಗನ್‌  ಮೋಹನ ರೆಡ್ಡಿ ಮತ್ತು ತಾಯಿ ವಿಜಯಮ್ಮ ಭಾಗವಹಿಸಿದ್ದರು. 	–ಪಿಟಿಐ ಚಿತ್ರ
ಏಕೀಕೃತ ಆಂಧ್ರಕ್ಕೆ ಒತ್ತಾಯಿಸಿ ದೆಹಲಿಯ ಜಂತರ್‌ಮಂತರ್‌ನಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಸೋಮವಾರ ವೈಎಸ್‌ಆರ್‌ ಕಾಂಗ್ರೆಸ್‌ ಮುಖಂಡ ಜಗನ್‌ ಮೋಹನ ರೆಡ್ಡಿ ಮತ್ತು ತಾಯಿ ವಿಜಯಮ್ಮ ಭಾಗವಹಿಸಿದ್ದರು. –ಪಿಟಿಐ ಚಿತ್ರ   

ನವದೆಹಲಿ(ಪಿಟಿಐ): ರಾಜಕೀಯ ಲಾಭ ಪಡೆಯುವ ಏಕೈಕ ಉದ್ದೇಶ­ದಿಂದಲೇ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆಂಧ್ರ ವಿಭಜನೆ ಮಾಡುತ್ತಿದ್ದಾರೆ ಎಂದು ವೈಎಸ್ಆರ್‌ ಕಾಂಗ್ರೆಸ್‌ ಮುಖಂಡ ಜಗನ್‌ ಮೋಹನ್‌ ರೆಡ್ಡಿ ಆಪಾದಿಸಿದ್ದಾರೆ.

ಇಲ್ಲಿನ ಜಂತರ್ ಮಂತರ್‌ನಲ್ಲಿ ಅಭಿಮಾನಿಗಳೊಂದಿಗೆ  ಸೋಮವಾರ ಧರಣಿ ನಡೆಸಿದ ಜಗನ್‌, ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡು­ವುದಕ್ಕೋಸ್ಕರವೇ ಕೇಂದ್ರದ ಆಡಳಿತಾ­ರೂಢ ಕಾಂಗ್ರೆಸ್‌ ಸರ್ಕಾರ ರಾಜ್ಯ ವಿಭ­ಜನೆ ಮಾಡುತ್ತಿದೆ. ಇದಕ್ಕಾಗಿ ತೆಲಂಗಾ­ಣದಲ್ಲಿ ಟಿಆರ್ಎಸ್‌ ಜತೆ ಕಾಂಗ್ರೆಸ್‌ ಸ್ಥಾನ ಹೊಂದಾಣಿಕೆ ಮಾಡಿ­ಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸೋನಿಯಾ ಅವರ ಇಟಲಿ ಹಿನ್ನೆ­ಲೆಯ ಬಗ್ಗೆ ಗೇಲಿ ಮಾಡಿದ ಜಗನ್‌, ‘ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌’ ಅಲ್ಲ ಅದು ‘ಇಟಾಲಿಯನ್‌ ನ್ಯಾಷನಲ್‌ ಕಾಂಗ್ರೆಸ್‌’ ಎಂದು ವ್ಯಂಗ್ಯವಾಡಿದರು. ಬ್ರಿಟಿಷರೂ ಆಂಧ್ರಕ್ಕೆ ಮಾಡದ್ದನ್ನು ಸೋನಿಯಾ ಈಗ ಮಾಡುತ್ತಿದ್ದಾರೆ ಎಂದು ಹೇಳಿದರು.

ಸೀಮಾಂಧ್ರ ಸಂಸದರನ್ನು ಅಮಾ­ನತು ಮಾಡುವ ಹುನ್ನಾರ­ದಿಂದಲೇ  ಸಂಸದ ಲಗಡಪತಿ ರಾಜ ಗೋಪಾಲ್‌ ಅವರಿಂದ ಸಂಸತ್ತಿನಲ್ಲಿ ಪೆಪ್ಪರ್  ಸ್ಪ್ರೇ ಮಾಡಿಸಿದ್ದಾರೆ ಎಂದು ದೂರಿದರು.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸೇರಿದಂತೆ ಯಾವುದೇ ನಾಯಕರು ಏಕೀಕೃತ ಆಂಧ್ರಕ್ಕೆ ಬೆಂಬಲ ನೀಡಿದರೆ ಅವರಿಗೆ ಬೆಂಬಲ ನೀಡುತ್ತೇನೆ  ಎಂದು ಜಗನ್ ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.