ADVERTISEMENT

ಸ್ಫೋಟದಲ್ಲಿ ಭಾಲ್ಕಿಯ ಕುಲಕರ್ಣಿ ಬಲಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2013, 19:59 IST
Last Updated 22 ಫೆಬ್ರುವರಿ 2013, 19:59 IST
ಹೈದರಾಬಾದ್‌ನಲ್ಲಿ ಗುರುವಾರ ರಾತ್ರಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಬೀದರ್ ಜಿಲ್ಲೆ ಭಾಲ್ಕಿಯ ಭಾಟಸಾಂಗವಿಯ ಪದ್ಮಾಕರ ಕುಲಕರ್ಣಿ (ಒಳಚಿತ್ರ) ಅವರ ಶವವನ್ನು ಶುಕ್ರವಾರ ಮಧ್ಯಾಹ್ನ ಹುಟ್ಟೂರಿಗೆ ತರಲಾಯಿತು
ಹೈದರಾಬಾದ್‌ನಲ್ಲಿ ಗುರುವಾರ ರಾತ್ರಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಬೀದರ್ ಜಿಲ್ಲೆ ಭಾಲ್ಕಿಯ ಭಾಟಸಾಂಗವಿಯ ಪದ್ಮಾಕರ ಕುಲಕರ್ಣಿ (ಒಳಚಿತ್ರ) ಅವರ ಶವವನ್ನು ಶುಕ್ರವಾರ ಮಧ್ಯಾಹ್ನ ಹುಟ್ಟೂರಿಗೆ ತರಲಾಯಿತು   

ಭಾಲ್ಕಿ: ನೆರೆಯ ಹೈದರಾಬಾದ್‌ನಲ್ಲಿ ಗುರುವಾರ  ರಾತ್ರಿ  ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಭಾಲ್ಕಿ ತಾಲ್ಲೂಕಿನ ಭಾಟಸಾಂಗವಿಯ ಪದ್ಮಾಕರ ನಾರಾಯಣರಾವ ಕುಲಕರ್ಣಿ (40) ಎಂಬುವವರು ಮೃತಪಟ್ಟಿದ್ದಾರೆ. ಇವರು ಉದ್ಯೋಗ ಹುಡುಕಿಕೊಂಡು 15 ದಿನಗಳ ಹಿಂದೆಯಷ್ಟೇ  ಹೈದರಾಬಾದ್‌ಗೆ ತೆರಳಿದ್ದರು.

ಪದ್ಮಾಕರ ಅವರಿಗೆ ಪತ್ನಿ, ಮೂವರು ಪುತ್ರಿಯರು, ಒಬ್ಬರು ಪುತ್ರ ಇದ್ದಾರೆ. ಕೂಲಿ ಕೆಲಸ ಹುಡುಕಿಕೊಂಡು ಹೈದರಾಬಾದ್‌ಗೆ ಹೋಗಿದ್ದ ಇವರು ಅಡುಗೆ ಕೆಲಸದ ಅನುಭವ ಇದ್ದುದರಿಂದ ಬೇಕರಿಯೊಂದರಲ್ಲಿ ಜಿಲೇಬಿ ಮಾಡಲು ಸೇರಿದ್ದರು. ದಿನವೊಂದಕ್ಕೆ ್ಙ 150  ಕೂಲಿ ನಿಗದಿಯಾಗಿತ್ತು ಎಂದು ತಿಳಿದು ಬಂದಿದೆ. 

ಗುರುವಾರ ರಾತ್ರಿ ಹೈದರಾಬಾದ್‌ನ ದಿಲ್‌ಸುಖ್ ನಗರದಲ್ಲಿರುವ ಆನಂದ ಟಿಫಿನ್ ಸೆಂಟರ್‌ನಲ್ಲಿ ಚಹಾ ಕುಡಿದು ಹೊರಗೆ ಬರುತ್ತಿದ್ದ ಸಂದರ್ಭದಲ್ಲಿ ಅಲ್ಲಿ ಉಗ್ರರು ಇಟ್ಟಿದ್ದ ಬಾಂಬ್ ಸ್ಫೋಟಗೊಂಡಿದೆ. ಹೈದರಾಬಾದ್‌ನಲ್ಲೇ ವಾಸವಿರುವ ಅವರ ಸಹೋದರಿ ಸುಧಾ ಜೋಶಿ ಹೊತ್ತು ಕಳೆದರೂ ಸಹೋದರ ಮನೆಗೆ ಬಾರದುದರಿಂದ ಸಹೋದರನನ್ನು ಅರಸುತ್ತಾ ಉಸ್ಮಾನಿಯಾ ಆಸ್ಪತ್ರೆಗೆ ಧಾವಿಸಿದ್ದರು. ಅಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಹೆಣಗಳ ರಾಶಿಯಲ್ಲಿ  ಅಣ್ಣ ಹೆಣವೂ ಇರುವುದನ್ನು ಗುರುತಿಸಿದ್ದಾರೆ. ನಂತರ ಭಾಲ್ಕಿ ಮತ್ತು ಭಾಟಸಾಂಗವಿಗೆ ಮಾಹಿತಿ ಬಂತು.

ಅದನ್ನು ಅನುಸರಿಸಿ  ಪದ್ಮಾಕರ ಅವರ ಸಹೋದರರು ಮತ್ತು ಸಂಬಂಧಿಗಳು ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಇನ್ನಿತರ ಗುರುತು ದಾಖಲೆಗಳೊಂದಿಗೆ ಶುಕ್ರವಾರ ಮುಂಜಾನೆ ತೆರಳಿದರು.

ಪರಿಶೀಲನೆ, ಶವಪರೀಕ್ಷೆ ಬಳಿಕ ಪೊಲೀಸರು ವಾರಸುದಾರರಿಗೆ ಶವವನ್ನು ಒಪ್ಪಿಸಿದರು. ಶವವನ್ನು ಶುಕ್ರವಾರ  ಮಧ್ಯಾಹ್ನ ಭಾಟಸಾಂಗವಿಗೆ ತರುತ್ತಲೇ ಕುಟುಂಬದವರ ರೋದನ ಮುಗಿಲು ಮುಟ್ಟಿತ್ತು. ಗ್ರಾಮದಲ್ಲಿಯೂ ಶೋಕದ ವಾತಾವರಣ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.