
ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಲ್ಲಿ ಭಾಗಿಯಾಗಿದ್ದ ಮೂವರು ಅಪರಾಧಿಗಳನ್ನು ಬಿಡುಗಡೆ ಮಾಡುವ ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ಗುರುವಾರ ತಡೆ ನೀಡಿದೆ.
ರಾಜ್ಯ ಸರ್ಕಾರದ ತೀರ್ಮಾನ ಪ್ರಶ್ನಿಸಿ ಕೇಂದ್ರ ಸರ್ಕಾರ ಕೋರ್ಟ್‌ನ ಮೊರೆ ಹೋಗಿತ್ತು. ತಮಿಳುನಾಡು ಸರ್ಕಾರ ಈ ಪ್ರಕರಣದಲ್ಲಿ ಒಟ್ಟು 7 ಅಪರಾಧಿಗಳ ಬಿಡುಗಡೆಗೆ ನಿರ್ಧರಿಸಿತ್ತು.
ಕೋರ್ಟ್ ಫೆಬ್ರುವರಿ 18ರಂದು ಗಲ್ಲು ಶಿಕ್ಷೆಯಿಂದ ಜೀವಾವಧಿಗೆ ಪರಿವರ್ತನೆಗೊಳಿಸಿದ್ದ ಮುರುಗನ್, ಶಾಂತನ್ ಮತ್ತು ಪೇರರಿವಾಳನ್ ಹೆಸರು ಮಾತ್ರ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯಲ್ಲಿ ಇದೆ. ಹಾಗಾಗಿ ಈ ತಡೆಯಾಜ್ಞೆ ಇವರಿಗೆ ಮಾತ್ರ ಅನ್ವಯವಾಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ, ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್ ಮತ್ತು ಎನ್.ವಿ. ರಮಣ ಅವರ ಪೀಠ ಹೇಳಿದೆ. ಆದರೆ ಇನ್ನುಳಿದ ನಾಲ್ವರ (ನಳಿನಿ, ರಾಬರ್ಟ್ ಪಯಸ್, ಜಯಕುಮಾರ್ ಮತ್ತ ರವಿಚಂದ್ರನ್) ಬಿಡುಗಡೆ ಪ್ರಶ್ನಿಸಿ ಪ್ರತ್ಯೇಕ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡಿದೆ.
ಬಿಡುಗಡೆ ನಿರ್ಧಾರಕ್ಕೆ ಮುನ್ನ ರಾಜ್ಯ ಸರ್ಕಾರ ಅಗತ್ಯ ಪ್ರಕ್ರಿಯೆಗಳನ್ನು ಅನುಸರಿಸಿಲ್ಲ ಎಂದು ಅದು ಅಭಿಪ್ರಾಯಪಟ್ಟಿದ್ದು, ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ.
ರಾಜ್ಯ ಸರ್ಕಾರ ನಿಯಮ ಪಾಲಿಸಿಲ್ಲ ಎಂಬ ಬಗ್ಗೆ ಕೇಂದ್ರ ಸರ್ಕಾರ ಎತ್ತಿರುವ ಪ್ರಶ್ನೆಗಳನ್ನು ಪರಿಶೀಲನೆಗೆ ಒಳಪಡಿಸಲಾಗುವುದು ಎಂದು

ಪೀಠ ಹೇಳಿದೆ.
ಅಲ್ಲದೆ ಶಿಕ್ಷೆಯನ್ನು ಕಡಿತಗೊಳಿಸುವ ರಾಜ್ಯ ಸರ್ಕಾರದ ಅಧಿಕಾರವನ್ನು ಮೊಟಕುಗೊಳಿಸುತ್ತಿಲ್ಲ ಎಂಬುದನ್ನು ಪೀಠ ಸ್ಪಷ್ಟಪಡಿಸಿದೆ. ಕೇಂದ್ರದ ಅರ್ಜಿಗೆ ಮಾರ್ಚ್ 6 ರೊಳಗೆ ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರ ಮತ್ತು ಮೂವರು ಕೈದಿಗಳಿಗೆ ಸೂಚಿಸಿದೆ.
ಕೇಂದ್ರದ ಅರ್ಜಿ: ಕ್ಷಮಾ ಅರ್ಜಿಯ ಬಗ್ಗೆ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬವಾಗಿದೆ ಎಂಬ ಕಾರಣಕ್ಕೆ ರಾಜೀವ್ ಹಂತಕರ ಗಲ್ಲು ಶಿಕ್ಷೆಯನ್ನು ಜೀವಾವಧಿಯಾಗಿ ಪರಿವರ್ತಿಸಿರುವುದರ ವಿರುದ್ಧ ಕೇಂದ್ರ ಸರ್ಕಾರ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಲಿದೆ. ಇದರ ತೀರ್ಪು ಹೊರಬರುವವರೆಗೆ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕು ಎಂದು ಸಾಲಿಸಿಟರ್ ಜನರಲ್ ಮೋಹನ್ ಪರಾಶರನ್ ವಿನಂತಿಸಿಕೊಂಡರು. ಇದನ್ನು ತಮಿಳುನಾಡು ಬಲವಾಗಿ ವಿರೋಧಿಸಿತು.
ಇನ್ನಷ್ಟು ಸುದ್ದಿ...
*ವೆಲ್ಲೂರು ಜೈಲಿನಲ್ಲಿ ನಿರಾಸೆಯ ಕಾರ್ಮೋಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.