ADVERTISEMENT

ಹಗರಣಗಳ ತನಿಖೆಗೆ ಪ್ರತ್ಯೇಕ ಜೆಪಿಸಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 17:35 IST
Last Updated 15 ಫೆಬ್ರುವರಿ 2011, 17:35 IST
ಹಗರಣಗಳ ತನಿಖೆಗೆ ಪ್ರತ್ಯೇಕ ಜೆಪಿಸಿ
ಹಗರಣಗಳ ತನಿಖೆಗೆ ಪ್ರತ್ಯೇಕ ಜೆಪಿಸಿ   

ಕೋಲ್ಕತ್ತ (ಪಿಟಿಐ): 2 ಜಿ ತರಂಗಾಂತರ, ಕಾಮನ್‌ವೆಲ್ತ್ ಕ್ರೀಡಾಕೂಟ, ಮುಂಬೈನ ಆದರ್ಶ ವಸತಿ ಹಗರಣ ಒಳಗೊಂಡಂತೆ ಇತ್ತೀಚೆಗೆ ಬಯಲಿಗೆ ಬಂದ ಎಲ್ಲ ಹಗರಣಗಳ ತನಿಖೆಗೆ ಪ್ರತ್ಯೇಕ ಜಂಟಿ ಸಂಸದರ ಸಮಿತಿ (ಜೆಪಿಸಿ) ರಚಿಸಬೇಕು ಎಂದು ಒತ್ತಾಯಿಸಿರುವ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು, ಮನಮೋಹನ್ ಸಿಂಗ್‌ರನ್ನು ರಾಷ್ಟ್ರ ಕಂಡ ಅತಿ ದುರ್ಬಲ ಪ್ರಧಾನಿ ಎಂದು ಕಟುವಾಗಿ ಟೀಕಿಸಿದ್ದಾರೆ.

ಮುಂದಿನ ವಾರ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಪ್ರಧಾನಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಟಿ.ವಿ. ಸಂಪಾದಕರನ್ನು ಭೇಟಿ ಮಾಡಲಿದ್ದು, ಅದಕ್ಕೆ ಮುನ್ನ ಅಡ್ವಾಣಿ ಟೀಕಾಪ್ರಹಾರ ಮಾಡಿದ್ದಾರೆ.

ದುರ್ಬಲ ಪ್ರಧಾನಿಗೆ ಭ್ರಷ್ಟಾಚಾರದ ವಿರುದ್ಧವಾಗಲೀ, ಕಪ್ಪು ಹಣದ ವಿರುದ್ಧವಾಗಲೀ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.  2 ಜಿ ತರಂಗಾಂತರ ಹಗರಣದಲ್ಲಿ ಭಾಗಿಯಾದವರನ್ನು ರಕ್ಷಿಸುವ ಸಲುವಾಗಿಯೇ ಸರ್ಕಾರ ಜೆಪಿಸಿ ತನಿಖೆಗೆ ಹಿಂದೇಟು ಹಾಕುತ್ತಿದೆ ಎಂದ ಅವರು ಸತ್ವಹೀನ ಮನಮೋಹನ್‌ರನ್ನು ನೋಡಿದರೆ ತಮಗೆ ಕನಿಕರ ಮೂಡುತ್ತಿದೆ ಎಂದರು.

ADVERTISEMENT

ಹಣದುಬ್ಬರ ನಿಯಂತ್ರಿಸಲು ಸರ್ಕಾರ ಸಫಲವಾಗಿಲ್ಲ. ಈ ಸರ್ಕಾರದಿಂದ ಜನಸಾಮಾನ್ಯರ ಬದುಕು ದುರ್ಬರವಾಗಿದೆ. ಒಂದೊಮ್ಮೆ ಕೇರಳ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಈ ಪಕ್ಷ ಅಧಿಕಾರ ಹಿಡಿದಿದ್ದೇ ಆದರೆ ಆ ರಾಜ್ಯಗಳು ಅಧೋಗತಿಗೆ ಇಳಿಯುತ್ತವೆ ಎಂದು ಅಡ್ವಾಣಿ ಟೀಕಿಸಿದರು.

ದೇಶದ ಉದ್ದಗಲ ಒಂದು ಲಕ್ಷಕ್ಕೂ ಅಧಿಕ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗಿದೆ ಎಂಬ ಆರೋಪಗಳ ಬಗ್ಗೆ ಯುಪಿಎ ಸರ್ಕಾರ ಸ್ಪಷ್ಟನೆ ನೀಡಿ ಜನರ ಮನದಲ್ಲಿರುವ ಸಂಶಯ ನಿವಾರಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ದೂರವಾಣಿ ಕದ್ದಾಲಿಸಿರುವುದು ಅತ್ಯಂತ ಕಳವಳದ ವಿಚಾರ. ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದರ ಸಂಕೇತ ಇದು. ಭದ್ರತಾ ಕಾರಣಕ್ಕೆ ಇಂತಹ ಕದ್ದಾಲಿಕೆ ಮಾಡಿದ್ದರೆ ಅದನ್ನು ಸಾಬೀತುಪಡಿಸಬೇಕು, ಜತೆಗೆ ಎಷ್ಟು ದೂರವಾಣಿಗಳಿಗೆ ಕಳ್ಳಗಿವಿ ಇರಿಸಲಾಗಿದೆ ಎಂಬ ನಿಖರವಾರ ಮಾಹಿತಿ ನೀಡಬೇಕು’ ಎಂದು  ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಮಂಗಳವಾರ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

‘ಭದ್ರತೆಗೆ ಅಪಾಯ ಸಂಭವಿಸಿದಾಗ ಮತ್ತು ಗಂಭೀರ ಅಪರಾಧ ಎಸಗಿದ ಸಂದರ್ಭದಲ್ಲಿ ಮಾತ್ರ ದೂರವಾಣಿ ಕದ್ದಾಲಿಸಬಹುದು ಎಂದು ದೇಶದ ಕಾನೂನು ಹೇಳುತ್ತದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ದೂರವಾಣಿಗಳಿಗೆ ಕಳ್ಳಗಿವಿ ಇಡಲಾಗಿದೆ. ಅಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಜತೆ ಜತೆಯಲ್ಲೇ ಕದ್ದಾಲಿಸಿರುವ ಸಾಧ್ಯತೆ ಕಾಣಿಸುತ್ತದೆ. ಇದಕ್ಕೆಲ್ಲ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.