ADVERTISEMENT

ಸ್ವದೇಶ: ಸಂಕ್ಷಿಪ್ತ ಸುದ್ದಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 19:30 IST
Last Updated 6 ಅಕ್ಟೋಬರ್ 2012, 19:30 IST

ಮಂಗಳೂರಿನಿಂದ ಕೊಲ್ಲಿ ರಾಷ್ಟ್ರಗಳಿಗೆ ವಿಮಾನ
ಕೊಚ್ಚಿ (ಪಿಟಿಐ): ಕೇರಳ ಮತ್ತು ಮಂಗಳೂರು ವಿಮಾನ ನಿಲ್ದಾಣಗಳಿಂದ ಕೊಲ್ಲಿ ರಾಷ್ಟ್ರಗಳಿಗೆ ಅಕ್ಟೋಬರ್ 28ರಿಂದ ಹೆಚ್ಚುವರಿಯಾಗಿ 27 ವಿಮಾನ ಸೇವೆ ಆರಂಭಿಸುವುದಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ (ಎಐಇ) ತಿಳಿಸಿದೆ.

ಕೇರಳ ಮತ್ತು ಮಂಗಳೂರಿನಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ವಾರದಲ್ಲಿ ಈಗಿರುವ 92ರಿಂದ 119 ವಿಮಾನ ಹಾರಾಟ ಸೇವೆ ಹೆಚ್ಚಿಸಲಾಗುವುದು ಎಂದು ಘೋಷಿಸಿದೆ.

ಕಾಂಡ ವಿರುದ್ಧ ದೋಷಾರೋಪ
ನವದೆಹಲಿ (ಪಿಟಿಐ): ಮಾಜಿ ಗಗನ ಸಖಿ ಗೀತಿಕಾ ಶರ್ಮ ಆತ್ಮಹತ್ಯೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಈ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಿದ್ದಕ್ಕಾಗಿ ಹರಿಯಾಣದ ಮಾಜಿ ಸಚಿವ ಗೋಪಾಲ್ ಕಾಂಡ ಹಾಗೂ ಅವರ ಎಂಡಿಎಲ್‌ಆರ್ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಅರುಣಾ ಛಡ್ಡಾ ವಿರುದ್ಧವೂ ದೋಷಾರೋಪ ಸಲ್ಲಿಸಲಾಗಿದೆ. ಸದ್ಯ ಇವರಿಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಕಡಲ್ಗಳ್ಳರಿಂದ ಬಿಡಿಸಲು ನಾವಿಕರ ಮನವಿ
ನವದೆಹಲಿ (ಪಿಟಿಐ): ಸೋಮಾಲಿಯಾ ಕಡಲ್ಗಳ್ಳರಿಂದ ಎರಡು ವರ್ಷಗಳ ಹಿಂದೆ ಅಪಹರಣಕ್ಕೆ ಒಳಗಾಗಿ ಒತ್ತೆಯಾಳುಗಳಾಗಿದ್ದ ನಾವಿಕರ ಗುಂಪೊಂದು ಸೆರೆಯಿಂದ  ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.

ಸರಕು ಸಾಗಣೆ ಹಡಗು ಮತ್ತು ಎಮ್.ವಿ. ಅಸ್ಫಾಲ್ಟ್ ವೆಂಚರ್‌ನಿಂದ ಒತ್ತೆಯಾಳುಗಳಾಗಿ ಸೆರೆ ಸಿಕ್ಕಿದ್ದ ನಾವಿಕರು ಅಂತರಜಾಲದಲ್ಲಿ ಮನವಿ ಮಾಡಿಕೊಂಡಿರುವ ವಿಡಿಯೊವೊಂದನ್ನು ಹರಿಯಬಿಟ್ಟಿದ್ದಾರೆ.

