ADVERTISEMENT

ಸ್ವಿಸ್ ಬ್ಯಾಂಕ್ ಕಪ್ಪುಹಣಕ್ಕೆ ತೆರಿಗೆ:ಒಪ್ಪಂದ ಅಸಾಧ್ಯ ಎಂದ ಸಿಬಿಡಿಟಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2011, 19:30 IST
Last Updated 4 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ಸ್ವಿಸ್ ಬ್ಯಾಂಕುಗಳಲ್ಲಿ ಬ್ರಿಟಿಷರು ಇರಿಸಿರುವ ಕಪ್ಪುಹಣಕ್ಕೆ ತೆರಿಗೆ ವಿಧಿಸಲು ಅವಕಾಶ ನೀಡುವ ಒಪ್ಪಂದಕ್ಕೆ ಬ್ರಿಟನ್ ಮತ್ತು ಸ್ವಿಟ್ಜರ್‌ಲೆಂಡ್ ಸಹಿ ಹಾಕಿವೆ. ಆದರೆ ಅಂತಹ ಒಪ್ಪಂದ ಭಾರತ-ಸ್ವಿಟ್ಚರ್‌ಲೆಂಡ್ ನಡುವೆ ಏರ್ಪಡಲು ಸಾಧ್ಯವಿಲ್ಲ ಎಂದು ಕೇಂದ್ರ ನೇರ ತೆರಿಗೆ ಮಂಡಲಿ (ಸಿಬಿಡಿಟಿ) ಹೇಳಿದೆ.
`ಸ್ವಿಟ್ಜರ್‌ಲೆಂಡ್ ಮತ್ತು ಭಾರತ ಅಂತಹ ಒಪ್ಪಂದಕ್ಕೆ ಸಹಿ ಹಾಕಲು ಪ್ರಸ್ತುತ ಸನ್ನಿವೇಶ ಪೂರಕವಾಗಿಲ್ಲ~ ಎಂದು ಸಿಬಿಡಿಟಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬ್ರಿಟನ್ ಒಪ್ಪಂದ ಮಾಡಿಕೊಂಡಿರುವುದರಿಂದ ಈಗ ಆ ರಾಷ್ಟ್ರದ ಪ್ರಜೆಗಳು ಠೇವಣಿ ಇರಿಸುವ ಕಪ್ಪುಹಣಕ್ಕೆ ಸ್ವಿಟ್ಜರ್‌ಲೆಂಡ್ ತೆರಿಗೆ ಹಾಕಲಿದೆ. ಆದರೆ ಅದೇ ವೇಳೆ ಖಾತೆದಾರರ ಗೋಪ್ಯತೆ ಕಾಪಾಡಲು ಕೂಡ ಈ ಒಪ್ಪಂದ ಅವಕಾಶ ಕಲ್ಪಿಸುತ್ತದೆ.
 
ಹೀಗೆ ಸಂಗ್ರಹಿಸಿದ ತೆರಿಗೆಯಲ್ಲಿ ನಿಗದಿಯಾದ ಪಾಲನ್ನು ಸ್ವಿಟ್ಜರ್‌ಲೆಂಡ್ ಬ್ರಿಟನ್ನಿಗೆ ನೀಡಲಿದೆ. ಈಗಿನ ಅಂದಾಜಿನ ಪ್ರಕಾರ ಬ್ರಿಟನ್ನಿನ ಕಂದಾಯ ಮತ್ತು ಸುಂಕ ಇಲಾಖೆಗೆ ಇದರಿಂದ ವರ್ಷಕ್ಕೆ 300ರಿಂದ 600 ಕೋಟಿ ಪೌಂಡ್ ಹಣ ಬರುವ ನಿರೀಕ್ಷೆ ಇದೆ.

ಇದಕ್ಕೆ ಮುನ್ನ ಜರ್ಮನಿ ಮತ್ತು ಸ್ವಿಟ್ಜರ್‌ಲೆಂಡ್ ಕೂಡ ಇದೇ ರೀತಿಯ ಒಪ್ಪಂದಕ್ಕೆ ಅಂಕಿತ ಹಾಕಿದ್ದವು.
ಭಾರತ- ಸ್ವಿಟ್ಜರ್‌ಲೆಂಡ್ ದುಪ್ಪಟ್ಟು ತೆರಿಗೆ ತಡೆ ಒಪ್ಪಂದಕ್ಕೆ (ಡಿಟಿಎಎ) ಕಳೆದ ವರ್ಷ ಆಗಸ್ಟ್‌ನಲ್ಲಿ ಸಹಿ ಹಾಕಿದ್ದು, ಇದಿನ್ನೂ ಅನುಷ್ಠಾನಕ್ಕೆ ಬರಬೇಕಾಗಿದೆ. ಇದರ ಅನ್ವಯ, ನಿರ್ದಿಷ್ಟ ಪ್ರಕರಣಗಳಲ್ಲಿ, ಭಾರತವು ಕೆಲವು ಖಾತೆಗಳ ಬಗ್ಗೆ ಸ್ವಿಟ್ಜರ್‌ಲೆಂಡ್‌ನಿಂದ ಮಾಹಿತಿಯನ್ನಷ್ಟೇ ಪಡೆಯಬಹುದಾಗಿದೆ. 2011ರ ಏಪ್ರಿಲ್ 1ರಿಂದ ಪೂರ್ವಾನ್ವಯವಾಗಿ ಈ ಒಪ್ಪಂದ ಜಾರಿಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.