ADVERTISEMENT

ಸೌರಾಷ್ಟ್ರದಲ್ಲಿ `ನೀರಾವರಿ ರಾಜಕೀಯ'

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 22:00 IST
Last Updated 6 ಡಿಸೆಂಬರ್ 2012, 22:00 IST

ರಾಜ್‌ಕೋಟ್: ಕಾಸು ಕೊಟ್ಟರೂ ನೀರಿಲ್ಲ. ಹಳ್ಳಿಗಳಲ್ಲಿ ನಾಲ್ಕಾರು ಕಿ.ಮೀ ಹೋಗಿ ಬರಬೇಕು. ಪಟ್ಟಣಗಳಲ್ಲಿ ಕಾದು ಕೂರಬೇಕು. ಅದೂ ಮಳೆ ಬಂದರಷ್ಟೆ ನೀರು. ಬರಗಾಲ ಬಿದ್ದರೆ ಕಥೆ ಮುಗಿಯಿತು. ಗುಜರಾತಿನ ಸೌರಾಷ್ಟ್ರದ ಅಯೋಮಯ ಕಥೆ ಇದು.
ಸೌರಾಷ್ಟ್ರದ ಏಳು ಜಿಲ್ಲೆಗಳ ಜನ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. `ಶಾಪ' ವಿಮೋಚನೆಗೆ ಕಾಯುತ್ತಿದ್ದಾರೆ. ನೀರಿನ ಸಮಸ್ಯೆಯೇ ಈ ಭಾಗದಲ್ಲಿ ಚುನಾವಣೆ ಪ್ರಮುಖ ವಿಷಯ. ಪ್ರತಿ ಸಲದ ಚುನಾವಣೆ ಸಮಯದಲ್ಲಿ ನೀರಿನ ಸಮಸ್ಯೆ ಪ್ರಸ್ತಾಪವಾಗುತ್ತದೆ. ಪರಿಹಾರ ಇನ್ನೂ ಮರೀಚಿಕೆಯಾಗಿದೆ.

ನೀರಾವರಿ ಯೋಜನೆ:
ನರೇಂದ್ರ ಮೋದಿ ಸೌರಾಷ್ಟ್ರ ನೀರಿನ ಸಮಸ್ಯೆ ಪರಿಹಾರಕ್ಕೆ ಹತ್ತು ಸಾವಿರ ಕೋಟಿ ವೆಚ್ಚದ ನೀರಾವರಿ ಯೋಜನೆಯನ್ನು ಪ್ರಕಟಿಸಿದ್ದಾರೆ.  ನರ್ಮದಾ ನದಿ ನೀರಿನಿಂದ 115ಅಣೆಕಟ್ಟೆ ತುಂಬುವ ಯೋಜನೆ ಇದು. 87 ನದಿಗಳನ್ನು ಜೋಡಿಸುವ ಉದ್ದೇಶವಿದೆ.
ಈ ಯೋಜನೆ ಪ್ರಕಟಿಸಿ ಮುಖ್ಯಮಂತ್ರಿ ನೀತಿ- ಸಂಹಿತೆ ಉಲ್ಲಂಘಿಸಿದ್ದಾರೆಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಲಿಖಿತ ದೂರು ಕೊಟ್ಟಿದೆ. `ನೀರಿನ ಯೋಜನೆಗೂ ರಾಜಕೀಯ ಮಾಡಲಾಗುತ್ತಿದೆ' ಎಂದು ಮೋದಿ ಸೌರಾಷ್ಟ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ಗುಜರಾತಿನಲ್ಲಿ ಮುಂಗಾರು ಕೈಕೊಟ್ಟಿದೆ. ವಾಡಿಕೆಗಿಂತ ಅರ್ಧದಷ್ಟು ಮಳೆ ಕಡಿಮೆ ಆಗಿದೆ. ಬಿದ್ದಿರುವ ಮಳೆಯೂ ಅಕಾಲಿಕ. ಸದ್ಯ ಅಷ್ಟೋ, ಇಷ್ಟೋ ನೀರು ಸಿಗುತ್ತಿದೆ. ಬರುವ ತಿಂಗಳಿಂದ ಪರಿಸ್ಥಿತಿ ಇನ್ನೂ ಗಂಭೀರ.  ರಾಜ್‌ಕೋಟ್, ಸುರೇಂದ್ರ ನಗರ, ಭಾವ್‌ನಗರ್, ಜಾಮ್‌ನಗರ, ಜುನಾಗಢ ನಗರ ಹಾಗೂ ಬಹುತೇಕ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ.

