ADVERTISEMENT

'ಹಣತೆ ಎಲ್ಲೇ ಹೋದರೂ ಅದು ಬೆಳಕು ಬೀರುತ್ತಿರುತ್ತದೆ': ಶ್ರೇಷ್ಠಾ ಠಾಕೂರ್

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 13:41 IST
Last Updated 3 ಜುಲೈ 2017, 13:41 IST
ಕೃಪೆ: ಫೇಸ್‍ಬುಕ್
ಕೃಪೆ: ಫೇಸ್‍ಬುಕ್   

ಲಖನೌ:  ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ಬಿಜೆಪಿ ನಾಯಕರೊಬ್ಬರು ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಿದ್ದಕ್ಕೆ ಎತ್ತಂಗಡಿಯಾದ ಮಹಿಳಾ ಪೊಲೀಸ್ ಅಧಿಕಾರಿ ಶ್ರೇಷ್ಠಾ ಠಾಕೂರ್ ಇದು ನನ್ನ ಉತ್ತಮ ಕೆಲಸಕ್ಕೆ ಸಂದ ಗೌರವ ಎಂದು ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ.

ನನಗೆ ಭಹರೈಚ್‍ಗೆ ವರ್ಗವಾಗಿದೆ. ಅದು ನೇಪಾಳದ ಗಡಿ ಭಾಗದಲ್ಲಿದೆ. ನೀವೇನೂ ಬೇಸರ ಮಾಡಿಕೊಳ್ಳಬೇಡಿ. ನಾನು ಖುಷಿಯಾಗಿದ್ದೇನೆ. ಈ ವರ್ಗಾವಣೆಯನ್ನು ನಾನು ನನ್ನ ಕೆಲಸಕ್ಕೆ ಸಂದ ಗೌರವ ಎಂದು ಭಾವಿಸಿದ್ದೇನೆ. ನಿಮಗೆಲ್ಲರಿಗೂ ಭಹರೈಚ್‍ಗೆ ಸ್ವಾಗತ ಎಂದು ಇಂಗ್ಲಿಷಿನಲ್ಲಿ ಸ್ಟೇಟಸ್ ಹಾಕಿರುವ ಶ್ರೇಷ್ಠಾ 'ಹಣತೆ ಎಲ್ಲೇ ಹೋದರು ಬೆಳಕು ಬೀರುತ್ತದೆ, ಅದಕ್ಕೆ ನಿರ್ದಿಷ್ಟ ವಿಳಾಸವೆಂಬುದು ಇರುವುದಿಲ್ಲ' ಎಂದು ಉರ್ದು ಕವಿ ವಸೀಂ ಬರೇಲ್ವಿ ಅವರ ಕವಿತೆಯ ಎರಡು ಸಾಲುಗಳನ್ನು ಉಲ್ಲೇಖಿಸಿದ್ದಾರೆ.

ಉತ್ತರಪ್ರದೇಶ ಸರ್ಕಾರ ಶ್ರೇಷ್ಠಾ ಅವರನ್ನು ಶನಿವಾರ ಎತ್ತಂಗಡಿ ಮಾಡಿತ್ತು. ಸಂಚಾರ ನಿಯಮ ಉಲ್ಲಂಘಿಸಿದ್ದು ಮಾತ್ರವಲ್ಲದೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಕ್ಕಾಗಿ ಅಲ್ಲಿನ ಸ್ಥಳೀಯ ಬಿಜೆಪಿ ಮುಖಂಡ ಮತ್ತು  ಐವರು ಕಾರ್ಯಕರ್ತರನ್ನು ಶ್ರೇಷ್ಠಾ  ಕಳೆದ ವಾರ ಜೈಲಿಗಟ್ಟಿದ್ದರು.ಈ ಪ್ರಕರಣ ನಡೆದ ಒಂದೇ ವಾರದಲ್ಲಿ ಶ್ರೇಷ್ಠಾ ಅವರನ್ನು ಬಹರೈಚ್ ಎಂಬಲ್ಲಿಗೆ ವರ್ಗ ಮಾಡಲಾಗಿದೆ.

