ADVERTISEMENT

ಹರಿಯಾಣ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ನಿಧನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 19:30 IST
Last Updated 3 ಜೂನ್ 2011, 19:30 IST

ಹಿಸ್ಸಾರ್ (ಪಿಟಿಐ): ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಲೋಕಸಭಾ ಸದಸ್ಯ ಭಜನ್‌ಲಾಲ್ (81) ತೀವ್ರ ಹೃದಯಾಘಾತದಿಂದ ಶುಕ್ರವಾರ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ನಿಧನರಾದರು.

ಶುಕ್ರವಾರ ಮಧ್ಯಾಹ್ನ ಹೃದಯಾಘಾತಕ್ಕೆ ಒಳಗಾದ ಭಜನ್‌ಲಾಲ್ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಗುರಗಾಂವ್‌ಗೆ ಸಾಗಿಸಲು ಸಿದ್ಧತೆ ನಡೆಸುತ್ತಿದ್ದಾಗ ಮತ್ತೊಮ್ಮೆ ಹೃದಯಾಘಾತಕ್ಕೆ ಒಳಗಾದ ಅವರು ಸಂಜೆ 5 ಗಂಟೆಗೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅವರು ಪತ್ನಿ ಮತ್ತು ಮಾಜಿ ಶಾಸಕಿ ಜಸ್ಮಾ ದೇವಿ, ಪುತ್ರರಾದ ಮಾಜಿ ಉಪ ಮುಖ್ಯಮಂತ್ರಿ ಚಂದರ್ ಮೋಹನ್ ಹಾಗೂ ಶಾಸಕ ಕುಲದೀಪ್ ಬಿಷ್ಣೋಯ್ ಮತ್ತು ಮಗಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ.

ಮೂರು ಬಾರಿ ಹರಿಯಾಣದ ಮುಖ್ಯಮಂತ್ರಿಯಾಗಿ ಆಡಳಿತ ನಿರ್ವಹಿಸಿದ್ದ ಭಜನ್‌ಲಾಲ್ ಅವರು, 2009ರಲ್ಲಿ ಭೂಪಿಂದರ್ ಸಿಂಗ್ ಹೂಡ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಕಾಂಗ್ರೆಸ್ ಸಖ್ಯ ತ್ಯಜಿಸಿದ್ದರು. ತಮ್ಮ ಪುತ್ರ ಕುಲದೀಪ್ ಬಿಷ್ಣೋಯ್ ಸ್ಥಾಪಿಸಿದ ಹರಿಯಾಣ ಜನಹಿತ ಕಾಂಗ್ರೆಸ್-ಬಿಎಲ್ ಅಭ್ಯರ್ಥಿಯಾಗಿ ಅವರು ಕೊನೆಯ ಬಾರಿಗೆ ಹಿಸ್ಸಾರ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.