ಈ ನಗರಗಳಿಗೆ ನೀರು ಬರುವುದು ಎರಡು ದಿನಕ್ಕೊಮ್ಮೆ ಬರೀ 20 ನಿಮಿಷದಿಂದ ಒಂದು ತಾಸು ಮಾತ್ರ. ಸುರೇಂದ್ರ ನಗರಕ್ಕೆ ನಾಲ್ಕು ದಿನಕ್ಕೊಮ್ಮೆ ನೀರು! ಅದೂ 40 ನಿಮಿಷ.ರಾಜ್‌ಕೋಟ್‌ಗೆ ನೀರು ಪೂರೈಸಲು ನಾಲ್ಕು ಅಣೆಕಟ್ಟೆಗಳಿದ್ದರೂ ಸಂಗ್ರಹ ಕಡಿಮೆಯಿದೆ. ಗುಜರಾತಿನಲ್ಲಿ ಸರಾಸರಿ 50 ಸೆಂ. ಮೀ. ಮಳೆ ಬೀಳುತ್ತದೆ. ಈ ವರ್ಷ ಆಗಿದ್ದು 30 ಸೆಂ. ಮೀಗಿಂತ ಕಡಿಮೆ. ಆಗಸ್ಟ್‌ನಲ್ಲಿ  ಮಳೆಯಾದರೆ ಪ್ರಯೋಜನವಿಲ್ಲ. ಜೂನ್- ಜುಲೈ ತಿಂಗಳಲ್ಲಿ ಜಲಾನಯನ ಪ್ರದೇಶದಲ್ಲಿ ಮಳೆಯಾದರೆ ಅಣೆಕಟ್ಟೆಗಳು ತುಂಬುತ್ತವೆ ಎಂದು ಪಾಲಿಕೆ ಮೂಲಗಳ ವಿವರಣೆ.

ಸೌರಾಷ್ಟ್ರದ ಅತ್ಯಂತ ಪ್ರಮುಖ ನಗರ ರಾಜ್‌ಕೋಟ್. ಜನಸಂಖ್ಯೆ ಸುಮಾರು 13 ಲಕ್ಷ. ನಗರಕ್ಕೆ ಪ್ರತಿನಿತ್ಯ 16 ದಶಲಕ್ಷ ಲೀಟರ್ ನೀರು ಬೇಕು. ಸಿಗುತ್ತಿರುವುದು 10 ದಶಲಕ್ಷ ಲೀಟರ್ ಮಾತ್ರ. ಲಭ್ಯವಿರುವ ನೀರನ್ನೇ ಎಚ್ವರಿಕೆಯಿಂದ ಬಳಸಲಾಗುತ್ತಿದೆ. ಬಿಕ್ಕಟ್ಟು ಸಮರ್ಥವಾಗಿ ನಿರ್ವಹಿಸಲು `ಹಿರಿಯ ಅಧಿಕಾರಿಗಳ ಸಮಿತಿ' ರಚಿಸಲಾಗಿದೆ. ಈ ಸಮಿತಿ ಸತತ ಸಭೆ ಸೇರಿ ಪರಿಸ್ಥಿತಿ ಪರಿಶೀಲಿಸುತ್ತಿದೆ.