ಮೊಳಗಿದ ಎಚ್ಚರಿಕೆ ಗಂಟೆ ವಿಮಾನ ವಾಪಸ್
ಚೆನ್ನೈ/ನವದೆಹಲಿ (ಪಿಟಿಐ): ಹೊಗೆ ಕಾಣಿಸಿಕೊಂಡ ಎಚ್ಚರಿಕೆಯ ಗಂಟೆ ಮೊಳಗಿದ ಹಿನ್ನೆಲೆಯಲ್ಲಿ ಕೋಲ್ಕತ್ತಕ್ಕೆ ಹೊರಟಿದ್ದ ಇಂಡಿಗೊ ಪ್ರಯಾಣಿಕ ವಿಮಾನವು ಚೆನ್ನೈನಿಂದ ಪ್ರಯಾಣ ಬೆಳೆಸಿದ 23 ನಿಮಿಷದ ಬಳಿಕ ಮತ್ತೆ ನಿಲ್ದಾಣಕ್ಕೆ ಮರಳಿದ ಘಟನೆ ನಡೆದಿದೆ.

ಯುಪಿಎ ಆರ್ಥಿಕ ಸುಧಾರಣೆಗೆ ವಿರೋಧ
ಚೆನ್ನೈ (ಪಿಟಿಐ): ಯುಪಿಎ ಸರ್ಕಾರ ಎರಡನೇ ಬಾರಿ ಘೋಷಿಸಿರುವ ಆರ್ಥಿಕ ಸುಧಾರಣೆಯನ್ನು ಟೀಕಿಸಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, `ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ತನ್ನ ಮೇಲಿರುವ ಭ್ರಷ್ಟಾಚಾರದ ಆರೋಪಗಳನ್ನು ಮರೆಸಿ ಜನರನ್ನು ದಿಕ್ಕು ತಪ್ಪಿಸುವ ಹುನ್ನಾರವಿದು~ ಎಂದು ವ್ಯಂಗ್ಯವಾಡಿದ್ದಾರೆ.

ನಿರುದ್ಯೋಗಕ್ಕೆ ದಾರಿ (ಪಟ್ನಾ ವರದಿ):  `ಬಹು ಬ್ರಾಂಡ್ ಚಿಲ್ಲರೆ ವಲಯದಲ್ಲಿ ಎಫ್‌ಡಿಐಗೆ ಅವಕಾಶ ನೀಡಿರುವುದರಿಂದ ಎಲ್ಲೆಡೆ ನಿರುದ್ಯೋಗ ಸೃಷ್ಟಿಯಾಗುತ್ತದೆ~ ಎಂದು ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಹೇಳಿದ್ದಾರೆ.

ಇಬ್ಬಗೆಯ ನೀತಿ (ಹೈದರಾಬಾದ್ ವರದಿ): `ಎಫ್‌ಡಿಐ ವಿಷಯದಲ್ಲಿ ಕಾಂಗ್ರೆಸ್ ಪಕ್ಷವು ಇಬ್ಬಗೆಯ ನೀತಿ ಅನುಸರಿಸುತ್ತಿದೆ~ ಎಂದಿರುವ ಬಿಜೆಪಿ ಮುಖಂಡ ವೆಂಕಯ್ಯನಾಯ್ಡು ಟೀಕಿಸಿದ್ದಾರೆ.

ಕಾರ್ಗಿಲ್, ಲಡಾಖ್‌ಗೆ ಶಿಂಧೆ ಭೇಟಿ
ಶ್ರೀನಗರ (ಪಿಟಿಐ): ಗೃಹ ಖಾತೆಯ ಅಧಿಕಾರ ವಹಿಸಿಕೊಂಡ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಶನಿವಾರ ಮೊದಲ ಭೇಟಿ ನೀಡಿದ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ, ಕಾರ್ಗಿಲ್ ಜಿಲ್ಲೆಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದರು.

ಸಚಿವರು ನಂತರ ಲಡಾಖ್ ಸ್ವಾಯತ್ತ ಗುಡ್ಡಗಾಡು ಅಭಿವೃದ್ಧಿ ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.