ADVERTISEMENT

ಹಫೀಜ್‌ನನ್ನು ಕರೆಯಲೂ ಕಾಂಗ್ರೆಸ್‌ ಸಿದ್ಧ: ನಿತಿನ್ ಪಟೇಲ್‌

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 19:30 IST
Last Updated 24 ಅಕ್ಟೋಬರ್ 2017, 19:30 IST

ಅಹಮದಾಬಾದ್‌: ಸರ್ಕಾರ ರಚಿಸಲು ನೆರವಾಗುತ್ತದೆ ಎಂದಾದರೆ ಹಫೀಜ್‌ ಸಯೀದ್‌ನಂತಹ ಉಗ್ರರಿಗೂ ಆಹ್ವಾನ ನೀಡುವ ಮಟ್ಟಕ್ಕೆ ಕಾಂಗ್ರೆಸ್‌ ಹೋಗುತ್ತದೆ ಎಂದು ಗುಜರಾತ್‌ ಉಪ ಮುಖ್ಯಮಂತ್ರಿ ನಿತಿನ್‌ ಪಟೇಲ್‌ ಹೇಳಿದ್ದಾರೆ.

ಜಮಾತ್‌ ಉದ್‌ ದವಾ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥನಾಗಿರುವ ಹಫೀಜ್‌ 2008ರ ಮುಂಬೈ ದಾಳಿಯ ಮುಖ್ಯ ಸಂಚುಕೋರ. ಈತನ ತಲೆಗೆ ಅಮೆರಿಕ ಸರ್ಕಾರ 2014ರಲ್ಲಿ ಒಂದು ಕೋಟಿ ಡಾಲರ್‌ (ಸುಮಾರು ₹65 ಕೋಟಿ) ಬಹುಮಾನ ಘೋಷಿಸಿತ್ತು.

ಕ್ಷತ್ರಿಯ, ಹರಿಜನ, ಆದಿವಾಸಿ ಮತ್ತು ಮುಸ್ಲಿಂ ಸಮುದಾಯಗಳನ್ನು ಒಟ್ಟಾಗಿಸಲು ಪ್ರಯತ್ನಿಸುವ ಮೂಲಕ ಕಾಂಗ್ರೆಸ್‌ ಜಾತಿ ರಾಜಕಾರಣ ಮಾಡುತ್ತಿದೆ ಎಂದು ನಿತಿನ್‌ ಅವರು ಸೋಮವಾರ ಆರೋಪಿಸಿದ್ದರು. 1980ರ ದಶಕದಲ್ಲಿ ಆಗಿನ ಮುಖ್ಯಮಂತ್ರಿ ಮಾಧವಸಿಂಹ ಸೋಲಂಕಿ ಅವರೂ ಇದೇ ಜಾತಿ ಲೆಕ್ಕಾಚಾರ ಹಾಕಿದ್ದರು ಎಂದು ಅವರು ಹೇಳಿದ್ದರು.

ADVERTISEMENT

ಎಲ್ಲರ ಅಭಿವೃದ್ಧಿಯೇ ಬಿಜೆಪಿ ನೀತಿ. ಆದರೆ ಒಡೆದು ಆಳುವ ವಸಾಹತು ನೀತಿಯನ್ನು ಕಾಂಗ್ರೆಸ್‌ ಅನುಸರಿಸುತ್ತಿದೆ ಎಂದು ಅವರು ಆಪಾದಿಸಿದ್ದಾರೆ.

ಕಳೆದ ಒಂದೆರಡು ವಾರಗಳಲ್ಲಿ ಗುಜರಾತ್‌ ಸರ್ಕಾರ ಹಲವು ಯೋಜನೆಗಳನ್ನು ಪ್ರಕಟಿಸಿದೆ. ಅದನ್ನು ನಿತಿನ್‌ ಅವರು ಮುಂದುವರಿಸಿದ್ದಾರೆ. ಹನಿ ನೀರಾವರಿಗಾಗಿ ರೈತರು ಖರೀದಿಸುವ ಉಪಕರಣಗಳ ಮೇಲಿನ ಜಿಎಸ್‌ಟಿಯನ್ನು ಸರ್ಕಾರವೇ ಭರಿಸಲಿದೆ ಎಂದು ಅವರು ಘೋಷಿಸಿದ್ದಾರೆ. ಇಂತಹ ಉಪಕರಣಗಳ ಮೇಲೆ ಶೇ 18ರಷ್ಟು ಜಿಎಸ್‌ಟಿ ಇದೆ. ಹನಿ ನೀರಾವರಿ ಉಪಕರಣಗಳನ್ನು ಖರೀದಿಸುವಾಗ ಬುಡಕಟ್ಟು ರೈತರಿಗೆ ಶೇ 90 ಮತ್ತು ಇತರರಿಗೆ ಶೇ 80ರವರೆಗೆ ಸಹಾಯಧನ ನೀಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರ ಗೌರವಧನವನ್ನು ಶೇ 50ರಷ್ಟು ಹೆಚ್ಚಿಸುವುದಾಗಿಯೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.