ADVERTISEMENT

ಶ್ರೇಷ್ಠಾ ಅವರು ದಂಡ ವಿಧಿಸಿದ್ದ ಪ್ರಕರಣದ ಬಗ್ಗೆ ಬಿಜೆಪಿಯ 11 ಶಾಸಕರು ಮತ್ತು ಸಂಸದರು ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಅವರಿಗೆ ದೂರು ನೀಡಿದ್ದರು. ಬಿಜೆಪಿ ನಾಯಕರ ವಿರುದ್ಧ ಕ್ರಮ ತೆಗೆದುಕೊಂಡ ಪೊಲೀಸ್ ಅಧಿಕಾರಿಯನ್ನು ಎತ್ತಂಗಡಿ ಮಾಡಬೇಕೆಂದು ಈ ಶಾಸಕ, ಸಂಸದರು ಹೈಕಮಾಂಡ್ ಮೇಲೆ ಒತ್ತಡ  ಹೇರಿದ್ದರು ಎನ್ನಲಾಗಿದೆ.

‘ಶ್ರೇಷ್ಠಾ ಅವರು ಮುಖ್ಯಮಂತ್ರಿ ಆದಿತ್ಯನಾಥ ಮತ್ತು ಇತರ ನಾಯಕರ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಾರೆ. ಆ ಕಾರಣದಿಂದಲೇ ಅವರನ್ನು ಎತ್ತಂಗಡಿ ಮಾಡುವಂತೆ ಒತ್ತಾಯಿಸಿದ್ದೆವು’ ಎಂದು ಬಿಜೆಪಿ ನೇತಾರ ಮುಖೇಶ್ ಭಾರದ್ವಾಜ್ ಹೇಳಿದ್ದಾರೆ.

ಜೂನ್ 22ರಂದು ಠಾಕೂರ್ ಮತ್ತು ಇತರ ಪೊಲೀಸರು ಸೈನಾ ಪ್ರದೇಶದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆ ವೇಳೆ ಹೆಲ್ಮೆಟ್ ಧರಿಸದೆ ಬಂದ ಮೋಟಾರ್ ವಾಹನ ಸವಾರರೊಬ್ಬರಿಗೆ 200 ರೂಪಾಯಿ ದಂಡ ವಿಧಿಸಿದ್ದಾರೆ. ತಾವು ಬಿಜೆಪಿ ನಾಯಕ ಪ್ರಮೋದ್ ಕುಮಾರ್, ತಮ್ಮ ಪತ್ನಿ ಬುಲಂದ್‌ಶಹರ್ ಜಿಲ್ಲಾ ಪಂಚಾಯತ್ ಸದಸ್ಯೆ ಎಂದರೂ , ಪೊಲೀಸರು ಸುಮ್ಮನೆ ಬಿಡಲಿಲ್ಲ.

ಶ್ರೇಷ್ಠಾ ಅವರು ಬಿಜೆಪಿ ಕಾರ್ಯಕರ್ತರ ಜೊತೆ ನಡೆಸಿದ ಚರ್ಚೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಅದರಲ್ಲಿ ಶ್ರೇಷ್ಠಾ ಅವರು, ‘ನೀವು (ಬಿಜೆಪಿ ಕಾರ್ಯಕರ್ತರು) ನಿಮ್ಮ ಪಕ್ಷಕ್ಕೆ ಕೆಟ್ಟ ಹೆಸರು ತರುತ್ತಿದ್ದೀರಿ. ನೀವು ಹೀಗೆಯೇ ಮಾಡುತ್ತಿದ್ದರೆ ನಿಮ್ಮನ್ನು ಬಿಜೆಪಿ ಗೂಂಡಾಗಳು ಎಂದು ಕರೆಯುತ್ತಾರೆ’ ಎಂದು ಹೇಳಿರುವುದು ವಿಡಿಯೊದಲ್ಲಿ ಕೇಳಿಬಂದಿದೆ.

[related]

‘ಶನಿವಾರ 200 ಮಂದಿ ಪೊಲೀಸರನ್ನು ವರ್ಗ ಮಾಡಲಾಗಿದೆ. ಅವರ ಜೊತೆ ಶ್ರೇಷ್ಠಾ ಅವರ ಹೆಸರಿದ್ದು, ಇದು ಮಾಮೂಲಿ ವರ್ಗಾವಣೆ’ ಎಂದು ಗೃಹ ಇಲಾಖೆ ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.