`ಅನೇಕ ಸಲ ಸೌರಾಷ್ಟ್ರ ಬರಗಾಲಕ್ಕೆ ಸಿಕ್ಕಿದೆ. 85ರಿಂದ ಮೂರು ವರ್ಷ ಮಳೆ ಬರದೆ ಸಮಸ್ಯೆಯಾದಾಗ ಗಾಂಧಿ ನಗರದಿಂದ ರೈಲು ಮತ್ತು ಟ್ಯಾಂಕರ್‌ಗಳಲ್ಲಿ ನೀರು ಪೂರೈಸಲಾಗಿದೆ. 2002ರಲ್ಲೂ ಇದೇ ರೀತಿಯ ಪರಿಸ್ಥಿತಿ ಸೃಷ್ಟಿಯಾಗಿತ್ತು' ಎಂದು ರಾಜ್‌ಕೋಟ್‌ನ ವಿಜಯ್‌ಸಿಂಗ್ ಇತಿಹಾಸದ ಪುಟಗಳನ್ನು ತಿರುವಿದರು.

ನೀರು ಖರೀದಿಗೆ ಪ್ರತ್ಯೇಕ ಬಜೆಟ್: `ಪ್ರತಿ ಬೇಸಿಗೆಯಲ್ಲೂ ಪ್ರತಿ ಮನೆಯಲ್ಲೂ ನೀರು ಖರೀದಿಗೆ `ಪ್ರತ್ಯೇಕ ಬಜೆಟ್' ಇಡಬೇಕಾಗಿದೆ. ಒಂದೂವರೆಯಿಂದ ಎರಡು ಸಾವಿರ ರೂಪಾಯಿ ನೀರಿಗೇ ಬೇಕು. ಕೆಲವೊಮ್ಮೆ ಕಾಸು ಕೊಟ್ಟರೂ ನೀರು ಸಿಗುವುದಿಲ್ಲ' ಎಂದು ಅಶೋಕ್ ಮೆಹ್ತಾ ಪರಿಸ್ಥಿತಿ ವಿವರಿಸಿದರು.

`ಕೇಶುಭಾಯ್ ಪಟೇಲ್ ಮುಖ್ಯಮಂತ್ರಿ ಆಗಿದ್ದಾಗ ಕೆರೆ, ಕಟ್ಟೆಗಳ ಹೂಳು ತೆಗೆಸಿದ್ದಾರೆ. ಚೆಕ್ ಡ್ಯಾಮ್‌ಗಳನ್ನು ಮಾಡಿಸಿದ್ದಾರೆ. ಕೊಳವೆ ಬಾವಿಗಳ ಮರುಪೂರಣದಿಂದ ಅಲ್ಪಸ್ವಲ್ಪ ಅಂತರ್ಜಲ ಉಳಿದಿದೆ. ಆದರೆ, ಅನಂತರ ಕೇಶುಭಾಯ್ ಮಾಡಿದ ಕೆಲಸ ಮುಂದುವರಿಯಲಿಲ್ಲ' ಎಂಬ ದೂರುಗಳು ಲೆಕ್ಕವಿಲ್ಲ.

`ನರ್ಮದಾ ನೀರಾವರಿ ಯೋಜನೆ' 10 ಲಕ್ಷ ಎಕರೆ ಭೂಮಿಗೆ ನೀರು ಒದಗಿಸಲಿದೆ. ಎಲ್ಲ ಹಳ್ಳಿ ಮತ್ತು ಪಟ್ಟಣಗಳಿಗೂ ಕುಡಿಯುವ ನೀರು ಪೂರೈಸಲಿದೆ. ತಕ್ಷಣ ಯೋಜನೆ ಸಮೀಕ್ಷೆ ನಡೆಯಲಿದೆ. ಜೂನ್‌ನಿಂದ ಕಾಮಗಾರಿ ಆರಂಭವಾಗಲಿದೆ. `ನರೇಗ' ಯೋಜನೆಯಡಿ ಈ ಭಾಗದ ಎಲ್ಲ ಕೆರೆಕಟ್ಟೆಗಳ ಹೂಳೆತ್ತುವ ಕಾರ್ಯಕ್ರಮವಿದೆ ಎಂದು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.

`ಒಂದೂವರೆ ವರ್ಷದ ಹಿಂದಿನಿಂದಲೂ ಸರ್ಕಾರ ಯೋಜನೆ ಜಾರಿಗೆ ತಲೆಕೆಡಿಸಿಕೊಂಡಿದೆ. ಚುನಾವಣೆ ಸಮಯದಲ್ಲಿ ಪ್ರಕಟಿಸುತ್ತಿರುವುದಕ್ಕೆ ಬೇಸರವಾಗುತ್ತಿದೆ' ಎಂದು ಮೋದಿ ಸಾರ್ವಜನಿಕ ಸಮಾರಂಭದಲ್ಲಿ ಹೇಳಿದ್ದಾರೆ. ಮುಖ್ಯಮಂತ್ರಿ ಅವರ ವಿರೋಧಿಗಳು, `10 ಸಾವಿರ ಕೋಟಿ ಯೋಜನೆ ಹಿಂದೆ ರಾಜಕೀಯವಿದೆ' ಎಂದು ಟೀಕಿಸುತ್ತಿದ್ದಾರೆ.

ಚುನಾವಣಾ ಆಯೋಗಕ್ಕೆ ದೂರು: `ಸೌರಾಷ್ಟ್ರದಲ್ಲಿ ಕೇಶುಭಾಯ್ ಪ್ರಾಬಲ್ಯ ತಪ್ಪಿಸಲು ಮೋದಿ ತಂತ್ರ ರೂಪಿಸಿದ್ದಾರೆ' ಎಂದು ಪ್ರತಿಪಾದಿಸುತ್ತಿದ್ದಾರೆ. ನರ್ಮದಾ ನೀರಾವರಿ ಯೋಜನೆ ಪ್ರಕಟಿಸಿರುವ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡರು ರಾಜ್ಯ ಚುನಾವಣಾ ಆಯೋಗಕ್ಕೆ ದೂರಿದ್ದಾರೆ.

`ಮೋದಿ, ನೀರಾವರಿ ಸಚಿವರ ಭಾವಚಿತ್ರಗಳಿರುವ ನರ್ಮದಾ ನೀರಾವರಿ ಯೋಜನೆ ಕಿರುಹೊತ್ತಿಗೆಗಳನ್ನು ಸೌರಾಷ್ಟ್ರದ ಎಲ್ಲ ಜಿಲ್ಲೆಗಳಲ್ಲೂ ಹಂಚಲಾಗುತ್ತಿದೆ' ಎಂದು ಆರೋಪ ಮಾಡಿದ್ದಾರೆ.

ಸೌರಾಷ್ಟ್ರದಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ಮೋದಿ, `ನೀರಾವರಿ ಯೋಜನೆ ಜಾರಿಗೆ ಕಾಂಗ್ರೆಸ್ ಸಹಕರಿಸುತ್ತಿಲ್ಲ. ದುರುದ್ದೇಶದಿಂದ ಅಡ್ಡಗಾಲು ಹಾಕುತ್ತಿದೆ' ಎಂದು ಪ್ರಚಾರ ಮಾಡುತ್ತಿದ್ದಾರೆ. ಗುರುವಾರ ರಾಜ್‌ಕೋಟ್‌ನ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ  ಕಾಂಗ್ರೆಸ್ ಪಕ್ಷವನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. `ನನ್ನ ಕನಸಿನ ಯೋಜನೆ ಜಾರಿಗೆ ಸಾರ್ವಜನಿಕರು ಸಹಕಾರ ಕೊಡಬೇಕು' ಎಂದು ಮನವಿ ಮಾಡಿದ್ದಾರೆ.
(ನಾಳಿನ ಸಂಚಿಕೆಯಲ್ಲಿ ಭಾಗ 4)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.